ಮಡಿಕೇರಿ, ಜೂ. 25: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ಈಗಾಗಲೇ ನೇಗಿಲ ಯೋಗಿ ರೈತ ತನ್ನ ಕೃಷಿ ಕಾಯಕದಲ್ಲಿ ನಿರತನಾಗಿದ್ದು, ಮುಂಗಾರುವಿನ ಭತ್ತದ ಬೆಳೆಯೊಂದಿಗೆ ಇತರ ಸಣ್ಣಪುಟ್ಟ ಬೇಸಾಯಕ್ಕೆ ಮುಂದಾಗಿದ್ದಾನೆ. ಈಗಾಗಲೇ ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಭತ್ತ ಬೆಳೆಯುವ ರೈತರು ಮುಂಗಾರು ಕೃಷಿಗೆ ಪೂರಕವಾಗಿ ಬಹುತೇಕ ಭತ್ತದ ಬಿತ್ತನೆಯಲ್ಲಿ ತೊಡಗಿದ್ದರೆ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮುಟ್ಲು, ಹಮ್ಮಿಯಾಲ, ಹಚ್ಚಿನಾಡು ಮುಂತಾದೆಡೆಗಳಲ್ಲಿ ಭತ್ತದ ನಾಟಿ ಕಾರ್ಯ ಸುರುವಾಗಿದೆ.ಪ್ರಸಕ್ತ ವರ್ಷಾರಂಭದಿಂದ ಆರಂಭಗೊಂಡಿರುವ ಮುಂಗಾರು ಮಳೆಯು ಈ ತಿಂಗಳಿನ ಪ್ರಾರಂಭದಲ್ಲಿ ಧಾರಾಕಾರ ಸುರಿದಿರುವ ಪರಿಣಾಮ ಕೊಡಗು ಜಿಲ್ಲೆಯಾದ್ಯಂತ ಭತ್ತದ ಗದ್ದೆಗಳು ಜಲಾವೃತಗೊಂಡು ಕೃಷಿ ಕಾಯಕಕ್ಕೆ ಪೂರಕ ವಾತಾವರಣ ರೂಪುಗೊಂಡಿದೆ. ಆ ಬೆನ್ನಲ್ಲೇ ರೈತರು ಅಗಡಿಗಳನ್ನು ಉತ್ತು-ಬಿತ್ತಿ ಸಸಿ ಮಡಿಗಳನ್ನು ಈಗಾಗಲೇ ಸಿದ್ಧಗೊಳಿಸುವತ್ತ ತೊಡಗಿಸಿ ಕೊಂಡಿದ್ದಾನೆ. ಇನ್ನು ವಾಡಿಕೆಯ ಮಳೆಯಂತೆ ಮುಂಗಾರುವಿನ ಹಂಗಾಮವನ್ನು ಮೇ ತಿಂಗಳ ಮಧ್ಯ ಭಾಗದಲ್ಲಿ ಆರಂಭಿಸಿರುವ ಕೆಲವರು ಗ್ರಾಮೀಣ ರೈತರು ಒಣ ಭೂಮಿಗೆ ಬಿತ್ತಿರುವ ಬೀಜಗಳು ಮೊಳಕೆ ಯೊಡೆದು ಪ್ರಸಕ್ತ ಸಸಿಮಡಿಗಳು ನಾಟಿಗೆ ಸಿದ್ಧಗೊಂಡಿದೆ. ಅಂತಹ ಕಡೆಗಳಲ್ಲಿ ಈ ವಾರ ನಾಟಿ ಕೆಲಸ ಆರಂಭಗೊಂಡಿದೆ.ಗ್ರಾಮೀಣ ಪ್ರದೇಶಗಳಲ್ಲಿ ಸಸಿ ಮಡಿಗಳನ್ನು ಸಿದ್ಧಗೊಳಿಸುವ ದರೊಂದಿಗೆ ನಾಟಿ ಕಾರ್ಯದಲ್ಲಿ ತೊಡಗಿರುವ ರೈತ ಕಾಯಕ ‘ಶಕ್ತಿ’ಗೆ ಗೋಚರಿಸಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಬಹುತೇಕ ಗ್ರಾಮೀಣ ರೈತರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಅನುಭವಿ ಕೃಷಿಕರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಗೊಬ್ಬರ ಕೊರತೆಯಿಲ್ಲ: ಕೃಷಿ ಇಲಾಖೆಯ ಪ್ರಭಾರ ತಾಂತ್ರಿಕ ಸಹಾಯಕ

