ಮಡಿಕೇರಿ, ಜೂ. 26: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿರುವ ಮುಚ್ಚುವ ಹಂತದಲ್ಲಿರುವ ಸರಕಾರಿ ಶಾಲೆಗಳನ್ನು ಗ್ರಾ.ಪಂ. ಸುಪರ್ದಿಗೆ ವಹಿಸಿದ್ದಲ್ಲಿ ಗ್ರಾ.ಪಂ.ನಿಂದ ಕಟ್ಟಡದ ಅಭಿವೃದ್ಧಿ ಮಾಡಿ ಸಾರ್ವಜನಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಪತ್ರ ಮುಖೇನ ವ್ಯವಹರಿಸಲು ತೀರ್ಮಾನಿಸಲಾಗಿದೆ.ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ವಿವರ ಪರಿಶೀಲನೆ ಸಂದರ್ಭ ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ ಅವರು ಹಮ್ಮಿಯಾಲ ಗ್ರಾಮದಲ್ಲಿ ಶಾಲಾ ಕಟ್ಟಡವಿದ್ದು, ಶಾಲೆಯಲ್ಲಿ ಮಕ್ಕಳಿಲ್ಲ. ಆದರೆ ಗ್ರಾಮದಲ್ಲಿ ಇತರ ಯಾವದೇ ಸರಕಾರಿ, ಕಟ್ಟಡವಿಲ್ಲದ ಕಾರಣ ಈ ಶಾಲೆಯನ್ನೇ ಚುನಾವಣೆ, ಮತ್ತಿತರ ಸಂದರ್ಭಗಳಲ್ಲಿ ದುರಸ್ತಿಪಡಿಸಿ ಬಳಸಿಕೊಳ್ಳಲಾಗುತ್ತಿದೆ. ಶಾಲೆಯನ್ನು ಗ್ರಾ.ಪಂ. ಸುಪರ್ದಿಗೆ ವಹಿಸಿದಲ್ಲಿ ಅಭಿವೃದ್ಧಿಪಡಿಸಿ ಸಮುದಾಯ ಭವನ ಮಾಡಿ ಸಾರ್ವಜನಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಚುನಾವಣಾ ಸಂದರ್ಭದಲ್ಲಂತೂ ಈ ಕಟ್ಟಡ ಅತ್ಯವಶ್ಯವೆಂದು ಸಲಹೆ ನೀಡಿದರು. ಧನಿಗೂಡಿಸಿದ ನಾಮ ನಿರ್ದೇಶಿತ ಸದಸ್ಯ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪುದಿಯತಂಡ ಸುಭಾಶ್ ಸೋಮಯ್ಯ ಅವರು ಶಿಕ್ಷಣ ಇಲಾಖೆಗೆ ದುರಸ್ತಿಪಡಿಸಲು ಸಾಧ್ಯವಿಲ್ಲವೆಂದು ಲಿಖಿತವಾಗಿ ಬರೆದು ಗ್ರಾ.ಪಂ. ಸುಪರ್ದಿಗೆ ವಹಿಸಿದರೆ ಗ್ರಾಮಕ್ಕೆ

(ಮೊದಲ ಪುಟದಿಂದ) ಸಮುದಾಯ ಭವನ ಮಾಡಿ ಕೊಳ್ಳಬಹುದು. ಶಾಲೆ ಬಿದ್ದು, ಸರಕಾರಿ ಸ್ವತ್ತುಗಳು ನಾಶವಾಗುವದಕ್ಕಿಂತ ಒಂದು ಕಟ್ಟಡವನ್ನು ಉಳಿಸಿಕೊಂಡಂತಾ ಗುತ್ತದೆ. ಬಹುತೇಕ ಶಾಲೆಗಳು ನಾಶವಾಗುತ್ತಿವೆ. ವಣಚಲುವಿನಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಸ್ತೂರು ಶಾಲೆ ಕುಸಿದು ಬಿದ್ದು ಸರಕಾರಿ ಹಣ ಮಣ್ಣು ಪಾಲಾಗಿದೆ ಎಂದು ಗಮನಕ್ಕೆ ತಂದರು.

