ಮಡಿಕೇರಿ, ಜೂ. 26: ‘ಅಧ್ಯಕ್ಷರು ಮತ್ತು ಇಓ ಯಾಕೆ ತಹಶೀಲ್ದಾರ್ ಪರವಾಗಿದ್ದಾರೆ...?’ ಹೀಗೊಂದು ಪ್ರಶ್ನೆ ಕೇಳಿಬಂದಿದ್ದು, ಇಂದು ನಡೆದ ತಾ.ಪಂ. ಸಾಮಾನ್ಯಸಭೆಯಲ್ಲಿ..., ಪ್ರಶ್ನೆ ಮಾಡಿದ್ದು ಆಡಳಿತ ಪಕ್ಷದವರೇ ಆದ ಹಿರಿಯ ಸದಸ್ಯ ನಾಗೇಶ್ ಕುಂದಲ್ಪಾಡಿ..., ಕಂದಾಯಾಧಿಕಾರಿಗಳು ಸಭೆಗೆ ಹಾಜರಾಗದ ಬಗ್ಗೆ ನಡೆಯುತ್ತಿದ್ದ ಬಿಸಿ ಬಿಸಿ ಚರ್ಚೆ ಸಂದರ್ಭ ಈ ಒಂದು ಪ್ರಶ್ನೆ ಎಲ್ಲರನ್ನು ಅಚ್ಚರಿಗೊಳಿಸಿತು...! ಆಡಳಿತ ಪಕ್ಷದವರೇ ಕಚ್ಚಾಡುತ್ತಿದ್ದ ಪ್ರಹಸನ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಮುಜುಗರ ತಂದಿತು...!ಸಭೆಯ ಆರಂಭದಲ್ಲೇ ಸದಸ್ಯ ಅಪ್ರು ರವೀಂದ್ರ ಎದ್ದುನಿಂತು ವಿಪರೀತ ಮಳೆಯಾಗಿದ್ದು, ಸಾಕಷ್ಟು ಹಾನಿ ಸಂಭವಿಸಿವೆ. ಈ ಬಗ್ಗೆ ಮಾಹಿತಿ ಬೇಕಿತ್ತು. ಆದರೆ ಸಭೆಯಲ್ಲಿ ತಹಶೀಲ್ದಾರರಾಗಲೀ, ಕಂದಾಯ ಇಲಾಖಾಧಿಕಾರಿಗಳಾಗಲೀ ಕಾಣುತ್ತಿಲ್ಲ. ಆನೆ ಹಾವಳಿ ಕೂಡ ಇದ್ದು, ಅರಣ್ಯಾಧಿಕಾರಿಗಳು ಇಲ್ಲ, ನಮ್ಮನ್ನು ಆರಿಸಿದ ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಭೆಯ ಅವಶ್ಯಕತೆಯಿಲ್ಲ. ಸಭೆ ಮುಂದೂಡಿ ತಹಶೀಲ್ದಾರ್, ಅರಣ್ಯಾಧಿಕಾರಿಗಳನ್ನು ಕರೆಸಿ ಎಂದು ಆಗ್ರಹಿಸಿದರು.

ದನಿಗೂಡಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ ಸಭೆ ಕರೆದ ಮೇಲೆ ಅಧಿಕಾರಿಗಳನ್ನು ಕರೆಸುವದು ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಕರ್ತವ್ಯ. ಅಧಿಕಾರಿಗಳು ಬಾರದಿರುವದಕ್ಕೆ ಅಧ್ಯಕ್ಷರ ಬೇಜವಾಬ್ದಾರಿಯೇ ಕಾರಣ ಎಂದು ಹೇಳಿದರು. ಈ ಸಂದರ್ಭ ಅಧ್ಯಕ್ಷೆ ಶೋಭಾ ಮೋಹನ್ ಹಾಗೂ ಇ.ಓ. ಲಕ್ಷ್ಮಿ ಅವರುಗಳು ತಹಶಿಲ್ದಾರರ ಬದಲಾವಣೆ ಆಗಿದ್ದು, ಹಿಂದಿನ ತಹಶೀಲ್ದಾರ್ ಕುಸುಮ ಅವರು ಇಂದು ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಅಧಿಕಾರ ಸ್ವೀಕಾರ ಮಾಡದೆ ಮಾಹಿತಿ ಇಲ್ಲದೆ ಬರುವದಾದರೂ ಹೇಗೆ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

(ಮೊದಲ ಪುಟದಿಂದ) ಸದಸ್ಯರುಗಳಾದ ರವೀಂದ್ರ ಹಾಗೂ ಶ್ರೀಧರ್ ಅವರುಗಳು 2 ವರ್ಷದಲ್ಲಿ ಒಮ್ಮೆಯೂ ತಹಶೀಲ್ದಾರರು ಸಭೆಗೆ ಬಂದಿಲ್ಲ. ಅವರನ್ನು ವಿಚಾರಿಸದೆ ಸಲುಗೆ ಕೊಟ್ಟಿದ್ದೆ ಇದಕ್ಕೆ ಕಾರಣ. ಅಧ್ಯಕ್ಷರು ಅವರನ್ನು ಪ್ರಶ್ನಿಸಿ ಸಭೆಗೆ ಕರೆಯಬೇಕೆಂದು ಹೇಳಿದರು. ನಾಗೇಶ್ ಎದ್ದುನಿಂತು ಅಧಿಕಾರಿಗಳಿಲ್ಲದ ಮೇಲೆ ಈ ಸಭೆ ಏಕಿರುವದು...? ನಾವೇನು ಇಲ್ಲಿ ಭಕ್ಷಿಸ್‍ಗೆ ಬಂದಿಲ್ಲ. ಅಧ್ಯಕ್ಷರು ಹಾಗೂ ಇ.ಓ.ಗಳ ಉದಾಸೀನವೇ ಇದಕ್ಕೆ ಕಾರಣ ಎಂದು ಹೇಳಿದರು.

ವೇದಿಕೆಯಲ್ಲಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಅವರು ನೋಟೀಸ್ ಮಾತ್ರ ನೀಡಿದರೆ ಸಾಲದು, ಕರೆಸುವ ವ್ಯವಸ್ಥೆ ಆಗಬೇಕು. ಇದು ಬೇಜವಾಬ್ದಾರಿತನವೆಂದು ಹೇಳಿದರು. ಚರ್ಚೆ ಮುಂದುವರಿಯುತ್ತಿರುವಾಗ ಅಧ್ಯಕ್ಷರು ಹಾಗೂ ಇ.ಓ. ಅವರುಗಳು ತಹಶೀಲ್ದಾರರಿಗೆ ಕರೆ ಮಾಡಿ ವಿಚಾರಿಸಿದಾಗ ಅತ್ತಲಿಂದ ಅಧಿಕಾರ ಸ್ವೀಕಾರ ಮಾಡಿದ ನಂತರ ಬರುವದಾಗಿ ಉತ್ತರ ಬಂದಿತು. ಇದನ್ನು ಅಧ್ಯಕ್ಷರು ಇ.ಓ. ಸಭೆಗೆ ತಿಳಿಸಿದಾಗ, ಆಕ್ರೋಶಿತರಾದ ನಾಗೇಶ್, ತಹಶೀಲ್ದಾರರಿಗೆ ಇಂದು ತಾ.