ಮಡಿಕೇರಿ, ಜೂ. 26: ನೇರ ನೇಮಕಾತಿ ಕ್ರಮದಿಂದಾಗಿ ವಿದ್ಯಾರ್ಥಿ ನಿಲಯಗಳ ಹೊರಗುತ್ತಿಗೆ ಆಧಾರದ ‘ಡಿ’ ವರ್ಗದ ನೌಕರರು ಕೆಲಸ ಕಳೆದುಕೊಳ್ಳುವ ಅತಂಕವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪ್ರಮುಖರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬೇಡಿಕೆಗಳು

ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಗುತ್ತಿಗೆ ಆಧಾರದ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಏಕರೂಪದ ಸೇವಾ ನಿಯಮಾವಳಿ ಅಂತಿಮಗೊಳಿಸಿ ಜಾರಿಗೊಳಿಸಬೇಕು. ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹೊರಗುತ್ತಿಗೆ ನೌಕರರ ಸೇವಾ ಸಮೀಕ್ಷೆ ಸಂಪೂರ್ಣ ಆಗುವವರೆಗೆ ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು ಎಂದು ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ.

ಬೇಡಿಕೆ ಈಡೇರಿಕೆಗೆ ಸರಕಾರ ಮುಂದಾಗದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ನೀಡುವ ಸಂದರ್ಭ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪ್ರಮುಖರಾದ ಹನುಮೇಗೌಡ, ಹೆಚ್.ಎಸ್. ಯೋಗೇಶ್, ಕುಮಾರ್, ಲತಾ, ಜ್ಯೋತಿ, ಕುಸುಮ ಮತ್ತಿತರರು ಹಾಜರಿದ್ದರು.