ಈ ಸಂದರ್ಭ ಎಲ್ಲ ಸದಸ್ಯರುಗಳು ವಿನಾಶದ ಅಂಚಿನಲ್ಲಿರುವ ಶಾಲೆಗಳನ್ನು ಗುರುತಿಸಿ, ಗ್ರಾ.ಪಂ. ಸುಪರ್ದಿಗೆ ನೀಡಬಹುದೇ ಎಂಬ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರಲ್ಲಿ ವಿಚಾರಿಸಿದರು. ಈ ಬಗ್ಗೆ ಇಲಾಖೆ ತೀರ್ಮಾನ ಕೈಗೊಳ್ಳ ಬೇಕೆಂದು ಅಧಿಕಾರಿ ಹೇಳಿದರು. ಈ ಸಂದರ್ಭ ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಚ್ಚುವ ಹಂತದ ಶಾಲೆಗಳಿದ್ದರೆ ಗುರುತಿಸಿ ಗ್ರಾ.ಪಂ. ಸುಪರ್ದಿಗೆ ವಹಿಸುವಂತೆ ಕೋರಿ ನಿರ್ಣಯ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಳುಹಿಸಲಾಗುವದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ತಾ.ಪಂ.ನ ನಿರ್ಣಯದಂತೆ ಇಲಾಖೆಗೆ ಪತ್ರ ಬರೆಯುವಂತೆ ಹೇಳಿದರು.

ತಹಶೀಲ್ದಾರ್ ವಿರುದ್ಧ ದೂರು

ಕಂದಾಯ ಇಲಾಖೆಯಲ್ಲಿ ಕೆಲಸ-ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಮಳೆ ಹಾನಿ ಪರಿಹಾರ ವಿತರಣೆಯಲ್ಲಿ ತಹಶೀಲ್ದಾರರು ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಆರೋಪಿಸಿದರು. ಇತ್ತೀಚೆಗೆ ಕಂದಾಯ ಸಚಿವರು ಬಂದಿದ್ದಾಗ ತಹಶೀಲ್ದಾರರು ಅಸಮರ್ಪಕ ಉತ್ತರ ನೀಡಿದ್ದು, ಸಚಿವರ ಆದೇಶದ ಬಳಿಕವೂ ಪರಿಹಾರ ವಿತರಣೆ ಮಾಡಿಲ್ಲ. ಹಾಗಾದರೆ ಕಂದಾಯ ಇಲಾಖೆಯ ಉದ್ದೇಶವಾದರೂ ಏನು? ಯಾವದೇ ಪರಿಹಾರ ನೀಡಿಲ್ಲವೆಂದು ತಹಶೀಲ್ದಾರರು ಹಾಗೂ ಜಿಲ್ಲಾದಿಕಾರಿಗಳ ಮೇಲೆ ನಿರ್ಣಯ ಮಾಡಿ ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿದರು. ದಬ್ಬಡ್ಕ ಶ್ರೀಧರ್, ಅಪ್ರು ರವೀಂದ್ರ ಹಾಗೂ ಇನ್ನಿತರರು ಇದಕ್ಕೆ ಧನಿಗೂಡಿಸಿ ಕೂಡಲೇ ಫ್ಯಾಕ್ಸ್ ಮೂಲಕ ಕಳುಹಿಸುವಂತೆ ಒತ್ತಾಯಿಸಿದರು.