ಪಂ. ಸಭೆ ಇರುವದು ತಿಳಿದಿಲ್ಲವೇ? ಅಷ್ಟೊಂದು ಸಾಮಾನ್ಯ ಜ್ಞಾನ ಇಲ್ಲವೇ, ಕಂದಾಯ ಇಲಾಖೆಯಲ್ಲಿ ‘ಗಂಟು’ ಇದ್ದರೆ ಮಾತ್ರ ಕೆಲಸ..., ಹಾಗಾಗಿ ಇಂತಹ ನಿರ್ಲಕ್ಷ್ಯ. ಕಂದಾಯ ಇಲಾಖೆ ಯಾವ ಉದ್ದೇಶಕ್ಕೆ ಇರುವದೆಂದು ಪ್ರಶ್ನಿಸಿದರು. ರವೀಂದ್ರ, ಶ್ರೀಧರ್ ಸಭೆ ಮುಂದೂಡುವಂತೆ ಆಗ್ರಹಿಸಿದರು. ಈ ಸಂದರ್ಭ ಅಧ್ಯಕ್ಷರು ಅಧಿಕಾರಿಗಳು ಬಾರದಿದ್ದಲ್ಲಿ ಎಳ್ಕೊಂಡು ಬರೋಕಾಗುತ್ತಾ ಎಂದಾಗ ಕುಪಿತರಾದ ನಾಗೇಶ್ ಅವರು, ಅಧ್ಯಕ್ಷರನ್ನು ಗುರಿಯಾಗಿರಿಸಿ ‘ನಿಮ್ಮ ನಾಟಕ ಬಿಡಬೇಕು’ ಎಂದರು. ಈ ಸಂದರ್ಭ ಈರ್ವರ ನಡುವೆ ಮಾತಿನ ಚಕಮಕಿ ನಡೆಯಿತು. ‘ತಹಶೀಲ್ದಾರ್ ಸಭೆಗೆ ಬರುವವರೆಗೆ ನಾನು ಕುಳಿತುಕೊಳ್ಳುವದಿಲ್ಲ. ಅಧ್ಯಕ್ಷರು ಮತ್ತೆ ಇ.ಓ.ಗೆ ತಹಶೀಲ್ದಾರರ ಪರವಾಗಿದ್ದಾರೆ! ಎಂದು ಕಿಡಿಕಾರಿದರು. ನಾಗೇಶ್‍ಗೆ ಸಾಥ್ ನೀಡಿದ ಸದಸ್ಯರುಗಳಾದ ಶ್ರೀಧರ್, ರಾಯ್ ತಮ್ಮಯ್ಯ, ಕುಮುದ ರಶ್ಮಿ, ಇಂದಿರಾ, ಉಮಾಪ್ರಭು, ರವೀಂದ್ರ, ಸಂಧ್ಯಾ ಅವರುಗಳು ತಾವೂ ಕೂಡ ಎದ್ದುನಿಂತು ಪ್ರತಿಭಟಿಸಿದರು. ತಹಶೀಲ್ದಾರ್ ಬರುವವರೆಗೆ ಇತರ ವಿಚಾರಗಳ ಬಗ್ಗೆ ಸಭೆ ನಡೆಸೋಣ, ಎಲ್ಲರೂ ಕುಳಿತುಕೊಳ್ಳಿ ಎಂದು ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಸಂತುಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ, ಇ.ಓ. ಲಕ್ಷ್ಮಿ ಪದೇ ಪದೇ ಮನವಿ ಮಾಡಿದರೂ ಸದಸ್ಯರು ಪ್ರತಿರೋಧ ಮುಂದುವರಿಸಿದರು. ಇತ್ತ ವೇದಿಕೆಯಲ್ಲಿದ್ದವರು ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬಸವಳಿದು ಹೋದರು. ಕೊನೆಯಲ್ಲಿ ಇಲಾಖೆಯಿಂದ ಅಧಿಕಾರಿಯೋರ್ವರು 10 ನಿಮಿಷದಲ್ಲಿ ಬರುವದಾಗಿ ಮಾಹಿತಿ ಸಿಕ್ಕಿದ ಬಳಿಕ ಸದಸ್ಯರುಗಳು ತಮ್ಮ ಆಸನಗಳಲ್ಲಿ ಆಸೀನರಾದರು. ನಂತರ ಸಭೆ ಮುಂದುವರಿಯಿತು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಭೆ ಕಂದಾಯ ಅಧಿಕಾರಿಗಳ ವಿಚಾರಕ್ಕೆ 1 ಗಂಟೆ, ನಂತರ ಶಿಶು ಅಭಿವೃದ್ಧಿ ಇಲಾಖೆ ವಿಚಾರಕ್ಕೆ 1 ಗಂಟೆ, ಶಿಕ್ಷಣ ಇಲಾಖೆಗೆ 1 ಗಂಟೆಯನ್ನು ಬಲಿತೆಗೆದುಕೊಂಡಿತು. ಅಷ್ಟರಲ್ಲಿ ಊಟದ ಸಮಯ ಮೀರಿತ್ತು. ಊಟದ ವಿರಾಮದ ಬಳಿಕ ಉಳಿದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

-ಸಂತೋಷ್.