ಮಡಿಕೇರಿ, ಜೂ. 24: ಮಡಿಕೇರಿ ಸೇರಿದಂತೆ ರಾಜ್ಯದ ಹಲವೆಡೆ ಎಟಿಎಂ ಹಣ ಲಪಟಾಯಿಸಿ ಗ್ರಾಹಕರಿಗೆ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆ ಪ್ರಕರಣ ಭೇದಿಸಿದ ಇಲಾಖೆಯ ಸಿಬ್ಬಂದಿಗಳಿಗೆ ಎಸ್ಪಿ ರಾಜೇಂದ್ರ ಪ್ರಸಾದ್ ನಗದು ಬಹುಮಾನ ಘೋಷಿಸಿದ್ದಾರೆ.

ತಾ. 31/05/2018 ರಂದು ಸಮಯ ಮಧ್ಯಾಹ್ನ 1 ಗಂಟೆಗೆ ಇಲ್ಲಿಗೆ ಸಮೀಪದ ಬಿಳಿಗೇರಿ ಗ್ರಾಮದ ನಿವಾಸಿ ಕೆ.ಯು. ಲೋಕೇಶ್ ನಗರದ

(ಮೊದಲ ಪುಟದಿಂದ) ಕೆನರಾ ಬ್ಯಾಂಕ್‍ನ ಎ.ಟಿ.ಎಂ. ಕಾರ್ಡಿನಿಂದ, ಮಡಿಕೇರಿ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿಜಯ ಬ್ಯಾಂಕ್ ಎ.ಟಿ.ಎಂ.ಗೆ ಹಣ ಪಡೆಯಲು ಹೋಗಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿಯು ಹಣ ಡ್ರಾ ಮಾಡುವ ವೇಳೆ ಸಹಕರಿಸಲು ತಾನೇ ಮುಂದಾಗಿ ಬಂದು ಸದರಿ ವ್ಯಕ್ತಿಯು ರೂ. 10,000 ಹಣವನ್ನು ಡ್ರಾ ಮಾಡಿ ಪಿರ್ಯಾದಿ ಕೈಗೆ ನೀಡಿದ್ದಾನೆ. ಅದರೊಂದಿಗೆ ಎ.ಟಿ.ಎಂ. ಕಾರ್ಡ್ ಸಹ ನೀಡಿರುತ್ತಾನೆ. ಬಳಿಕ ತಾ. 4ರಂದು ಪಿರ್ಯಾದಿ ಮಡಿಕೇರಿ ನಗರಕ್ಕೆ ಬಂದು ಎ.ಟಿ.ಎಂ. ಕಾರ್ಡ್ ಪರಿಶೀಲಿಸಿದ್ದು, ಎ.ಟಿ.ಎಂ. ಕಾರ್ಡ್ ಇನ್‍ವ್ಯಾಲಿಡ್ ಎಂದು ಬಂದ ಮೇರೆಗೆ ಸಂಶಯಗೊಂಡು ಕೆನರಾ ಬ್ಯಾಂಕ್‍ಗೆ ತೆರಳಿ ಎ.ಟಿ.ಎಂ. ಕಾರ್ಡ್ ಪರಿಶೀಲಿಸಲು ಬ್ಯಾಂಕಿನ ಸಿಬ್ಬಂದಿಗೆ ನೀಡಿದಾಗÀ ಅದು ಪಿರ್ಯಾದಿಯವರ ಎ.ಟಿ.ಎಂ. ಕಾರ್ಡ್ ಆಗಿರದೆ ಬೇರೆ ಯಾರಾದೋ ಎ.ಟಿ.ಎಂ. ಕಾರ್ಡ್ ಆಗಿತ್ತು. ನಂತರ ಪಿರ್ಯಾದಿ ತನ್ನ ಖಾತೆಯನ್ನು ಪರಿಶೀಲಿಸಿದ್ದು, ಸದರಿ ಖಾತೆಯಿಂದ ಎ.ಟಿ.ಎಂ. ಬದಲಿಸಿಕೊಂಡಿದ್ದ ವ್ಯಕ್ತಿ ತಾ. 31/05/2018 ರಿಂದ 04/06/2018 ರವರೆಗೆ ನಿರಂತರವಾಗಿ ಒಟ್ಟು ರೂ.1,90,000 ಹಣವನ್ನು ಡ್ರಾ ಮಾಡಿ ವಂಚಿಸಿರುವದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಡಿಕೇರಿ ನಗರ ಠಾಣೆಗೆ ದೂರು ಸಲ್ಲಿಸಿದ್ದು, ಮೊ.ಸಂಖ್ಯೆ 107/2018 ಕಲಂ: 417, 420 ಐಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸದರಿ ಪ್ರಕರಣದ ತನಿಖೆಯನ್ನು ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಸುಂದರ್ ರಾಜ್ ನೇತೃತ್ವದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಪಿ.ಎಸ್. ಷಣ್ಮುಗಂ ಮಾರ್ಗದರ್ಶನ ದಲ್ಲ್ಲಿ ನಡೆಸಲಾಗಿದೆ. ಪ್ರಕರಣದ ಆರೋಪಿ ಮತ್ತು ವಂಚನೆಗೆ ಒಳಗಾದ ಹಣವನ್ನು ಪತ್ತೆ ಮಾಡುವ ಬಗ್ಗೆ ಎ.ಎಸ್.ಐ ಸುಬ್ಬಯ್ಯ ಮತ್ತು ಹೆಡ್ ಕಾನ್‍ಸ್ಟೇಬಲ್ ಸಿದ್ದಾರ್ಥ, ಸಿಬ್ಬಂದಿ ಗಳಾದ ದಿನೇಶ್, ಮಧುಸೂದನ್ ಅವರನ್ನು ನೇಮಕ ಮಾಡಿ ಸದರಿ ಎಟಿಎಂ ರೂಂನ ಸಿ.ಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಹಾಗೂ ಸಿ.ಡಿ.ಆರ್ ವಿಭಾಗದ ಗಿರೀಶ್, ರಾಜೇಶ್ ಅವರ ಸಹಾಯದಿಂದ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ತಾ.23ರಂದು ಆರೋಪಿಯ ಸುಳಿವಿನ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಮೈಸೂರಿನ ಟೆರಿಷನ್ ಕಾಲೇಜಿನ ಬಳಿ ವಿನಾಯಕ ಬಾರ್‍ನ ಹಿಂಭಾಗ ವೆಂಕಟೇಶ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ ರಾಜು ಪ್ರಹ್ಲ್ಲಾದ್ ಕುಲಕರ್ಣಿ (46) ಮೆಕಾನಿಕ್ ಕೆಲಸ, ಬನ್ನೂರು ವೃತ್ತ, ಸಿದ್ದಾರ್ಥ ನಗರ ಮೈಸೂರು ಎಂಬಾತ ಸೆರೆಯಾಗಿದ್ದಾನೆ.

ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು, ಆರೋಪಿಯು ವಿಚಾರಣೆಯ ಸಮಯದಲ್ಲಿ ಕೃತ್ಯವನ್ನು ಒಪ್ಪಿಕೊಂಡಿರುತ್ತಾನೆ. ಈತ ಮೂಲತಃ ಬೆಳಗಾವಿ ನಿವಾಸಿಯಾಗಿದ್ದು, ಇದೇ ರೀತಿಯ ಪ್ರಕರಣಗಳು ಬೆಂಗಳೂರು ನಗರದ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 5, ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಸದರಿ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, 6 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಉದ್ಘೊಷಣೆ ಹೊರಡಿಸಲಾಗಿದೆ. ಅಲ್ಲದೆ, ಆರೋಪಿ ವಿರುದ್ಧ ಭದ್ರಾವತಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು; ಅದು ವಿಚಾರಣಾ ಹಂತದಲ್ಲಿದೆ. ಇದಲ್ಲದೆ ಸದರಿ ಆರೋಪಿಯ ವಿರುದ್ಧ ಹುಬ್ಬಳ್ಳಿ ಧಾರವಾಡದಲ್ಲಿ 13 ಪ್ರಕರಣಗಳು ದಾಖಲಾಗಿದೆ. ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿರುತ್ತದೆ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ.107/2018 ಕಲಂ:417,420 ಐಪಿಸಿ ಪ್ರಕರಣದಲ್ಲಿ ಆರೋಪಿಯು ಕೃತ್ಯ ಎಸಗಿದಾಗ ಡ್ರಾ ಮಾಡಿದ 1,90 ಲಕ್ಷ ರೂ.ಗಳಲ್ಲಿ, ಆರೋಪಿಯು ಖರ್ಚು ಮಾಡಿ ತನ್ನ ಬಳಿ ಇಟ್ಟುಕೊಂಡಿದ್ದ 1,20 ಲಕ್ಷ ರೂ.ಗಳನ್ನು ಅಮಾನತ್ತು ಪಡಿಸಿಕೊಳ್ಳ ಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, ಪ್ರಕರಣವು ವಿಚಾರಣೆ ಯಲ್ಲಿದೆ. ಆರೋಪಿಯನ್ನು ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ಯವರನ್ನು ಪ್ರಶಂಶಿಸಿ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಬಹುಮಾನ ಘೋಷಿಸಿದ್ದಾರೆ.