ಚೆಟ್ಟಳ್ಳಿ, ಜೂ. 24: ಸಿದ್ದಾಪುರ ಸಮೀಪದ ಆನಂದಪುರ ಟಾಟಾ ಕಾಫಿ ತೊಟದಲ್ಲಿ ಬೀಡುಬಿಟ್ಟಿರುವ 14 ಕಾಡಾನೆಗಳ ನಡುವೆ ಸುಮಾರು 4 ವರ್ಷದ ಕಾಡಾನೆಯೊಂದು ಎಡಗಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿ ನಡೆಯಲಾಗದ ಸ್ಥಿತಿಯಲ್ಲಿ ಒದ್ದಾಡುತ್ತಿತ್ತು. ವೀರಾಜಪೇಟೆ ಅರಣ್ಯ ಇಲಾಖಾ ತಂಡ ಕಾರ್ಯಾಚರಣೆ ನಡೆಸಿ ಆನೆಮರಿಯನ್ನು ಕಟ್ಟಿಹಾಕಿ ಪಿಕಪ್‍ನಲ್ಲಿ ದುಬಾರೆ ಆನೆಶಿಬಿರಕ್ಕೆ ತರಲಾಯಿತು. ಟ್ರೋಲ್‍ನಲ್ಲಿ ಬಂಧಿಸಿ ವೈದ್ಯರಾದ ಡಾ. ಮುಜೀಬ್ ಪರಿಶೀಲಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲು ಗುಂಡೇಟಿನ ಗಾಯದಿಂದ ಎಡಗಾಲು ಹಾಗೂ ಹೊಟ್ಟೆ ಊದಿಕೊಂಡಿದ್ದು ಮಲಗಲು ಹಾಗೂ ನಿಲ್ಲಲಾಗದೆ ಟ್ರಾಲ್‍ನಲ್ಲಿ ಒದ್ದಾಡುತ್ತಿತ್ತು. ಅರಣ್ಯ ಇಲಾಖೆಯ ಸೂಕ್ತ ಚಿಕಿತ್ಸೆ ಹಾಗೂ ಆರೈಕೆಯಿಂದ ಆನೆಯ ಆರೋಗ್ಯ ಸುಧಾರಣೆಗೊಳ್ಳುತ್ತಿದೆ ಎಂದು ಡಾ. ಮುಜೀಬ್ ತಿಳಿಸಿದ್ದಾರೆ.

ಗುಂಡೇಟು ತಗಲಿರುವ ಹೊಟ್ಟೆ ಹಾಗೂ ಕಾಲಿನ ಗಾಯದಲ್ಲಿ ಗುಂಡಿನ ಚೂರುಗಳಿರುವ ಸಂಶಯ ವ್ಯಕ್ತಗೊಂಡಿದ್ದು, ಗುಂಡನ್ನು ತೆಗೆಯಬೇಕೆಂದರೆ ಮೊದಲು ಗುಂಡುಗಳಿರುವ ಜಾಗವನ್ನು ಮೆಟಲ್ ಡಿಟೆಕ್ಟರ್‍ನಿಂದ ಕಂಡು ಹಿಡಿಯಬೇಕು. ಆದರೆ ಅರಣ್ಯ ಇಲಾಖೆಯಲ್ಲಿ ಮೆಟಲ್ ಡಿಟೆಕ್ಟರ್ ಇಲ್ಲದ ಕಾರಣ ಪೊಲೀಸ್ ಇಲಾಖೆಯ ಮೆಟಲ್ ಡಿಟೆಕ್ಟರ್‍ನಲ್ಲಿ ಪರೀಕ್ಷಿಸಿಯೇ ಗುಂಡಿನ ಚೂರನ್ನು ಪತ್ತೆಹಚ್ಚಬೇಕಾಗಿದೆ.

“ವೈದ್ಯರೊಂದಿಗೆ ಹಾಗೂ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯವಿದ್ದಲ್ಲಿ ಪೊಲೀಸ್ ಇಲಾಖೆಯಿಂದ ಮೆಟಲ್ ಡಿಟೆಕ್ಟರ್ ತರಿಸಿ ಗುಂಡನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಡಿ.ಎಫ್.ಓ. ಮಂಜುನಾಥ್ ತಿಳಿಸಿದ್ದಾರೆ.

-ಪುತ್ತರಿರ ಕರುಣ್ ಕಾಳಯ್ಯ, ಪಪ್ಪು ತಿಮ್ಮಯ್ಯ.