ಸಿದ್ದಾಪುರ, ಜೂ. 25: ಕಾಡಾನೆ ಧಾಳಿಯಿಂದ ಮೃತಪಟ್ಟ ಬೆಳೆಗಾರ ಮೋಹನ್‍ದಾಸ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ದಾಖಲಿಸಲಾಗಿದ್ದು, ಪುಕಾರಿಗೆ ಬಿ ರಿಪೋರ್ಟ್ ಸಲ್ಲಿಸಿರುವ ಕ್ರಮವನ್ನು ಖಂಡಿಸಿ ತಾ. 27 ರಂದು ಸಿದ್ದಾಪುರ ಪೊಲೀಸ್ ಠಾಣೆಯ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗಿದೆ.

ಸಿದ್ದಾಪುರದ ಸಣ್ಣ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಕೊಡಗು ಜಿಲ್ಲಾ ರೈತರು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕರಡಿಗೋಡಿನ ಬೆಳೆಗಾರ ಮೋಹನ್‍ದಾಸ್ ಎಂಬವರನ್ನು ಕಾಡಾನೆ ಧಾಳಿ ನಡೆಸಿ ಕೊಂದ ಸಂದರ್ಭ ಅವರ ಸಂಬಂಧಿ ಸೋಮಣ್ಣ ಎಂಬವರು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಿ.ಸಿ.ಎಫ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಪುಕಾರು ನೀಡಿದ್ದರು. ಬಳಿಕ ಬೆಳೆಗಾರರು ಹಾಗೂ ಕಾರ್ಮಿಕರ ಒತ್ತಡಕ್ಕೆ ಮಣಿದು ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆದರೆ ದೂರಿನಲ್ಲಿ ಸಹಿ ಹಾಕಿದ್ದವರ ವಿಚಾರಣೆ ನಡೆಸದೆ, ದೂರುದಾರ ಸೋಮಣ್ಣ ಅವರಿಂದ ಖಾಲಿ ಹಾಳೆಯಲ್ಲಿ ಸಹಿ ಪಡೆದು ಬಿ ರಿಪೋರ್ಟ್ ಮಾಡಲಾಗಿದೆ ಎಂದು ಸಭೆಯಲ್ಲಿ ಸೋಮಣ್ಣ ತಿಳಿಸಿದ್ದು, ಪೊಲೀಸ್ ಅಧಿಕಾರಿಗಳು ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಬಿ ರಿಪೋರ್ಟ್ ವಿಚಾರದಲ್ಲಿ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದರೂ, ಯಾವದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಾ. 27 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಾಂಕೇತಿಕ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಈ ಸಂದರ್ಭ ಸಮಿತಿಯ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಯ್ಯ, ಸಲಹೆಗಾರರಾದ ಕೆ.ಬಿ ಹೇಮಚಂದ್ರ, ನಡಿಕೇರಿಯಂಡ ಮಾಚಯ್ಯ, ಕಂಬೀರಂಡ ನಂದಾ ಗಣಪತಿ, ಕಾರ್ಮಿಕ ಮುಖಂಡ ಭರತ್, ರಮೇಶ್, ಬುಟ್ಟಿಯಂಡ ಹರೀಶ್ ಸೋಮಯ್ಯ, ದೇವಣಿರ ಸುಯ್, ದೇವಣಿರ ವಜ್ರ ಬೋಪಣ್ಣ, ಮಂಡೇಪಂಡ ಅರ್ಜುನ್ ತಿಮ್ಮಯ್ಯ, ಕುಕ್ಕುನೂರು ಪ್ರಭಾಕರ್, ನಾಣಯ್ಯ, ಸೂರಜ್, ಕೊಂಗೇರ ಗಪ್ಪಣ್ಣ ಸೇರಿದಂತೆ ಇನ್ನಿತರರು ಇದ್ದರು.