ಮಡಿಕೇರಿ, ಜೂ. 25: ಕೊಡಗು ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ಸುಮಾರು 18ಲಕ್ಷ ಮಂದಿ ಪ್ರವಾಸಿಗರನ್ನು ಆಕರ್ಷಿಸಿ ಬರಮಾಡಿಕೊಂಡಿದೆ. ಈ ಪೈಕಿ ಸುಮಾರು 10 ಸಾವಿರ ಮಂದಿ ವಿದೇಶಿ ಪ್ರವಾಸಿಗರಿದ್ದಾರೆ.ಪ್ರವಾಸಿಗರ ಅಧಿಕ ಸಂಖ್ಯೆಯ ಆಗಮನದಿಂದ ಒಂದೆಡೆ ವಾಹನಗಳ ಒತ್ತಡ ಜನಸಂದಣಿ ಕಿರಿಕಿರಿ ಉಂಟುಮಾಡುತ್ತಿದ್ದರೂ, ಮತ್ತೊಂದೆಡೆ ಸರ್ಕಾರದ ಬೊಕ್ಕಸಕ್ಕೆ ಆದಾಯವು ಲಭ್ಯವಾಗುತ್ತಿದೆ. ಹುಣಸೂರು ವಿಭಾಗ ಅರಣ್ಯ ಉಪ ಸಂರಕ್ಷಣಾಧಿಕಾರಿ ರವಿಶಂಕರ್ ಅವರ ಪ್ರಕಾರ 1,20,000 ಮಂದಿ ಸರಾಸರಿ ವಾರ್ಷಿಕವಾಗಿ ನಾಗರಹೊಳೆಗೆ ಆಗಮಿಸಿ ಸಫಾರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅಂದಾಜು ರೂ. 1 ಕೋಟಿ 10 ಲಕ್ಷ ಆದಾಯ ದೊರೆತಿದ್ದು, ಜಿಲ್ಲೆಯಲ್ಲಿ ನಾಗರಹೊಳೆ ಅತ್ಯಧಿಕ ಆದಾಯ ನೀಡಿರುವ ಪ್ರವಾಸಿ ತಾಣವೆನಿಸಿದೆ. ಕುಶಾಲನಗರದ ಕಾವೇರಿ ನಿಗರ್ಸಧಾಮ ಸುಮಾರು 5 ಲಕ್ಷದ 32 ಸಾವಿರಕ್ಕಿಂತಲೂ ಅಧಿಕ ಪ್ರವಾಸಿಗರನ್ನು ವಾರ್ಷಿಕವಾಗಿ ಆಕರ್ಷಿಸುತ್ತಿದೆ ಈ ತಾಣದಲ್ಲಿ ಬಿದಿರು ಮನೆ ಸುತ್ತಲೂ ಕಾವೇರಿಯ ಜಲಾವರಣ, ರ್ಯಾಫ್ಟಿಂಗ್ ಮತ್ತು ಬೋಟಿಂಗ್ ಹಾಗೂ ಪ್ರವೇಶ ಶುಲ್ಕಗಳಿಂದಾಗಿ ರೂ. 60 ಲಕ್ಷಕ್ಕೂ ಅಧಿಕ ವಾರ್ಷಿಕ ಆದಾಯ ಅರಣ್ಯ ಇಲಾಖೆಗೆ ಲಭ್ಯವಾಗುತ್ತಿದೆ. ಇದೀಗ ಪ್ರವಾಸಿ ತಾಣವನ್ನು ನವೀಕರಣಗೊಳಿಸಿದ್ದು, ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗುತ್ತಿದೆ.