(ಮೊದಲ ಪುಟದಿಂದ) ಅಧಿಕಾರಿ ಜೀವನ್ ಅವರ ಪ್ರಕಾರ, ಜಿಲ್ಲೆಯಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಪೂರಕ ಮಣ್ಣು ಹಾಗೂ ಭೂ ಫಲವತ್ತತೆ ಆದರಿಸಿ ಬಿತ್ತನೆ ಬೀಜ ರಿಯಾಯಿತಿಯಲ್ಲಿ ಲಭ್ಯವಿದ್ದು, ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಯಾವದೇ ಕೊರತೆಯಿಲ್ಲ. ಜಿಲ್ಲೆಯ ಎಲ್ಲ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆಯಾಗುತ್ತಿದೆ. ಸಹಕಾರ ಸಂಘಗಳ ಮುಖಾಂತರ ಗೊಬ್ಬರ ಕೂಡ ದಾಸ್ತಾನಿದ್ದು, ಅಗತ್ಯಕ್ಕೆ ತಕ್ಕಂತೆ ಮಾರಾಟಗೊಳಿಸಲಾಗುತ್ತಿದೆ.

ಪ್ರಸಕ್ತ ಮಾಸದಲ್ಲಿ ಅಧಿಕ ಮಳೆಯಾಗಿರುವ ಹಿನ್ನೆಲೆ ಕೃಷಿ ಚಟುವಟಿಕೆ ಚುರುಕು ಗೊಳ್ಳುತ್ತಿದ್ದು, ಮುಂಗಾರು ಕೃಷಿಯಲ್ಲಿ ಉತ್ತಮ ಸಾಧನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಲೂಕುವಾರು ಗುರಿ: ಪ್ರತಿ ವರ್ಷದಂತೆ ಮುಂಗಾರು ನೀರಾವರಿ ಯೋಜನೆಯಡಿ ಮಡಿಕೇರಿ ತಾಲೂಕಿನಲ್ಲಿ ಈಗಾಗಲೇ 6,500 ಹೆಕ್ಟೇರ್‍ನಲ್ಲಿ ಭತ್ತದ ನಾಟಿಯ ಗುರಿ ಹೊಂದಲಾಗಿದೆ. ಈ ತಾಲೂಕಿನಲ್ಲಿ ಆಶಾದಾಯಕ ರೀತಿಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭಗೊಂಡಿರುವದಾಗಿ ಅವರು ವಿವರಿಸಿದ್ದು, ಗುರಿ ಸಾಧನೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ವೀರಾಜಪೇಟೆ ತಾಲೂಕಿನಲ್ಲಿ ಕೂಡ ಒಟ್ಟು 14 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ವರ್ಷಂಪ್ರತಿಯಂತೆ ಮುಂಗಾರುವಿನ ಈ ಬೆಳೆಗೆ ಈಗಷ್ಟೇ ಈ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಸಾಮಾನ್ಯವಾಗಿ ಆಗಸ್ಟ್ ಅಂತ್ಯದವರೆಗೂ ಅಲ್ಲಿ ನಾಟಿಯನ್ನು ಮಾಡಲಾಗುತ್ತದೆಯಲ್ಲದೆ ಗುರಿ ಸಾಧನೆಯ ವಿಶ್ವಾಸವಿದೆ.

ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳಲ್ಲಿ ಮುಂಗಾರು ಮಳೆ ಆಧರಿಸಿ ಭತ್ತ ಬೆಳೆಯಲಾಗುತ್ತಿದ್ದು, ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಪ್ರದೇಶ ಹೊರತುಪಡಿಸಿ ಬಯಲು ಸೀಮೆಯ ಕೆಲವೆಡೆ ಭತ್ತದೊಂದಿಗೆ ಮುಸುಕಿನ ಜೋಳ, ತಂಬಾಕು, ದ್ವಿದಳ ದಾನ್ಯಗಳನ್ನು ಬೆಳೆಯಲಾಗುತ್ತಿದೆ. ಈ ತಾಲೂಕಿನಲ್ಲಿ 11,600 ಹೆಕ್ಟೇರ್ ಭತ್ತ ಹಾಗೂ 2,400 ಹೆಕ್ಟೇರ್ ಇತರ ಬೆಳೆಯ ಗುರಿ ಹೊಂದಲಾಗಿದೆ. ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಈಗಿನ ಮಳೆಯಿಂದ ಯಾವದೇ ಸಂಕಷ್ಟ ಪರಿಸ್ಥಿತಿ ಕೃಷಿಗೆ ಎದುರಾಗಿಲ್ಲವೆಂದು ಅಧಿಕಾರಿ ಜೀವನ್ ಪ್ರತಿಕ್ರಿಯಿಸಿದ್ದಾರೆ.