ಮಡಿಕೇರಿ, ಜೂ. 25: ಮಳೆ, ಗಾಳಿ, ಗುಡುಗು, ಮಿಂಚಿನ ಆರ್ಭಟದ ಮಧ್ಯೆಯೇ ಪ್ರಾಣವನ್ನೇ ಪಣಕ್ಕಿಟ್ಟು ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಅವಿರತ ಶ್ರಮಿಸುತ್ತಿರುವ ಚೆಸ್ಕಾಂ ಸಿಬ್ಬಂದಿಗಳನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಮಡಿಕೇರಿಯ ಚೆಸ್ಕಾಂ ಸಿಬ್ಬಂದಿಗಳಾದ ಬಲರಾಮ್ (34 ವರ್ಷಗಳ ಸೇವೆ), ಧರ್ಮ (22 ವರ್ಷಗಳ ಸೇವೆ) ರತ್ನಯ್ಯ, ಶಿವರಾಮ್, ನಾಗಯ್ಯ (20 ವರ್ಷಗಳ ಸೇವೆ), ಶಿವಣ್ಣ (18 ವರ್ಷಗಳ ಸೇವೆ) ಗಣೇಶ್ (6 ವರ್ಷಗಳ ಸೇವೆ) ಇವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ., ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭ ಜನರಿಗೆ ಬೆಳಕು ನೀಡುವ ನಿಟ್ಟಿನಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಚೆಸ್ಕಾಂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯುತ್ ಕಡಿತಗೊಂಡಾಗ ಚೆಸ್ಕಾಂಗೆ ಹಿಡಿಶಾಪ ಹಾಕುವ ಜನರು ಕೊನೆಗೆ ವಿದ್ಯುತ್ ಸಂಪರ್ಕ ಮರಳಿ ಬಂದಾಗ ಅಂಥ ಸಿಬ್ಬಂದಿಗಳ ಶ್ರಮವನ್ನು ಶ್ಲಾಘಿಸುವದನ್ನೇ ಮರೆಯುತ್ತಾರೆ. ಮಳೆಗಾಲದಲ್ಲಿ ಸೈನಿಕರಂತೆ ಕಾರ್ಯೋನ್ಮುಖರಾಗುವ ಇಂಥ ಪ್ರಾಮಾಣಿಕ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಸಾರ್ವಜನಿಕರ ವತಿಯಿಂದ ಚೆಸ್ಕಾಂ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭ 25 ವರ್ಷಗಳ ವೈದ್ಯಕೀಯ ವೃತ್ತಿ ಪೂರೈಸಿ 10 ಸಾವಿರಕ್ಕೂ ಅಧಿಕ ಸಂತಾನಹರಣದ 10 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ನಡೆಸಿದ ಮಿಸ್ಟಿ ಹಿಲ್ಸ್ ನ ಡಾ.ಎನ್.ಎಸ್ ನವೀನ್, ರೋಟರಿ ಜಿಲ್ಲಾ ರಾಜ್ಯಪಾಲರಾಗಿ ಕಳೆದ 1 ವರ್ಷದಿಂದ ಅತ್ಯುತ್ತಮ ಕಾರ್ಯನಿರ್ವಹಿಸಿದ ಮಾತಂಡ ಸುರೇಶ್ ಚಂಗಪ್ಪ,ಜಿಲ್ಲಾ ಸಹಾಯಕ ರಾಜ್ಯಪಾಲ ಮಹೇಶ್ ನಲ್ವಾಡೆ, ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಮಿಸ್ಟಿ ಹಿಲ್ಸ್ ಗೆ ಮೊದಲ ಬಾರಿಗೆ ಗ್ಲೋಬಲ್ ಗ್ರ್ಯಾಂಟ್ ಯೋಜನೆಯಾಗಿ ವಿಜ್ಞಾನ ವಾಹಿನಿ ವಾಹನ ಲಭಿಸಲು ಕಾರಣಕರ್ತರಾದ ರೋಟರಿ ಸದಸ್ಯರಾದ ಕೆ.ಕೆ.ವಿಶ್ವನಾಥ್, ಡಾ.ಸಿ.ಆರ್.ಪ್ರಶಾಂತ್, ರೋಟರಿ ಜಿಲ್ಲಾ ವಾರ್ತಾ ಸಂಚಿಕೆ ಸಂಪಾದಕರಾಗಿದ್ದ ಬಿ.ಜಿ.ಅನಂತಶಯನ, ಸಾರ್ಜೆಂಟ್ ಎಟ್ ಆಮ್ರ್ಸ್ ಆಗಿ ಕಾರ್ಯನಿರ್ವಹಿಸಿದ್ದ ದೇವಣೀರ ತಿಲಕ್, ಜಿಲ್ಲಾ ಖಜಾಂಜಿ ಗೋಪಾಲಕೃಷ್ಣ, ರೋಟರಿ ಜಿಲ್ಲಾ ಸಮಾವೇಶ ಸಮಿತಿ ಅಧ್ಯಕ್ಷರಾಗಿದ್ದ ದೇವಣೀರ ಕಿರಣ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಿಸ್ಟಿ ಹಿಲ್ಸ್ ನ 1 ವರ್ಷದ ಸಾಧನೆ ಬಿಂಬಿಸುವ ವಿಶೇಷ ಸಂಚಿಕೆಯನ್ನು ಜೋನಲ್ ಲೆಫ್ಟಿನೆಂಟ್ ವಿನೋದ್ ಕುಶಾಲಪ್ಪ ಅನಾವರಣಗೊಳಿಸಿದರು. ಮಿಸ್ಟಿಹಿಲ್ಸ್ ಖಚಾಂಚಿ ಮೋಹನ್ ಪ್ರಭು, ನಿರ್ದೇಶಕ ಎಸ್.ಸಿ. ಹರೀಶ್ ಕುಮಾರ್, ಮಡಿಕೇರಿ ರೋಟರಿ ಅಧ್ಯಕ್ಷ ಪಿ.ಯು. ಪ್ರೀತಮ್, ಕಾರ್ಯದರ್ಶಿ ರತನ್ ತಮ್ಮಯ್ಯ, ಕುಶಾಲನಗರ ರೋಟರಿ ಅಧ್ಯಕ್ಷ ಪ್ರಕಾಶ್, ಶನಿವಾರಸಂತೆ ರೋಟರಿ ಅಧ್ಯಕ್ಷ ವಸಂತ್, ಗೋಣಿಕೊಪ್ಪ ರೋಟರಿ ಅಧ್ಯಕ್ಷ ದಿಲನ್ ಚಂಗಪ್ಪ, ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್.ರವಿಶಂಕರ್ ಸೇರಿದಂತೆ ರೋಟರಿ ವಲಯ 6 ರ ವಿವಿಧ ರೋಟರಿ ಪ್ರಮುಖರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ.ಸಂದೀಪ್ ವಂದಿಸಿದರು.