ಮಡಿಕೇರಿ, ಜೂ. 26: ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಎಂಟರ್ ಪ್ರೈಸಸ್ ವತಿಯಿಂದ ಮಡಿಕೇರಿಯ ನಗರಸಭೆ ನಿರ್ವಹಣೆಯ ಎ.ವಿ. ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಮೂಲಕ ವಿತರಿಸಲಾಯಿತು. ಪೈ ಇಂಟರ್ ನ್ಯಾಷನಲ್‍ನ ಮಂಡುವಂಡ ಗಗನ್ ಬೋಪಣ್ಣ ಆಸಕ್ತಿಯ ಫಲವಾಗಿ ಮಡಿಕೇರಿಯ ಎ.ವಿ. ಶಾಲೆಯ ವಿದ್ಯಾರ್ಥಿಗಳಿಗೆ ನೀಡಲ್ಪಟ್ಟ ನೋಟ್ ಪುಸ್ತಕಗಳನ್ನು ಪುರಸಭೆಯ ಮಾಜಿ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಎಂ.ಪಿ. ಮುತ್ತಪ್ಪ, ನಗರಸಭೆಯು ತನ್ನ ನಿರ್ವಹಣೆಯ ಶಾಲೆಗಳ ಬಗ್ಗೆ ಮತ್ತಷ್ಟು ಮುತುವರ್ಜಿ ವಹಿಸಬೇಕು. ಮೂಲಭೂತ ಸೌಕರ್ಯಗಳನ್ನು ಈ ಶಾಲೆಗಳಿಗೆ ಕಲ್ಪಿಸಬೇಕು. ನಗರಸಭೆಯ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿತಗೊಳ್ಳುತ್ತಿದ್ದು, ಶಾಲೆಗೆ ಹೆಚ್ಚಿನ ಶಿಕ್ಷಕರನ್ನು ಸೂಕ್ತ ವೇತನ ನೀಡಿ ನೇಮಕ ಮಾಡಿಕೊಳ್ಳುವ ಮೂಲಕ ಶಾಲೆಗಳನ್ನು ರಕ್ಷಿಸಿಕೊಳ್ಳಬೇಕೆಂದು ಹೇಳಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ದಾನಿಗಳು ನೀಡುವ ಕೊಡುಗೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಇಂತಹ ಕೊಡುಗೆಗಳ ಸದುಪಯೋಗದಿಂದಾಗಿ ದಾನಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ತಾವು ಪ್ರತಿಭಾವಂತರು ಎಂದು ಸಾಬೀತುಪಡಿಸುವ ಮೂಲಕ ಸಮಾಜಕ್ಕೆ ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲೆಗಳಿಗಿಂತ ಕಮ್ಮಿಯಿಲ್ಲ ಎಂಬದನ್ನು ನಿರೂಪಿಸಬೇಕೆಂದರು. ಎ.ವಿ. ಶಾಲೆಗೆ ಹಲವಷ್ಟು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಆಸಕ್ತಿ ತೋರಿರುವ ಸ್ಥಳೀಯ ನಗರಸಭಾ ಸದಸ್ಯೆ ಸವಿತಾ ರಾಕೇಶ್ ಪರಿಶ್ರಮವನ್ನು ಅನಿಲ್ ಶ್ಲಾಘಿಸಿದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಶಾಲಾ ಮುಖ್ಯಾಪಾಧ್ಯಾಯಿನಿ ಪ್ರಪುಲ್ಲ, ಕುಂಇಂಗಡ ಎಂ. ಗಣಪತಿ, ನಗರಸಭಾ ಸದಸ್ಯೆ ಸವಿತಾ ರಾಕೇಶ್, ಶಿಕ್ಷಕರಾದ ಕೇಶವ್, ಸೈನಿ, ಪೂವಮ್ಮ ಪಾಲ್ಗೊಂಡಿದ್ದರು. ಎ. ವಿ. ಶಾಲೆಯ 28 ಬಾಲಕ, 24 ಬಾಲಕಿಯರೂ ಸೇರಿದಂತೆ 52 ವಿದ್ಯಾರ್ಥಿಗಳಿಗೆ ದಾನಿಗಳು ಪುಸ್ತಕಗಳನ್ನು ವಿತರಿಸಿದರು.