ಎಸಿಎಫ್‍ಓ ಎಂ. ಚಿಣ್ಣಪ್ಪ ಅವರ ಪ್ರಕಾರ ದುಬಾರೆ ಆನೆ ಶಿಬಿರಕ್ಕೆ ಸುಮಾರು 15 ಸಾವಿರದಷ್ಟು ಮಂದಿ ಪ್ರತಿತಿಂಗಳು ಸರಾಸರಿ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಭೇಟಿಯಿಂದ ವಾರ್ಷಿಕವಾಗಿ ಸುಮಾರು ರೂ. 30 ಲಕ್ಷ ಆದಾಯ ಲಭ್ಯವಾಗುತ್ತಿದೆ. ಈಗಾಗಲೇ ಪ್ರವಾಸಿಗರನ್ನು ಆನೆ ಶಿಬಿರಕ್ಕೆ ನದಿ ಮೂಲಕ ಒಯ್ಯಲು ಅರಣ್ಯ ಇಲಾಖೆಯ ಆಶ್ರಯದಲ್ಲಿ ಎರಡು ಬೋಟ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು,

(ಮೊದಲ ಪುಟದಿಂದ) ಸದ್ಯದಲ್ಲಿಯೇ ಇನ್ನೆರಡು ಬೋಟ್‍ಗಳ ವ್ಯವಸ್ಥೆ ಕಲ್ಪಿಸುವದಾಗಿ ಡಿಎಫ್‍ಓ ಮಂಜುನಾಥ್ ತಿಳಿಸಿದ್ದಾರೆ.

ಇದುವೇ ಸರಹದ್ದಿನಲ್ಲಿರುವ ಟಿಬೇಟನ್ ಗೋಲ್ಡನ್ ಟೆಂಪಲ್ ತಾಣಕ್ಕೆ ಸಾಮಾನ್ಯವಾಗಿ ಎಲ್ಲಾ ಪ್ರವಾಸಿಗರು ತೆರಳುತ್ತಾರೆ. ಆದರೆ, ಅಲ್ಲಿ ಪ್ರವೇಶ ಮಾತ್ರ ಉಚಿತ. ಇದೇ ಸರಹದ್ದಿನಲ್ಲಿರುವ ಹಾರಂಗಿಯ ನೂತನ ನಿರ್ಮಿತ ಉದ್ಯಾನವನಕ್ಕೂ ಎಲ್ಲಾ ಪ್ರವಾಸಿಗರು ತೆರಳುತ್ತಾರೆ. ಪ್ರಸಕ್ತ ಅಲ್ಲಿಗೆ ಉಚಿತ ಪ್ರವೇಶವಿದ್ದು, ಸದ್ಯದಲ್ಲಿಯೇ ಪ್ರವೇಶ ಶುಲ್ಕವನ್ನು ವಿಧಿಸಲಾಗುವದೆಂದು ತಿಳಿದು ಬಂದಿದೆ.

ದಕ್ಷಿಣ ಕೊಡಗಿನ ಇರ್ಪು ಲಕ್ಷ್ಮಣ ತೀರ್ಥ ಜಲಧಾರೆಯನ್ನು ವೀಕ್ಷಿಸಲು ವಾರ್ಷಿಕವಾಗಿ ಸುಮಾರು 2 ಲಕ್ಷದಷ್ಟು ಪ್ರವಾಸಿಗರು ತೆರಳುತ್ತಿದ್ದಾರೆ. ಅಲ್ಲಿನ ವಿಶೇಷವೆಂದರೆ ನೈಸರ್ಗಿಕ ತಾಣಕ್ಕೆ ಪೂರಕವಾಗಿ ಯಾವದೇ ಮಾಲಿನ್ಯಕ್ಕೆ ಅವಕಾಶ ನೀಡದಿರುವದು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಕೂಡ ಒಯ್ಯಲು ಅವಕಾಶ ಇಲ್ಲದಿರುವದು ಆಪ್ಯಾಯಮಾನವಾದ ಸ್ನಾನದ ಜಲಧಾರೆಯ ಸಂತಸವನ್ನು ಪ್ರವಾಸಿಗರು ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು ರೂ. 50 ಲಕ್ಷದಷ್ಟು ಆದಾಯ ಲಭ್ಯವಾಗಿದೆ.