ಸರಕಾರಿ ಕಟ್ಟಡಕ್ಕೆ ಪರಿಹಾರವಿಲ್ಲ

ಪ್ರಕೃತಿ ವಿಕೋಪದಡಿ ಸರಕಾರಿ ಶಾಲೆ ಸೇರಿದಂತೆ ಸರಕಾರಿ ಕಟ್ಟಡಕ್ಕೆ ಹಾನಿಯಾದರೆ ಯಾವದೇ ಪರಿಹಾರ ಇಲ್ಲವೆಂಬ ವಿಚಾರ ಸಭೆಯಲ್ಲಿ ಗಂಭೀರ ಸ್ವರೂಪ ಪಡೆಯಿತು. ಅರೆಕಾಡಿನಲ್ಲಿ ಶಾಲಾ ಕೊಠಡಿ ಮೇಲೆ ಮರಬಿದ್ದು, ಹಾನಿಯಾಗಿದೆ. ದುರಸ್ತಿಪಡಿಸಲು ಅನುದಾನವಿದೆಯೇ ಎಂದು ಸದಸ್ಯ ಅಪ್ರು ರವೀಂದ್ರ ಪ್ರಶ್ನಿಸಿದರು. ಈ ಸಂದರ್ಭ ಅಧ್ಯಕ್ಷರು ತಾ.ಪಂ.ನಲ್ಲಿ ಯಾವದೇ ಅನುದಾನವಿಲ್ಲ ಎಂದಾಗ ನಾಗೇಶ್ ಕುಂದಲ್ಪಾಡಿ ಮಳೆ ಹಾನಿ ಪರಿಹಾರ ನಿಧಿಯಲ್ಲಿ ಪರಿಹಾರ ನೀಡಬಹುದಲ್ಲವೇ ಎಂದು ಹೇಳಿದರು. ಸಭೆಯಲ್ಲಿದ್ದ ಕಂದಾಯ ಇಲಾಖಾ ಸಿಬ್ಬಂದಿ ಸರಕಾರಿ ಕಟ್ಟಡಗಳಿಗೆ ಯಾವದೇ ಪರಿಹಾರವಿಲ್ಲವೆಂದು ಮಾಹಿತಿ ನೀಡಿದರು. ಇದರಿಂದ ಗರಂ ಆದ ನಾಗೇಶ್, ಶಾಲೆಗಳಿಗೆ ಹಾನಿಯಾದರೆ ಪರಿಹಾರವಿಲ್ಲವೆಂದಾದರೆ ಏನು ಅರ್ಥ; ಈ ಬಗ್ಗೆ ಸರಕಾರಿ ಆದೇಶದ ಮೇಲೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಹೇಳಿದರು.

ಅಧ್ಯಕ್ಷೆ ಶೋಭಾ ಮೋಹನ್ ಅವರು, ಜಿಲ್ಲಾಧಿಕಾರಿಗಳು ಶಾಲೆಗಳತ್ತಲೂ ಪರಿಶೀಲನೆ ಮಾಡಬೇಕು. ಅವರಿಗೂ ಜವಾಬ್ದಾರಿ ಇದೆ; ಹಾಡಿಗಳಿಗೆ, ಅಲ್ಲಿ ಇಲ್ಲಿ ಹೋಗುತ್ತಾರೆ. ಈ ಬಗ್ಗೆ ಮನವಿ ಮಾಡುವದಾಗಿ ಹೇಳಿದರು.

ರಜೆ ಕಡಿತಗೊಳಿಸಿ

ಬೇಂಗೂರು ಗ್ರಾಮಕ್ಕೆ ದೋಣಿಯಿಲ್ಲದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ದೋಣಿ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯ ದಬ್ಬಡ್ಕ ಶ್ರೀಧರ್ ಆಗ್ರಹಿಸಿದರು. ಶಾಲೆಗಳಿಗೆ ಮಳೆ ಹಾಗೂ ದಸರಾ ಸಂದರ್ಭ ರಜೆ ನೀಡಿ ನಂತರ ಶನಿವಾರ ಸಂಜೆವರೆಗೆ ತರಗತಿ ನಡೆಸುವದರಿಂದ ಮಳೆಗಾಲದಲ್ಲಿ ಮಕ್ಕಳ ಸಮವಸ್ತ್ರ ಒಗೆದು ಒಣಗಿಸುವದು ಕಷ್ಟವಾಗಲಿದೆ. ಹಾಗಾಗಿ ದಸರಾ ರಜೆ ಕಡಿತಗೊಳಿಸಿ ಶನಿವಾರ ಮಧ್ಯಾಹ್ನದವರೆಗೆ ಶಾಲೆ ನಡೆಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲು ಗಣಪತಿ ಸಲಹೆ ನೀಡಿದರು. ಪ್ರತಿಕ್ರಿಯಿಸಿದ ಅಧಿಕಾರಿ ಗಾಯತ್ರಿ ಮಳೆಗಾಲದಲ್ಲಿ ಶನಿವಾರ ಅರ್ಧ ದಿನ ಮಾತ್ರ ತರಗತಿ ಇರುತ್ತದೆ. ಜನವರಿ ನಂತರ ಸಂಜೆವರೆಗೆ ಇರುತ್ತದೆ. ಪಠ್ಯ ಕ್ರಮ ಪೂರ್ಣಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ ಎಂದರು.

