ಕೂಡಿಗೆ, ಜೂ. 26: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಬಜೆಟ್ ಮಂಡನೆ ಮಾಡದೆ, ರೈತರ ಸಾಲವನ್ನೂ ಮನ್ನಾ ಮಾಡದೆ ಮನಬಂದಂತೆ ಹೇಳಿಕೆ ನೀಡುತ್ತಾ ಬಜೆಟ್‍ಗೆ ಸಂಬಂಧಪಟ್ಟಂತೆ ಪೂರಕ ಬಜೆಟ್ ಮಾಡಲು ಸಿದ್ಧವಾಗುತ್ತಿವೆ. ಈ ಸರ್ಕಾರ ಇನ್ನೂ ಟೇಕ್‍ಆಫ್ ಆಗಿಲ್ಲ. ರಾಜ್ಯ ಸರ್ಕಾರ ಕೋಮ ಸ್ಥಿತಿಯಲ್ಲಿ ನರಳುತ್ತಿದೆ. ಯಾವದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದೇ ನರಳಾಟ ನಡೆಸುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಟೀಕಿಸಿದರು.

ಹೆಬ್ಬಾಲೆಯ ಬನಶಂಕರಿ ಸಮುದಾಯ ಭವನದಲ್ಲಿ ಹೆಬ್ಬಾಲೆ ಬಿಜೆಪಿ ಘಟಕದ ವತಿಯಿಂದ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಸಕರ ಪ್ರಯತ್ನದಿಂದ ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಉದ್ಯೋಗ ಮೇಳ ಮಾಡಿದ ಪರಿಣಾಮ 1200 ಕ್ಕೂ ಹೆಚ್ಚು ನಿರುದ್ಯೋಗಿಗಳು ಉದ್ಯೋಗ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವದರ ಜೊತೆಗೆ ಉದ್ಯೋಗ ಮೇಳಗಳನ್ನು ಜಿಲ್ಲೆಯಲ್ಲಿ ನಡೆಸಿ ನಿರುದ್ಯೋಗಿ ಯುವ ಜನಾಂಗಕ್ಕೆ ಉದ್ಯೋಗ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.

ಅಲ್ಲದೆ, ಹೆಬ್ಬಾಲೆಯಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆಯುವದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚಿಂತನೆ ನಡೆಸಲಾಗಿದೆ. ಸರ್ಕಾರದ ನಿಯಮದಂತೆ ಕ್ರಮಕೈಗೊಳ್ಳಲಾಗು ವದು ಎಂದರು.

ರೈತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ವ್ಯಾಪ್ತಿಯ ತೊರೆನೂರು, ಶಿರಂಗಾಲ, ಹೆಬ್ಬಾಲೆ, ಕೂಡಿಗೆ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಬಹುದಿನಗಳ ಬೇಡಿಕೆಯಾಗಿರುವ ಎರಡನೇ ಬೆಳೆಗೆ ನೀರನ್ನು ಒದಗಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ ಮಳೆಗಾಲದಲ್ಲಿ ಹೆಚ್ಚು ನೀರನ್ನು ಸಂಗ್ರಹಿಸಿ, ಬೇಸಿಗೆ ಬೆಳೆಗೆ ನೀರೊದಗಿಸುವ ಪ್ರಯತ್ನ ಮಾಡಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜ್, ನಾಮದಾರಿ ಸಂಘದ ಅಧ್ಯಕ್ಷ ರಾಮಪ್ಪ, ಕಾರ್ಯದರ್ಶಿ ಸುಂದರ್, ತೊರೆನೂರು ಗ್ರಾ.ಪಂ ಅಧ್ಯಕ್ಷ ದೇವರಾಜ್, ಹೆಬ್ಬಾಲೆ ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರ್, ಬಿಜೆಪಿ ಹಿರಿಯ ಮುಖಂಡರಾದ ಹುಚ್ಚಪ್ಪ, ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ರಾಜಶೇಖರ್, ಹೆಬ್ಬಾಲೆ ಗ್ರಾಮ ಪಂಚಾಯ್ತಿ ಸದಸ್ಯ ವಿಜಯ್, ಚೇತನ್, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್, ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಜಗದೀಶ್, ಬನಶಂಕರಿ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ 6 ತಿಂಗಳಿಗೊಮ್ಮೆ ಗ್ರಾಮಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಗ್ರಾಮಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ ಮಾಡಲು ಸಹಕಾರಿಯಾಗುವದು ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ಹೆಬ್ಬಾಲೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.