ಮಡಿಕೇರಿ, ಜೂ. 24: ಕೊಡಗಿನಲ್ಲಿರುವ ಮೌಖಿಕ ಸಾಹಿತ್ಯವನ್ನು ದಾಖಲಿಸಿದರೆ ವಿಶ್ವದ ಶ್ರೇಷ್ಠ ಸಾಹಿತ್ಯವಾಗುವ ಸಾಧ್ಯತೆಯಿದ್ದು, ಈ ಕಾರ್ಯಕ್ಕೆ ಮುಂದಾಗುವಂತೆ ಸಾಹಿತಿ ಅಬ್ದುಲ್ ರಶೀದ್ ಕರೆ ನೀಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ವತಿಯಿಂದ ನಗರದ ದೇವರಾಜ ಅರಸು ಭವನದಲ್ಲಿ ನಡೆದ ಸಾಹಿತ್ಯ ಶಿಬಿರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಇಂದು ಬಯಲು, ನದಿ ನೋಡಲು ಸಾಧ್ಯವಿಲ್ಲ. ಎಲ್ಲಕ್ಕೂ ಬೇಲಿ ಹಾಕುತ್ತಿದ್ದೇವೆ. ಇಂದು ಕೊಡಗು ಕೂಡ ಬದಲಾಗುತ್ತಿದೆ. ಆರು ವರ್ಷಗಳ ಕಾಲ ಕೊಡಗಿನ ಅನ್ವೇಷಣೆ ಮಾಡಿದ್ದೇನೆ. ಕೊಡಗಿನ ಹಳ್ಳಿಗಳಲ್ಲಿ ಸುತ್ತಿ ಇಲ್ಲಿನ ಹಿರಿಮೆಯನ್ನು ಅರಿತುಕೊಂಡಿದ್ದೇನೆ. ಕೊಡಗಿನಷ್ಟು ಸಾಹಿತ್ಯ ಶ್ರೀಮಂತಿಕೆ ಇರುವ ಪ್ರದೇಶ ಪ್ರಪಂಚದಲ್ಲಿ ಬೇರೆ ಇಲ್ಲ. ಸಾಹಿತ್ಯ ಎಂದರೆ ಕೇವಲ ಕೃತಿಯಲ್ಲಿರುವ ಅಕ್ಷರಗಳಲ್ಲ. ಪ್ರಶಸ್ತಿ ಬಂದರೆ ಮಾತ್ರ ಅದು ಶ್ರೇಷ್ಠ ಸಾಹಿತ್ಯವಲ್ಲ. ಕೊಡಗಿನ ಹಿರಿಯರಲ್ಲಿರುವ, ಐನ್‍ಮನೆಗಳಲ್ಲಿ ಇರುವ ಸಾಹಿತ್ಯವನ್ನು ದಾಖಲಿಸಿದರೆ ಅದು ವಿಶ್ವಖ್ಯಾತಿ ಪಡೆಯುತ್ತದೆ. ಸಾಹಿತ್ಯಕ್ಕೆ ಯಾವ ಭಾಷೆ ಎನ್ನವದು ಮುಖ್ಯ ಅಲ್ಲ. ಅದರ, ದಾಖಲೀಕರಣ ಆಗಬೇಕಿದೆ. ಹಳ್ಳಿಗಳಲ್ಲಿರುವ ಸಾಹಿತ್ಯ, ಕಥೆ, ಹಾಡುಗಳನ್ನು ಸಂಗ್ರಹಿಸಬೇಕಿದೆ ಎಂದರು.
