ಗೋಣಿಕೊಪ್ಪ ವರದಿ, ಜೂ. 24 : ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಪರಿಗಣಿಸಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಹಾಗೂ ಕೆಎಸ್‍ಸಿಎಸ್‍ಟಿ ಹಣಕಾಸು ಸಂಸ್ಥೆಯಿಂದ ವಿವಿಧ ಮಾದರಿಗಳ ಅನುಷ್ಠಾನಕ್ಕೆ ಹೆಚ್ಚಿನ ಧನಸಹಾಯದ ಪ್ರೋತ್ಸಾಹ ದೊರಕುವಂತಾಗಿದೆ.

ಇಂಜಿನಿಯರ್ ವಿಭಾಗದ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಗೋಷ್ಠಿಗೆ ಆಯ್ಕೆಯಾಗಿದ್ದು, ತಮ್ಮದೇ ಚಿಂತನೆಯ ಮಾದರಿಗಳ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಸಿವಿಲ್ ವಿಭಾಗದ ತಂಡ ಟಾಲ್ ಬಿಲ್ಡಿಂಗ್ ಡಿಸೈನ್ ವಿಷಯದಲ್ಲಿ ಐಐಟಿ ಬಾಂಬೆ ಆಯೋಜಿದ ಇಂಟರ್‍ನೇಷನಲ್ ಟೆಕ್ನಿಕಲ್ ಚಾಂಪಿಯನ್‍ಷಿಪ್‍ನಲ್ಲಿ ಪಾಲ್ಗೊಂಡು ಮೊದಲ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ಬಿ.ಕೆ ತೃಪ್ತಿ, ರಾಹುಲ್ ಕೃಷ್ಣ, ಪುನೀತ್ ವಿಶ್ವಾಸ್, ವಿಶ್ವನಾಥ್ ಹಾಗೂ ಹರ್ಷಿತ್ ಪಾಲ್ಗೊಳ್ಳಲಿದ್ದಾರೆ.

ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಪ್ರಾಜೆಕ್ಟ್‍ಗಳು ಮೈಸೂರು ವಲಯ ಮಟ್ಟದಲ್ಲಿ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ಪಡೆದುಕೊಂಡಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದ 2 ವಿಷಯಗಳಲ್ಲಿ ಮಿಲಿಶ್ ಹಾಗೂ ಅರ್ಪಿತಾ ನೇತೃತ್ವದ ತಂಡ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ತಲಾ 1 ವಿಷಯದಲ್ಲಿ ಪ್ರಮೋದ್ ಹಾಗೂ ರಿಶಾಬ್ ಬೋಪಯ್ಯ ಪ್ರಸ್ತುತ ಪಡಿಸಿದ ಪ್ರಾಜೆಕ್ಟ್‍ಗಳು ಪ್ರಶಸ್ತಿ ಗಳಿಸಿ ಕರ್ನಾಟಕ ಕೌನ್ಸಿಲ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಆಯೋಜಿಸಿರುವ ರಾಜ್ಯಮಟ್ಟದ ವಿಚಾರಗೋಷ್ಠಿಗೆ ಆಯ್ಕೆಯಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ತಂಡ ಮೈಸೂರಿನ ಜಿಎಸ್‍ಎಸ್‍ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಬೆಸ್ಟ್ ಪೇಪರ್ ಪ್ರಶಸ್ತಿ ಪಡೆದಿದೆ. ತಂಡದಲ್ಲಿ ಎಸ್.ಕೆ ಲಹರಿ, ಬಿ.ಎನ್ ಅರ್ಚನಾ, ಪಿ.ಕೆ ಗೌತಮ್, ವಿಷ್ಣು ಪ್ರಸಾದ್ ಪಾಲ್ಗೊಂಡಿದ್ದರು.

ಮೆಕ್ಯಾನಿಕಲ್ ವಿಭಾಗದ ತಂಡ ಕರ್ನಾಟಕ ಕೌನ್ಸಿಲ್ ಆಫ್ ಸೈನ್ಸ್ ಅಂಡ್ ಟೆಕ್ನೋಲಜಿ ಆಯೋಜಿಸಿದ್ದ ವಲಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಫರ್ಧೆಗೆ ಕೆ.ಬಿ ಅಪ್ಪಚ್ಚು, ಎನ್.ಎಂ ಬೋಪಣ್ಣ, ಎಂ.ಟಿ ರಿಷಬ್ ಬೋಪಯ್ಯ ತಂಡವಾಗಿ ಪಾಲ್ಗೊಂಡಿದ್ದರು.

ವಿಟಿಯು ಬೆಳಗಾವಿಯಲ್ಲಿ ನಡೆಯಲಿರುವ ಪ್ರಾಜೆಕ್ಟ್ ಪ್ರದರ್ಶನ ಹಾಗೂ ಸ್ಫರ್ಧೆಯಲ್ಲಿ ಭಾಗವಹಿಸಲು ಸಿವಿಲ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ತಂಡ ಭಾಗವಹಿಸಲಿದೆ.

ಹಣ ಸಹಾಯ

ಕರ್ನಾಟಕ ಕೌನ್ಸಿಲ್ ಆಫ್ ಸೈನ್ಸ್ ಅಂಡ್ ಟೆಕ್ನೋಲಜಿ ಎಂಬ ಹಣಕಾಸು ಸಂಸ್ಥೆಯು 10 ಮಾದರಿಗಳಿಗೆ ಪ್ರೋತ್ಸಾಹ ಧನ ನೀಡಿದೆ. ಒಂದು ಮಾದರಿಗೆ ತಲಾ 5 ಸಾವಿರ ಹಾಗೂ ವಿವಿಧ 6 ಮಾದರಿಗಳಿಗೆ ತಲಾ 8 ಸಾವಿರ ನೀಡಿ ವಿದ್ಯಾರ್ಥಿಗಳಲ್ಲಿನ ಚಿಂತನಾಶಕ್ತಿಗೆ ಬೆಳಕು ತೋರಿಸುವ ಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ವಿವಿ ಮಾತ್ರವಲ್ಲದೆ ಬೇರೆ ಸಂಸ್ಥೆಗಳಿಂದ ಹಣಕಾಸು ನೆರವು ದೊರುಕುವದರಿಂದ ಹೆಚ್ಚು ಮಾದರಿಗಳ ಅನುಷ್ಠಾನಕ್ಕೆ ಪೂರಕವಾಗುತ್ತಿದೆ. - ವರದಿ : ಸುದ್ದಿಪುತ್ರ