ಮಡಿಕೇರಿ, ಜೂ. 26: ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆಯನ್ನು ಗ್ರಾ.ಪಂ. ಪಿಡಿಓಗಳಿಗೆ ತಾತ್ಕಾಲಿಕವಾಗಿ ವಹಿಸುತ್ತಿರುವ ಕ್ರಮವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ವತಿಯಿಂದ ಮನವಿ ಸಲ್ಲಿಸಿರುವದಾಗಿ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷೆ ವಿ.ಹೆಚ್. ನಾಗರತ್ನ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿದ ನಮ್ಮ ಸಂಘಟನೆಯ ಮುಖಂಡರಾದ ಟಿ.ಪಿ. ರಮೇಶ್ ಅವರು ಅಂಗನವಾಡಿ ಕೇಂದ್ರಗಳ ಮೇಲೆ ಪಿಡಿಓಗಳ ಹಸ್ತಕ್ಷೇಪ ಇರಬಾರದು ಮತ್ತು ಮೇಲ್ವಿಚಾರಣೆಯನ್ನು ಪಿಡಿಓಗಳಿಗೆ ನೀಡಬಾರದೆಂದು ತಿಳಿಸಿರುವದಾಗಿ ಹೇಳಿದ್ದಾರೆ.

ಜು. 15 ರಂದು ಸಂಘದ ವಾರ್ಷಿಕ ಮಹಾಸಭೆ ಮಡಿಕೇರಿಯಲ್ಲಿ ನಡೆಯಲಿದ್ದು, ಮಹಾಸಭೆಯಲ್ಲಿ ಈ ಕುರಿತು ಸರ್ವಸದಸ್ಯರ ಅಭಿಪ್ರಾಯ ಪಡೆಯಲಾಗುವದು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ಅವರನ್ನು ಭೇಟಿಯಾಗಿ ಪಿಡಿಓ ನೇಮಕಾತಿಯನ್ನು ರದ್ದುಗೊಳಿಸಲು ಒತ್ತಾಯಿಸುವದಾಗಿ ನಾಗರತ್ನ ತಿಳಿಸಿದ್ದಾರೆ.