ಮಡಿಕೇರಿಯ ಐತಿಹಾಸಿಕ ರಾಜಾಸೀಟಿಗೆ ಪ್ರಸಕ್ತ ಸಾಲಿನಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಪ್ರವಾಸಿಗರು ತೆರಳಿದ್ದಾರೆ. ಪ್ರವೇಶ ಶುಲ್ಕದಿಂದಾಗಿ ಸುಮಾರು ರೂ. 40 ಲಕ್ಷದಷ್ಟು ಆದಾಯ ಲಭ್ಯವಾಗಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕಿ ದೇವಕಿ ಅವರು ಮಾಹಿತಿಯಿತ್ತಿದ್ದಾರೆ. ಒಂದೆಡೆ ಉದ್ಯಾನವನದ ಆಹ್ಲಾದಕರ ವಾತಾವರಣ ಮತ್ತೊಂದೆಡೆ ಸೂರ್ಯಾಸ್ತಮಾನದ ಸುಂದರ ದರ್ಶನ ಹಾಗೂ ಸಂಗೀತ ಕಾರಂಜಿಗಳು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಮಡಿಕೇರಿಯ ವಿಖ್ಯಾತ ಅಬ್ಬಿಫಾಲ್ಸ್ ದರ್ಶನಕ್ಕೆ ಸಾವಿರಾರು ಮಂದಿ ತೆರಳುತ್ತಿದ್ದು, ಕಳಕೇರಿ ನಿಡುಗಡೆ ಪಂಚಾಯಿತಿ ವತಿಯಿಂದ ವಾಹನ ನಿಲುಗಡೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಸದಸ್ಯ ಡೀನ್ ಬೋಪಣ್ಣ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಾಹನ ನಿಲುಗಡೆಗೆ ಟೆಂಡರ್ ಕರೆದು ಪಂಚಾಯಿತಿಗೆ ರೂ. 24 ಲಕ್ಷ ಗಳಿಕೆಯಾಗಿದೆ. ಅಲ್ಲದೆ ಅಬ್ಬಿಫಾಲ್ಸ್ ಸನಿಹ ಅಂಗಡಿ ಮಳಿಗೆಗಳಿಗೆ ಟೆಂಡರ್ ಕರೆದು ರೂ. 3 ಲಕ್ಷ ಆದಾಯ ಬಂದಿದೆ ಎಂದು ತಿಳಿದು ಬಂದಿದೆ.

ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದ ಪ್ರವೇಶ ನಿರ್ವಹಣೆಯನ್ನು ಈ ಹಿಂದೆ ರೂ. 8 ಲಕ್ಷಕ್ಕೆ ಗುತ್ತಿಗೆ ನೀಡಿದ್ದು, ಪ್ರಸಕ್ತ ಸಾಲಿನಿಂದ ಪಂಚಾಯಿತಿ ವತಿಯಿಂದಲೇ ನಿರ್ವಹಿಸಲಾಗುತ್ತಿದೆ. ಪ್ರವೇಶ ಶುಲ್ಕ ಹಾಗೂ ವಾಹನ ನಿಲುಗಡೆಯಿಂದ ಸುಮಾರು ರೂ. 10 ಲಕ್ಷ ಆದಾಯ ಪಂಚಾಯಿತಿಗೆ ಲಭ್ಯವಾಗುತ್ತಿದೆ. ಇದಲ್ಲದೆ ಕೊಡಗಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಭಾಗಮಂಡಲ ಹಾಗೂ ತಲಕಾವೇರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ತೆರಳುತ್ತಿದ್ದು, ವಾರ್ಷಿಕವಾಗಿ ಸುಮಾರು 3 ಲಕ್ಷ 20 ಸಾವಿರ ಮಂದಿ ಪ್ರವಾಸಿಗರು ದರ್ಶನ ಪಡೆಯುತ್ತಾರೆ. ಜೊತೆಗೆ ಪ್ರವಾಸಿಗರು ನಾಲ್ಕುನಾಡು ಅರಮನೆ ಹಾಗೂ ತಡಿಯಂಡಮೊಳ್ ಪರ್ವತಾರೋಹಣ ಹಾಗೂ ಇನ್ನಿತರ ಅನೇಕ ಸ್ಥಳೀಯ ಪ್ರವಾಸಿ ತಾಣಗಳಿಗೂ ತೆರಳುತ್ತಿದ್ದು, ಪ್ರವಾಸಿಗರ ಖಚಿತ ಸಂಖ್ಯೆ ತಿಳಿದು ಬಂದಿಲ್ಲ.

