ಮಡಿಕೇರಿ, ಜೂ. 26: ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿ ಎನ್.ಪಿ. ಚಿಂಗಪ್ಪ ಸಂಶಯಾಸ್ಪದ ಸಾವು ಪ್ರಕರಣದ ತನಿಖೆಯನ್ನು ತನಿಖಾಧಿಕಾರಿ ಇನ್ಸ್‍ಪೆಕ್ಟರ್ ಕ್ಯಾತೇಗೌಡ ಮತ್ತಿತರರು ಇಂದು ಕೂಡ ಮುಂದುವರೆಸಿದ್ದಾರೆ. ವಿದ್ಯಾರ್ಥಿ ಸಾವಿಗೀಡಾದ ಶನಿವಾರ ದಿನ ನಡೆದ ಘಟನಾವಳಿಗಳ ಕುರಿತು ಸದ್ಯಕ್ಕೆ ಮಾಹಿತಿ ಕಲೆ ಹಾಕುತ್ತಿರುವದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಆ ದಿನ ವಿದ್ಯಾರ್ಥಿ ನಡೆದಾಡಿದ ಸ್ಥಳ, ಶೌಚಾಲಯದಲ್ಲಿನ ಚಿತ್ರಣ, ಆತ ಕುಸಿದು ಬಿದ್ದ ಸಂದರ್ಭಗಳ ಬಗ್ಗೆ ಚಿಂಗಪ್ಪ ಓದುತಿದ್ದ 9ನೇ ತರಗತಿಯ ಸಹ ವಿದ್ಯಾರ್ಥಿಗಳನ್ನು ಕೂಡ ತನಿಖಾಧಿಕಾರಿ ಸಂಪರ್ಕಿಸಿ ಮಾಹಿತಿ ಪಡೆದರು. ಅಲ್ಲದೆ ಸಿಬ್ಬಂದಿ ವರ್ಗ ಮತ್ತಿತರರನ್ನು ಕೂಡ ಸಂಪರ್ಕಿಸಲಾಯಿತು. ಇನ್ನು ಕೂಡ ಪ್ರಾರಂಭಿಕ ತನಿಖೆ ಮಾತ್ರ ನಡೆಯುತ್ತಿದೆ. ಇದುವರೆಗೆ ಮೃತ ದೇಹದ ಮರಣೋತ್ತರ ಪರೀಕ್ಷಾ ವರದಿ ಪೊಲೀಸ್ ಇಲಾಖೆಯ ಕೈ ಸೇರದಿರುವದರಿಂದ ಈ ವರದಿ ಲಭ್ಯವಾದ ಬಳಿಕವಷ್ಟೆ ಸಮಗ್ರ ತನಿಖೆಯನ್ನು ಕೈಗೊಳ್ಳಲು ಸಾಧ್ಯ ಎಂದು ಎಸ್ಪಿ ವಿವರಿಸಿದರು.