ಮಡಿಕೇರಿ, ಜೂ. 24: ಹಿರಿಯರ ವೃತ್ತಿಪರತೆ ಕಿರಿಯರಿಗೆ ಆದರ್ಶ ಪ್ರಾಯವಾಗಿದ್ದು, ಅಂತಹ ಹಿರಿಯರ ಸೇವೆಯನ್ನು ಕಿರಿಯರು ಅರ್ಥೈಸಿ ಕೊಂಡು ಮುನ್ನಡೆಯಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಕರೆ ನೀಡಿದರು. ವೀರಾಜಪೇಟೆಯ ಹಿರಿಯ ವಕೀಲ ಎಸ್.ಆರ್. ಜಗದೀಶ್ ಅವರು ತಮ್ಮ ವೃತ್ತಿ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ ಸಂದರ್ಭ, ಪಾಲಿಬೆಟ್ಟದ ಕೂರ್ಗ್ ಕ್ಲಿಫ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನ್ಯಾಯಾಧೀಶರು (ಮೊದಲ ಪುಟದಿಂದ) ವಕೀಲ ಎಸ್.ಆರ್. ಜಗದೀಶ್ ಅವರನ್ನು ಸನ್ಮಾನಿಸಿ ಮಾತನಾಡುತ್ತಾ, ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ನೂತನ ಆವಿಷ್ಕಾರಗಳಿಂದಾಗಿ ಈಗಿನ ಯುವ ವಕೀಲರಿಗೆ ಎಲ್ಲಾ ಅನುಕೂಲತೆಗಳು ಲಭಿಸುತ್ತಿವೆ. ಇದರ ಉಪಯೋಗದೊಂದಿಗೆ ಹಿರಿಯ ವಕೀಲರ ಮಾರ್ಗದರ್ಶನವನ್ನೂ ಯುವ ವಕೀಲರು ಪಡೆದುಕೊಳ್ಳಬೇಕು. ಹಿರಿಯ ವಕೀಲರ ಪರಿಶ್ರಮವನ್ನು ಕಿರಿಯ ವಕೀಲರು ಅರ್ಥೈಸಿ ಕೊಳ್ಳಬೇಕು. ಹಿರಿಯರ ವೃತ್ತಿಪರತೆ ಕಿರಿಯರಿಗೆ ಆದರ್ಶಪ್ರಾಯವಾಗ ಬೇಕೆಂದು ಕರೆ ನೀಡಿದರು. ಇಂದಿನ ಯುವ ವಕೀಲರು ಸರಳ ರೀತಿಯ ಪರಿಹಾರದತ್ತಲೇ ಮನಸ್ಸು ಮಾಡುತ್ತಿದ್ದಾರೆ. ಆದರೆ, ಇದು ಎಲ್ಲಾ ಕಾಲದಲ್ಲಿಯೂ ಸಲ್ಲುವದಿಲ್ಲ ಎಂದು ಜಸ್ಟೀಸ್ ಬೋಪಣ್ಣ ಎಚ್ಚರಿಸಿದರು. ಹಿರಿಯ ವಕೀಲ ಎಸ್.ಆರ್. ಜಗದೀಶ್ ವೃತ್ತಿ ಜೀವನದ 50 ನೇ ವರ್ಷಾಚರಣೆ ಸಂದರ್ಭ ಸನ್ಮಾನ ಆಯೋಜಿಸಿರುವದು ಅರ್ಥಪೂರ್ಣ ಎಂದೂ ಅವರು ಶ್ಲಾಘಿಸಿದರು.
ದೇಶದಲ್ಲಿನ ಇಂದಿನ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ, ನ್ಯಾಯಾಂಗದ ಮೇಲೆ ಕಾರ್ಯಾಂಗ ತನ್ನ ಹಿಡಿತಕ್ಕೆ ಮುಂದಾಗುವ ದಿನಗಳು ದೂರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೇ ಧಕ್ಕೆ ಬರುವಂಥ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿ ನ್ಯಾಯಾಂಗದ ರಕ್ಷಣೆಗೆ ವಕೀಲ ಸಮೂಹ ಮುಂದಾಗಬೇಕೆಂದು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಕರೆ ನೀಡಿದರು.