ಅಂಗನವಾಡಿ ಮುಚ್ಚಬೇಡಿ

ಶಿಶು ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭ ಸಿಡಿಪಿಓ ದಮಯಂತಿ ಅವರು, ತಾಲೂಕಿನಲ್ಲಿ 39 ಅಂಗನವಾಡಿಗಳಲ್ಲಿ 5 ಕ್ಕಿಂತ ಕಡಿಮೆ ಮಕ್ಕಳಿದ್ದು, ಇವುಗಳನ್ನು ಮುಚ್ಚಲು ಇಲಾಖೆಗೆ ಪತ್ರ ಬರೆದಿರುವದಾಗಿ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಅಂಗನವಾಡಿ, ಶಾಲೆಗಳನ್ನು ಮುಚ್ಚಬಾರದೆಂದು ಸರಕಾರವೇ ಹೇಳುತ್ತಿದೆ. ಸರಕಾರದ ಈ ದ್ವಂದ್ವ ನೀತಿ ಏಕೆ? ಅಂಗನವಾಡಿ ಗಳನ್ನು ಮುಚ್ಚಬಾರದು, ವ್ಯವಸ್ಥೆ ಮಾಡಬೇಕೆಂದರು. ಎಲ್ಲ ಸದಸ್ಯರುಗಳು ಇದಕ್ಕೆ ದನಿಗೂಡಿಸಿದರು. ಅಧ್ಯಕ್ಷೆ ಶೋಭಾ ಮೋಹನ್ ಪ್ರತಿಕ್ರಿಯಿಸಿ, ಅಂಗನವಾಡಿಯಲ್ಲಿ ಮಕ್ಕಳು ಮಾತ್ರವಲ್ಲ, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮುಚ್ಚಿದರೆ ತೊಂದರೆಯಾಗಲಿದೆ. ಒಂದು ಮಗುವಿದ್ದರೂ ಅಲ್ಲಿಗೆ ಸೌಲಭ್ಯ ಕಲ್ಪಿಸಬೇಕೆಂದು ಹೇಳಿದರು.

ತಾಲೂಕಿನಲ್ಲಿ ಅಂಗನವಾಡಿಗಳಲ್ಲಿ ಕಾರ್ಯಕರ್ತರು ಹಾಗೂ 21 ಕೇಂದ್ರಗಳಲ್ಲಿ ಸಹಾಯಕರ ಕೊರತೆ ಇದೆ. ವೇತನ ನೀಡಲು ಹಣದ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿಗಳಿಗೆ ಪಾತ್ರೆ ಪರಿಕರಗಳನ್ನು ವಿತರಿಸುವ ಸಂದರ್ಭ ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳ ಗಮನಕ್ಕೆ ತಂದು ವಿತರಿಸುವಂತೆ ಸೂಚನೆ ನೀಡಲಾಯಿತು.

ಇನ್ನುಳಿದಂತೆ ವಿವಿಧ ಇಲಾಖೆಗಳ ಕಾರ್ಯಪ್ರಗತಿ ಬಗ್ಗೆ ಪರಿಶೀಲನೆ ಮಾಡಲಾಯಿತು. ಅಧಿಕಾರಿಗಳು ಮಾಹಿತಿ ನೀಡಿದರು.