ಕೂಡಿಗೆ, ಜೂ. 25 : ಹಾಲು ಉತ್ಪಾದಕರ ಸಹಾಕರ ಸಂಘಗಳ ಮೂಲಕ ರೈತರಿಂದ ಹಾಲು ಸಂಗ್ರಹ ಮಾಡುವದರಲ್ಲಿ ದೇಶದಲ್ಲೆ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಅದರಲ್ಲಿಯೂ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಒಕ್ಕೂಟವಾಗಿರುವ ಹಾಸನ ಹಾಲು ಒಕ್ಕೂಟಕ್ಕೆ ಪ್ರತಿದಿನ ಜಿಲ್ಲೆಯ ಸ್ಥಳೀಯ ಹಾಲು ಉತ್ಪಾದಕರ ಸಂಘದ ಮೂಲಕ ದಿನಕ್ಕೆ 10 ಲಕ್ಷ ಲೀಟರಿಗೂ ಅಧಿಕ ಹಾಲು ಸಂಗ್ರಹವಾಗುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಹೇಳಿದರು.

ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಗ್ರಹವಾಗುವ 10 ಲಕ್ಷ ಲೀಟರ್ ಹಾಲಿನಲ್ಲಿ 1.50 ಲಕ್ಷ ಲೀಟರ್ ಹಾಲು ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿವೆ. ಇನ್ನುಳಿದ ಹಾಲಿನಲ್ಲಿ ಹಾಲಿನ ಪುಡಿ ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಸಹಕಾರ ಸಂಘಗಳಿಗೆ ಹಾಲನ್ನು ನೀಡುವ ರೈತರಿಗೆ ಹಾಲಿನ ದರ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ರೈತರ ಹಿತದೃಷ್ಟಿಯಿಂದ ರೈತರಿಗೆ ಹೆಚ್ಚು ಸಹಾಯಧನ ನೀಡಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಿ, ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಕೆ. ಜೈಪ್ರಕಾಶ್ ಮಾತನಾಡುತ್ತಾ, ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ವಿಶೇಷ ಅನುದಾನ ನೀಡಲಾಗುತ್ತಿದೆ. ಅನುದಾನದ ಸದ್ಬಳಕೆಯನ್ನು ಸಹಕಾರ ಸಂಘಗಳ ಆಡಳಿತ ಮಂಡಳಿಯವರು ಚರ್ಚಿಸಿ ಪತ್ರ ವ್ಯವಹರಿಸಿದ್ದಲ್ಲಿ ಪ್ರತಿಯೊಂದು ಸಂಘಗಳಿಗೆ 2 ಲಕ್ಷ ಕ್ಕೂ ಅಧಿಕ ಹಣವನ್ನು ಪ್ರೋತ್ಸಾಹಧನವಾಗಿ ನೀಡಲಾಗುವದು ಎಂದರು.

ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದವರಿಗೆ ನೀಡಿದ ಹಣವನ್ನು ಬಳಕೆ ಮಾಡಿಕೊಂಡು ಇದ್ದ ಕಟ್ಟಡಕ್ಕೆ ಮೇಲಂತಸ್ತನ್ನು ನಿರ್ಮಿಸಿರುವದಕ್ಕೆ ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಟಿ.ಅರುಣ್‍ಕುಮಾರ್ ಮಾತನಾಡಿ, ಈ ನೂತನ ಕಟ್ಟಡ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದಿಂದ ರೂ.2 ಲಕ್ಷ, ಕೆ.ಎಂ.ಎಫ್‍ನಿಂದ ರೂ.3ಲಕ್ಷ ಹಾಗೂ ಸಂಘವು ಗಳಿಸಿದ ಲಾಭಾಂಶವನ್ನು ಬಳಸಿ 9 ಲಕ್ಷ ರೂ ವೆಚ್ಚದಲ್ಲಿ ಸಂಘದ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರು ಹೆಚ್ಚು ಹಾಲನ್ನು ನೀಡಬೇಕು ಎಂದು ಕೋರಿದರು.

ಸಮಾರಂಭದಲ್ಲಿ ಕೂಡಿಗೆ ಡೈರಿಯ ಉಪ ವ್ಯವಸ್ಥಾಪಕ ನಂದೀಶ್, ಸಹಾಯಕ ವ್ಯವಸ್ಥಾಪಕ ಹೆಚ್.ಎ. ಪ್ರಕಾಶ್, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಅದ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಹಾಗೂ ಕೂಡುಮಂಗಳೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ತರು ಇದ್ದರು.