ಗೋಣಿಕೊಪ್ಪಲು, ಜೂ. 24: ಚೆಯ್ಯಂಡಾಣೆ ಗ್ರಾಮ ಪಂಚಾಯ್ತಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಯ ಹಿಂಡು ಬೀಡು ಬಿಟ್ಟಿದ್ದು ಸಮೀಪದ ಚೇನಿರ, ಪಟ್ಟಚರವಂಡ, ಬಾಚಮಂಡ ಕುಟುಂಬಸ್ಥರ ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಅಡಿಕೆ, ತೆಂಗು, ಕಾಫಿ ಗಿಡಗಳನ್ನು ಧ್ವಂಸಗೊಳಿಸಿದೆ. ವೀರಾಜಪೇಟೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಮೊಕಾಂ ಹೂಡಿದ್ದು ಕಾಡಾನೆಯ ಓಡಾಟದ ಬಗ್ಗೆ ನಿಗಾವಹಿಸಿದ್ದಾರೆ. 10 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಗ್ರಾಮದಲ್ಲಿ ಇದ್ದಾರೆ.
ಮಾಹಿತಿ ತಿಳಿದ ಜೆ.ಡಿ.ಎಸ್.ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಚೇನಿರ, ಪಟ್ಟಚರವಂಡ, ಬಾಚಮಂಡ ಕುಟುಂಬಸ್ಥರ ಕಾಫಿ ತೋಟಗಳಿಗೆ ತೆರಳಿ ಕಾಡಾನೆಯಿಂದ ನಷ್ಟಗೊಂಡಿರುವದನ್ನು ಖುದ್ದು ಪರಿಶೀಲಿಸಿದರು.
ಘಟನೆ ಸ್ಥಳದಿಂದ ದೂರವಾಣಿ ಮೂಲಕ ವೀರಾಜಪೇಟೆಯ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಗ್ರಾಮದ ಜನತೆ ಕಾಡಾನೆ ಧಾಳಿಯಿಂದ ಕಂಗೆಟ್ಟಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಹೆಚ್ಚಿನ ಸಿಬ್ಬಂದಿಗಳನ್ನು ಗ್ರಾಮಕ್ಕೆ ಕಳುಹಿಸುವ ಮೂಲಕ ಕಾಡಾನೆಯನ್ನು ನಾಡಿನಿಂದ ಕಾಡಿಗೆ ಅಟ್ಟುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈಗಾಗಲೇ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಯಾವದೇ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸುತ್ತೇವೆ ಗ್ರಾಮಸ್ಥರು ಭಯಪಡುವ ಅವಶ್ಯಕತೆ ಇಲ್ಲ ಎಂದರು. ಭೇಟಿಯ ಸಂದರ್ಭ ಗ್ರಾಮಸ್ಥರು ರಸ್ತೆ, ವಿದ್ಯುತ್ ಮುಂತಾದ ಮೂಲ ಸೌಕರ್ಯದ ಕೊರತೆ ಬಗ್ಗೆ ಸಂಕೇತ್ ಪೂವಯ್ಯನವರಿಗೆ ಮಾಹಿತಿ ನೀಡಿದರು. ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.