ಸೋಮವಾರಪೇಟೆ, ಜೂ. 24: ತಾ. 22ರಂದು ಸಂಜೆ 4 ಗಂಟೆ ಸುಮಾರಿಗೆ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಹೋದ ಯುವಕ ಮನೋಜ್‍ನ ಶವ ಮೂರು ದಿನವಾದರೂ ಪತ್ತೆಯಾಗಿಲ್ಲ. ಪುಷ್ಪಗಿರಿ ಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜಲಪಾತದಲ್ಲಿ ನೀರಿನ ಹರಿವು ಅಧಿಕಗೊಂಡಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ.

ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೂ ಕಾರ್ಯಾಚರಣೆ ನಡೆಸಿದ್ದು, ಯಶಸ್ಸು ಕಾಣಲಿಲ್ಲ. ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ, ಎಎಸ್‍ಐ ಪುಟ್ಟಪ್ಪ ಅವರು ಇತರ ಸಿಬ್ಬಂದಿಗಳೊಂದಿಗೆ ಮುಳುಗುತಜ್ಞರಾದ ಕುಮಾರಳ್ಳಿ ಗ್ರಾಮದ ಪ್ರಸನ್ನ, ಹುಣಸೂರಿನ ಫಕೀರಪ್ಪ, ಗರಗಂದೂರಿನ ಲತೀಫ್ ಸೇರಿದಂತೆ ಇತರರೊಂದಿಗೆ ಜಲಪಾತದ ಬಳಿ ಶೋಧ ಕಾರ್ಯ ನಡೆಸಿದ್ದಾರೆ.

ಪೊಲೀಸ್ ಪೇದೆಗಳಾದ ಜಗದೀಶ್, ಶಿವಕುಮಾರ್, ಕುಮಾರ್, ಸಂದೇಶ್ ಅವರುಗಳು ಸಮವಸ್ತ್ರ ಕಳಚಿಟ್ಟು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಕುಮಾರಧಾರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ವಿದ್ಯುತ್ ಉತ್ಪಾದನಾ ಘಟಕದ ಡ್ಯಾಂನ್ನು ಬಂದ್ ಮಾಡಿ ನೀರಿನ ಹರಿವನ್ನು ಕೊಂಚ ಮಟ್ಟಿಗೆ ತಡೆಹಿಡಿದು ಜಲಪಾತದಲ್ಲಿ ಹುಡುಕಾಟ ನಡೆಸಿದರೂ ಯಾವದೇ ಕುರುಹು ಪತ್ತೆಯಾಗಿಲ್ಲ.

ಬೃಹತ್ ಬಂಡೆಕಲ್ಲುಗಳ ನಡುವೆ ಕಂದಕದಂತಹ ಸ್ಥಳಗಳಿದ್ದು, ನೀರಿನ ಭೋರ್ಗರೆತ ಅಧಿಕವಾಗಿರುವ ಹಿನ್ನೆಲೆ ಕಾರ್ಯಾಚರಣೆಗೆ ತಡೆಯಾಗಿದೆ. ಭೋರ್ಗರೆವ ನೀರನ್ನೂ ಲೆಕ್ಕಿಸದೇ ಹಗ್ಗ ಕಟ್ಟಿಕೊಂಡ ಮುಳುಗು ತಜ್ಞರು ಜಲಪಾತದಲ್ಲಿ ಹುಡುಕಾಟ ನಡೆಸಿದರೂ ಮೃತ ಮನೋಜ್‍ನ ದೇಹ ಪತ್ತೆಯಾಗಿಲ್ಲ.

ನಿನ್ನೆ ದಿನ ಮೃತನ ತಾಯಿ ಪರಮೇಶ್ವರಿ ಅವರು ಜಲಪಾತದ ಬಳಿ ಮಗನಿಗಾಗಿ ರೋದಿಸಿ ಹಿಂತೆರಳಿದ್ದು, ಇಂದು ಮನೋಜ್‍ನ ಸಹೋದರಿ ಸ್ಥಳದಲ್ಲಿ ಸಹೋದರನಿಗಾಗಿ ಅಳುತ್ತಾ ಕಾದು ಕುಳಿತಿದ್ದ ದೃಶ್ಯ ಮನಕಲಕುವಂತಿತ್ತು.

ಮಳೆ, ದಟ್ಟ ಮಂಜು ಕವಿದಿರುವದೂ ಸಹ ಕಾರ್ಯಾಚರಣೆಗೆ ತೊಡಕಾಗಿದ್ದು, ತಾ. 25ರಂದು (ಇಂದು) ಮತ್ತೊಮ್ಮೆ ಹುಡುಕಾಟ ನಡೆಸಲಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಭದ್ರತಾ ಕ್ರಮಕ್ಕೆ ಒತ್ತು-ಶಾಸಕ ರಂಜನ್

ಮಲ್ಲಳ್ಳಿ ಜಲಪಾತದಲ್ಲಿ ಆಗಾಗ್ಗೆ ನಡೆಯುತ್ತಿರುವ ದುರಂತಗಳ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದ್ದು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಸಾಕಷ್ಟು ಅಭಿವೃದ್ಧಿ ಹಾಗೂ ಮುಂಜಾಗ್ರತಾ ಫಲಕಗಳನ್ನು ಅಳವಡಿಸಿದ್ದರೂ ಸಹ ಇಂತಹ ದುರಂತಗಳು ಮರುಕಳಿಸುತ್ತಿರುವದು ದುರದೃಷ್ಟ. ತಕ್ಷಣವೇ ಜಲಪಾತಕ್ಕೆ ತೆರಳಿ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದು, ಭದ್ರತಾ ಕ್ರಮ ಕೈಗೊಳ್ಳಲಾಗುವದು ಎಂದು ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದ್ದಾರೆ.