ಸೋಮವಾರಪೇಟೆ, ಜೂ. 26: ವಿದ್ಯಾರ್ಥಿ ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು, ಸಮಯಪ್ರಜ್ಞೆ ಬೆಳೆಸಿಕೊಂಡರೆ ಮಾತ್ರ ಮುಂದಿನ ಜೀವನ ಸುಗಮವಾಗಲಿದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹÀಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.

ಸಮೀಪದ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ, 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಜನೆಯ ಸಮಯದಲ್ಲಿ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು. ತಾನು ಕಲಿತ ವಿದ್ಯಾಸಂಸ್ಥೆಗೆ ಮತ್ತು ಕಲಿಸಿದ ಗುರು-ಹಿರಿಯರನ್ನು ಗೌರವಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ತಾನು ಕಲಿತ ವಿದ್ಯಾಸಂಸ್ಥೆಗೆ ಮುಡಿಪಾಗಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ನಿವೃತ್ತ ಕರ್ನಲ್ ಬಿಜೆವಿ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ನಿರ್ದೇಶಕರುಗಳಾದ ಕೆ.ಎಸ್. ಮಂಜುನಾಥ, ಪ್ರಾಂಶುಪಾಲ ಸಿ.ಜೆ. ಮಂದಪ್ಪ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರೇವತಿ ಉಪಸ್ಥಿತರಿದ್ದರು.