ವಕೀಲ ಎಸ್.ಆರ್.ಜಗದೀಶ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎಂ.ಸಿ.ನಾಣಯ್ಯ, ಸಂವಿಧಾನ ಬದ್ಧವಾದ ನ್ಯಾಯಾಂಗದ ಬಗ್ಗೆ ದೇಶದ ಜನತೆಗೆ ಅಪಾರವಾದ ವಿಶ್ವಾಸವಿದೆ. ಆದರೆ, ಈಗ ದೇಶ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ಕಾರ್ಯಾಂಗವು ನ್ಯಾಯಾಂಗದ ಮೇಲೆ ಸವಾರಿ ಮಾಡಲು ಸಿದ್ದತೆ ಕೈಗೊಂಡಿದೆಯೇನೋ ಎಂಬ ಭಾವನೆ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ 2000 ವರ್ಷದಿಂದೀಚಿನ ನ್ಯಾಯಾಂಗದ ಸ್ಥಿತಿಗತಿಯ ಬಗ್ಗೆ ಕೊಡಗಿನ ವಿವಿಧ ವಕೀಲರ ಸಂಘಗಳು ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯನ್ನು ಆಯೋಜಿಸುವಂತೆ ಸಲಹೆ ನೀಡಿದ ಎಂ.ಸಿ.ನಾಣಯ್ಯ, ನ್ಯಾಯಾಂಗ ಮತ್ತು ವಕೀಲರ ನಡುವಿನ ಸಂಬಂಧ ಭದ್ರಬುನಾದಿಯಾಗಬೇಕೆಂದೂ ಕಿವಿಮಾತು ಹೇಳಿದರು. ನ್ಯಾಯಾಂಗಗಳು ಸರ್ವ ಸ್ವತಂತ್ರ್ಯವಾಗಿ ಮೂಲ ಉದ್ದೇಶಕ್ಕೆ ತಕ್ಕಂತೆ ವರ್ತಿಸಲು ವಕೀಲರ ಪಾತ್ರ ಬಹಳ ಮುಖ್ಯವಾಗಿದೆ ಎಂದೂ ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ 50 ವರ್ಷಗಳನ್ನು ವಕೀಲ ವೃತ್ತಿಯಲ್ಲಿ ಪೂರೈಸಿದ ಕೆಲವು ವಕೀಲರಲ್ಲಿ ವೀರಾಜಪೇಟೆಯ ಎಸ್.ಆರ್.ಜಗದೀಶ್ ಪ್ರಮುಖ ರಾಗಿದ್ದು, ತಮ್ಮ ವೃತ್ತಿ ಜೀವನವನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ದವಾಗಿ, ಪ್ರಾಮಾಣಿಕತೆಯಿಂದ ಕಳೆದಿದ್ದಾರೆ ಎಂದು ನಾಣಯ್ಯ ಜಗದೀಶ್ ವೃತ್ತಿ ಸೇವೆಯನ್ನು ಶ್ಲಾಘಿಸಿದರು. ಅಂತೆಯೇ ಕೊಡಗಿನವರಾದ ಅಜ್ಜಿಕುಟ್ಟೀರ ಬೋಪಣ್ಣ ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠವನ್ನೂ ಅಲಂಕರಿಸುವಂತಾಗಲಿ ಎಂದೂ ನಾಣಯ್ಯ ಆಶಿಸಿದರು.
ವಿವಿಧ ವಕೀಲರ ಸಂಘ, ಸಂಘಟನೆಗಳ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಆರ್.ಜಗದೀಶ್, ವೃತ್ತಿಪರರೊಂದಿಗೇ ತಾನು ಕಳೆದ 5 ದಶಕಗಳು ತನ್ನ ಜೀವನದ ಅಮೂಲ್ಯ ಆಸ್ತಿಯಾಗಿದೆ. ಜನರ ನಂಬಿಕೆ ಉಳಿಸಿಕೊಂಡ ತೃಪ್ತಿ ವಕೀಲನಾಗಿ ತನಗಿದೆ ಎಂದರಲ್ಲದೇ, ತನ್ನ ತಂದೆ ಎಸ್.ಎಸ್. ರಾಮಮೂರ್ತಿ ಅವರ ಜತೆ 25 ವರ್ಷಗಳ ಕಾಲ ವಕೀಲನಾಗಿ ಕಾರ್ಯನಿರ್ವಹಿಸಿದ್ದು ತನ್ನ ವೃತ್ತಿಯ ಅಮೂಲ್ಯ ಕ್ಷಣಗಳು ಎಂದು ಸ್ಮರಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಮಾತನಾಡಿ, ಸಮಾಜವು ವಕೀಲ ಸಮುದಾಯದಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಇದಕ್ಕೆ ಚ್ಯುತಿತಾರದಂತೆ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಎಸ್.ಆರ್.ಜಗದೀಶ್ ಕುರಿತಂತೆ ವೀರಾಜಪೇಟೆಯ ವಕೀಲರಾದ ಎಂ.ಕೆ.ಪೂವಯ್ಯ, ಕೆ.ಎನ್. ಮಾದಪ್ಪ,ಎನ್.ಜಿ.ಕಾಮತ್, ಐ.ಆರ್.ಪ್ರಮೋದ್, ಬಿದ್ದಂಡ ಸುಬ್ಬಯ್ಯ, ಸಿ.ಸಿ. ಸೋಮಯ್ಯ, ಜಗದೀಶ್ ಪುತ್ರ ನಿಖಿಲ್, ಮಗಳು ಅನುಪಮಾ, ಸೊಸೆ ಸಿಂಧೂರ ಶಾನುಭೋಗ್ ಮಾತನಾಡಿ ಅನುಭವ ಹಂಚಿಕೊಂಡರು.