ಬರಹಗಾರನ ಮೌಲ್ಯ ಅವರು ಕಣ್ಮರೆಯಾದ ನಂತರವೇ ತಿಳಿಯುತ್ತದೆ. ಉದಾಹರಣೆಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ. ಕಣ್ಮರೆಯಾದ ನಂತರವೇ ಅವರ ಸಾಹಿತ್ಯದ ವಿಶೇಷತೆ ಪ್ರಪಂಚಕ್ಕೆ ತಿಳಿಯಿತು. ಯಾವದೇ ಭಾಷೆ ಮತ್ತೊಂದು ಭಾಷೆಯನ್ನು ನಾಶ ಮಾಡಲು ಸಾಧ್ಯವಿಲ್ಲ. ಕೊಡಗಿನ ನೆಲದಿಂದ ಉತ್ಕøಷ್ಟ ಸಾಹಿತ್ಯ ರಚನೆ ಸಾಧ್ಯ ಎನ್ನುವದಕ್ಕೆ ಸಾಕಷ್ಟು ಉತ್ತಮ ಕೃತಿಗಳನ್ನು ಕಾಣಬಹುದು. ಕಡಿಮೆ ಜನಸಂಖ್ಯೆ ಇರುವ ಭಾಷೆ ಎಂಬ ಕೀಳರಿಮೆ ಯಾರಿಗೂ ಬೇಡ. ನಮ್ಮ ಭಾಷೆಯ ಬಗ್ಗೆ ಅಭಿಮಾನ, ಹೆಮ್ಮೆ ಇರಲಿ. ಎಲ್ಲಾ ಭಾಷೆಯಲ್ಲಿಯೂ ಅತ್ಯುತ್ತಮ ಸಾಹಿತ್ಯ ರಚನೆ ಸಾಧ್ಯ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಸಾಹಿತಿ ಎಂ.ಎಸ್. ಶಶಿಕಲಾ ಗೌಡ ಮಾತನಾಡಿ, ಸಾಹಿತ್ಯದಲ್ಲಿ ಬದಲಾವಣೆ ಎನ್ನುವದು ನಿರಂತರ ಪ್ರಕ್ರಿಯೆ. ಕೇವಲ ಜೀವಸಂಕುಲಕ್ಕೆ ಮಾತ್ರವಲ್ಲದೆ ಎಲ್ಲಾ ವಸ್ತುಗಳು, ಪ್ರಕೃತಿ ಕೂಡ ಬದಲಾವಣೆಗೆ ಒಳಪಡುತ್ತದೆ. ಸಾಹಿತ್ಯದ ವಸ್ತುವಿನಲ್ಲಿ, ಭಾಷೆ, ಶೈಲಿಯಲ್ಲಿ ಬದಲಾವಣೆಯನ್ನು ಕಾಣಬಹುದು. ಸಾಹಿತ್ಯ ಸಮಾಜ ಮುಖಿಯಾಗಿ ಕಾರ್ಯನಿರ್ವ ಹಸಿಬೇಕಿದೆ. ವೈಚಾರಿಕತೆಯನ್ನು ಬಡಿದೆಬ್ಬಿಸಬೇಕಿದೆ. ಗುಲಾಮಗಿರಿ ಯಿಂದ ಹೊರಬರಲು ಅರಿವು ಮೂಡಿಸಬೇಕಿದೆ. ಸಾಹಿತ್ಯ ಈ ಕೆಲಸವನ್ನು ಸಮರ್ಪಕವಾಗಿ ಕಾಲದಿಂದ ಕಾಲಕ್ಕೆ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಜಾನಪದ ಕಾಲದಿಂದಲೇ ಬದಲಾವಣೆಯನ್ನು ಗಮನಿಸಬಹುದು. ನಮ್ಮಲ್ಲಿ ಉತ್ಕøಷ್ಟವಾದ ಗಮಕ ಸಾಹಿತ್ಯ, ದಾಸ ಸಾಹಿತ್ಯ, ಇತಿಹಾಸ ಸಾಹಿತ್ಯಗಳನ್ನು ಕಾಣಬಹುದು. 1980ರಿಂದ ಶಾಸನ ಸಾಹಿತ್ಯ ಕೂಡ ಬೆಳವಣಿಗೆಯಾಗಿದೆ ಎಂದರು. ಕೊಡಗಿನ ಬಗ್ಗೆ ನನಗೆ ವಿಶೇಷ ಅಭಿಮಾನ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ವೀರ ಸೇನಾನಿಗಳು, ಖ್ಯಾತ ಕ್ರೀಡಾಪಟುಗಳು, ಸಾಹಿತಿಗಳಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ್ ಕಾಮತ್ ಮಾತನಾಡಿ, ಸಾಹಿತಿಗಳನ್ನು ಒಂದೆಡೆ ಸೇರಿಸುವಂತಹ ಕಾರ್ಯ ಪ್ರಶಂಸನೀಯವಾದುದು. ಲೇಖಕರ ಮತ್ತು ಕಲಾವಿದರ ಬಳಗ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಲೇಖಕರ ಸ್ವ ಪರಿಚಯದ ಪುಸ್ತಕವನ್ನು ಹೊರ ತರಲು ಚಿಂತನೆ ಇದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಳಗ ಆರಂಭ ಮಾಡುತ್ತಿದ್ದೇವೆ. ಇಂಟರ್‍ನೆಟ್ ಯುಗದಲ್ಲಿ ಬಾಲಸಾಹಿತ್ಯದ ಕೊರತೆ ಕಂಡು ಬರುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ವಿಭಿನ್ನ ಭಾಷೆಯಲ್ಲಿ ಸಾಹಿತ್ಯ ಕೃಷಿ ನಡೆಯುತ್ತಿದೆ. ಎಲ್ಲಾ ಸಾಹಿತಿಗಳು ದೇಶವನ್ನು ಕಟ್ಟುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಕವಿ ತನ್ನ ಭಾವನೆಗಳ ಮೂಲಕ ಅಭಿಪ್ರಾಯವನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಶಕ್ತಿ ಹೊಂದಿದ್ದಾನೆ. ಸಾಹಿತ್ಯ ಕಾಲ ಕಾಲಕ್ಕೆ ಬದಲಾವಣೆ ಕಾಣಬೇಕಿದೆ. ಇಂತಹ ಸ್ಥಿತಿಯಲ್ಲಿ ಈ ರೀತಿಯ ಶಿಬಿರ ಏರ್ಪಡಿಸುತ್ತಿರುವದು ಪ್ರಸ್ತುತವಾಗಿದೆ. ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳಿಗೆ ತೊಡಗಿಸಿ ಕೊಳ್ಳಬೇಕು ಎಂದರು,
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಮಾತನಾಡಿ, ಸಾಹಿತಿಗಳು ಆಗಿಂದಾಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಸಾಹಿತ್ಯಕ್ಕೆ ಅಂತ್ಯವಿಲ್ಲ. ಅದು ಬೆಳೆಯುತ್ತಲೇ ಇರುತ್ತದೆ. ರವಿ ಕಾಣದನ್ನು ಕವಿ ಕಂಡ ಎನ್ನುವ ಮಾತು ಅರ್ಥಪೂರ್ಣವಾಗಿದೆ. ಅಪ್ಪಚ್ಚ ಕವಿಯಂತಹವರು ಉತ್ಕøಷ್ಟ ಸಾಹಿತ್ಯ ರಚಿಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಹೇಳಿದರು.
ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡವ ಅಕಾಡೆಮಿ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕಿದೆ. ಇಡೀ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಪುಸ್ತಕ ಮಾರಾಟ ಮಳಿಗೆ ಇಲ್ಲದ ಏಕೈಕ ಜಿಲ್ಲೆ ಕೊಡಗು ಎಂದು ವಿಷಾದಿಸಿದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನಿಕಟ ಪೂರ್ವ ಅಧ್ಯಕ್ಷ ಷಂಶುದ್ದೀನ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಯುವ ಸಾಹಿತಿಗಳಿದ್ದಾರೆ. ಮುಖ್ಯವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಹಲವು ಶಿಕ್ಷಕರಿಗೆ ಸಾಹಿತ್ಯದ ಬಗ್ಗೆ ಅಭಿರುಚಿ ಇಲ್ಲದಿರುವದು ಸಮಸ್ಯೆಯಾಗಿದೆ. ಎಲ್ಲಾ ಶಾಲೆಗಳಲ್ಲಿ ಗ್ರಂಥಾಲಯ ಇದ್ದರೂ ಅವುಗಳ ಸದ್ಬಳಕೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ನಾಗೇಶ್ ಕಾಲೂರು ಕೊಡವ ಸಾಹಿತ್ಯದ ಪರಿಚಯ ಮಾಡಿಕೊಟ್ಟರು. ಕೊಡವ ಜಾನಪದ ಸಾಹಿತ್ಯ ಉತ್ಕøಷ್ಟವಾಗಿದೆ. ಕೊಡಗಿನ ಬಾಳೋಪಾಟ್, ದೇವಡ ಪಾಟ್, ಶಿಶುಗೀತೆಗಳು ಅರ್ಥಪೂರ್ಣವಾಗಿವೆ. ಎಲ್ಲಾ ವಿಭಾಗದ ಸಾಹಿತ್ಯ ಜಾನಪದದಿಂದ ಬೆಳೆದು ಬಂದಿದೆ. ಕೊಡವ ಗಾದೆಗಳು ಕೂಡ ಮೌಲ್ಯದಿಂದ ಕೂಡಿವೆ ಎಂದು ಹೇಳಿದರು. ಅರೆಭಾಷೆ ಸಾಹಿತ್ಯದ ಬಗ್ಗೆ ಮಾತನಾಡಿದ ಸಾಹಿತಿ ಬಿ.ಆರ್. ಜೋಯಪ್ಪ, ಹಲವು ಮಂದಿ ಉತ್ತಮ ಸಾಹಿತ್ಯ ರಚನೆ ಮಾಡಿದ್ದಾರೆ. ಅರೆಭಾಷೆಗೆ ಲಿಪಿಯಿದ್ದು, ಅದರಲ್ಲಿ ಬರೆಯುವ ಪ್ರಯತ್ನಗಳು ನಡೆಯುತ್ತಿವೆ. ಅರೆಭಾಷೆ ಅಕಾಡೆಮಿ ರಚನೆಯಾದ ನಂತರ ಸಾಕಷ್ಟು ಕೃತಿಗಳು ರಚನೆಯಾಗಿವೆ ಎಂದು ಹೇಳಿದರು. ಅಕಾಡೆಮಿ ರಿಜಿಸ್ಟ್ರಾರ್ ಉಮ್ಮರಬ್ಬ ಸ್ವಾಗತಿಸಿದರು. ಅರೆಭಾಷೆ ಅಕಾಡೆಮಿ ಸದಸ್ಯ ಕಡ್ಲೆರ ತುಳಸಿ ಮೋಹನ್ ನಿರೂಪಿಸಿದರು. ಕಾನೆಹಿತ್ಲು ಮೊಣ್ಣಪ್ಪ ಅವರು ವಂದಿಸಿದರು.