ಯೋಜನೆ ಪ್ರಗತಿ ಪಥದಲ್ಲಿ

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನ್ನಾಥ್ ಅವರ ಪ್ರಕಾರ ಜಿಲ್ಲೆಯಲ್ಲಿ ಸುಮಾರು ರೂ. 7.6 ಕೋಟಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳು ಪ್ರಗತಿ ಹಂತದಲ್ಲಿವೆ. ಈ ಪೈಕಿ ಮಡಿಕೇರಿಯ ಕೊಡವ ಹೆರಿಟೇಜ್ ಸೆಂಟರ್, ಮಡಿಕೇರಿ ಸನಿಹ ಅಬ್ಬಿ ಜಲಪಾತದಲ್ಲಿ ಪ್ಲಾಟ್‍ಫಾರಂ ಮತ್ತಿತರ ಅಭಿವೃದ್ಧಿ ಕಾರ್ಯ, ರಾಜಾಸೀಟಿನ ಸಮಗ್ರ ಅಭಿವೃದ್ಧಿ ಕೆಂಪು ರಾಶಿ ಮೊಟ್ಟೆಯಿಂದ ಮಂಟಕಲ್ ಶಾಲೆವರೆಗೆ ರಸ್ತೆ ಅಭಿವೃದ್ಧಿ, ಮಲ್ಲಳ್ಳಿ ಜಲಪಾತದಲ್ಲಿ ಸಮರ್ಪಕ ವ್ಯವಸ್ಥೆ, ದುಬಾರೆ ಬಳಿ ಪಾರ್ಕಿಂಗ್ ಸೌಲಭ್ಯ, ದುಬಾರೆ ಆನೆಕ್ಯಾಂಪ್ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ, ಕುಶಾಲನಗರ ತಾವರೆಕೆರೆ ಬಳಿ ಪ್ರವಾಸಿ ಮೂಲ ಸೌಕರ್ಯ, ಅಭಿವೃದ್ಧಿ ಇತ್ಯಾದಿಗಳು ಪ್ರಗತಿ ಹಂತದಲ್ಲಿವೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸೋದ್ಯಮ ಇಲಾಖಾ ನಿರ್ದೇಶಕರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಇತ್ತೀಚೆಗೆ ರೂ. 17.75 ಕೋಟಿಯ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದೆ. ಈ ಪೈಕಿ ಮುಳ್ಳೂರು ಜೈನ ಬಸದಿಗೆ ಸಂಪರ್ಕ ರಸ್ತೆ, ನಾಲ್ಕುನಾಡು ಅರಮನೆಗೆ ಸಂಪರ್ಕ ರಸ್ತೆ, ಕೋಟೆ ಬೆಟ್ಟ ಪ್ರವಾಸಿ ತಾಣದ ರಸ್ತೆ ಅಭಿವೃದ್ಧಿ ಮಾಂದಲ್‍ಪಟ್ಟಿ ಸಂಪರ್ಕ ರಸ್ತೆ, ಮುಕ್ರಿ ಬೆಟ್ಟ ರಸ್ತೆ ಅಭಿವೃದ್ಧಿ, ಕುಂದಾ ಬೆಟ್ಟ ರಸ್ತೆ ಅಭಿವೃದ್ಧಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿರುವದಾಗಿ ಸಹಾಯಕ ನಿರ್ದೇಶಕ ಜಗನ್ನಾಥ್ ಮಾಹಿತಿಯಿತ್ತಿದ್ದಾರೆ.

ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸೋದ್ಯಮ ವಾಹನಗಳ ಖರೀದಿಗೆ ಎಸ್‍ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳ ಮಂದಿಗೆ ರೂ. 3 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ವರ್ಷ 240 ವಾಹನಗಳಿಗೆ ಈ ಸೌಲಭ್ಯ ಕಲ್ಪಿಸುವ ಅವಕಾಶವಿದ್ದು, ಈಗಾಗಲೇ 219 ವಾಹನಗಳಿಗೆ ನೆರವು ನೀಡಲಾಗಿದೆ ಎಂದು ತಿಳಿದು ಬಂದಿದೆ.