ಮಡಿಕೇರಿ, ಜೂ. 26: ಯುವ ಜನರು ಮಾದಕ ವಸ್ತುಗಳಿಗೆ ತುತ್ತಾದರೆ ಅಪರಾಧಗಳಿಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಮಾದಕ ವಸ್ತುಗಳಿಗೆ ಯುವ ಜನರು ದಾಸರಾಗಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಕರೆ ನೀಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಗ್ರೀನ್ ಡಾಟ್ ಟ್ರಸ್ಟ್, ಶಕ್ತ್ತಿಧಾಮ ಮಾದಕ ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಅಂತರ್ರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ’ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಜಾ, ಹೆರಾಯಿನ್ ಮತ್ತಿತರ ಮಾದಕ ವಸ್ತುಗಳಿಗೆ ತುತ್ತಾದರೆ ಸುಳ್ಳು ಹೇಳುವದು, ಕಳ್ಳತನ ಮಾಡುವದು ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲಹೆ ಮಾಡಿದರು.

ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಸಂಬಂಧ ವಿಶ್ವ ಸಂಸ್ಥೆ ಮುಂದಾಗಬೇಕು. ಸಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಣ ಮಾಡಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ರಾಜೇಂದ್ರ ಪ್ರಸಾದ್ ಅವರು ಕೋರಿದರು.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಸಂಬಂಧ 8 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು, ಇದರಲ್ಲಿ 4 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೇಳಿದರು.

ಮಾದಕ ವಸ್ತುಗಳ ಮಾರಾಟ ಸೇರಿದಂತೆ ಇತರೆ ಪ್ರಕರಣಗಳ ಸಂಬಂಧ ಮಾಹಿತಿ ಒದಗಿಸಲು ಜಿಲ್ಲೆಯ 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗಿದೆ. ಆ ದಿಸೆಯಲ್ಲಿ ಯಾರು ಬೇಕಾದರೂ ತಮ್ಮ ಹೆಸರು, ವಿಳಾಸ ಬರೆಯದೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು.

ಮಾದಕ ವಸ್ತುವಿನ ಬಳಕೆದಾರರು ಹೆಚ್ಚು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದಾರೆ. ಇದರಿಂದ ಯುವಕರ ಭವಿಷ್ಯಕ್ಕೆ ಕುಂದುಬರುತ್ತದೆ. ಆದ್ದರಿಂದ ಶಾಲಾ ಕಾಲೇಜು ಮಟ್ಟದಲ್ಲಿ ಮಾದಕ ವಸ್ತು ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವದು ಅಗತ್ಯವಾಗಿದೆ. ಅದರಂತೆ ಶಾಲೆ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ಮತ್ತಿತರ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬೆಳ್ಯಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಾಗಿ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನವನ್ನು ಪಡೆಯಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಕೊಡಗಿನ ಸುತ್ತಮುತ್ತ ಗಾಂಜಾ ಪತ್ತೆಯಾಗಿರುವದು ವರದಿಯಾಗಿದೆ. ಯುವಜನರು ಮಾದಕ ವಸ್ತುಗಳಿಗೆ ತುತ್ತಾದರೆ ಅದರಿಂದ ಹೊರಬರುವದು ಕಷ್ಟಸಾಧ್ಯ. ಆದ್ದರಿಂದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದರು.

ಮಾದಕ ವಸ್ತುಗಳ ಮೂಲವನ್ನು ಬೇರು ಸಹಿತ ಕಿತ್ತು ಹಾಕಬೇಕು. ಕಟ್ಟುನಿಟ್ಟಿನ ಕಾಯ್ದೆಯೂ ಸಹ ಜಾರಿಯಾಗಬೇಕು ಎಂದು ಬೆಳ್ಯಪ್ಪ ಅವರು ಸಲಹೆ ಮಾಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ.ಡೇವಿನ್ ಲಿನೇಕರ್ ಅವರು ಮಾತನಾಡಿ ಮಾದಕ ವಸ್ತುಗಳ ಬಳಕೆಯೊಂದಿಗೆ ದುಶ್ಚಟಕ್ಕೆ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಆದರಿಂದ ಯಾರೂ ಸಹ ಮಾದಕ ವಸ್ತು ಉಪಯೋಗಿಸಬಾರದು ಎಂದರು.

ಮಧ್ಯ ವಯಸ್ಸಿನ ಜನರು ಹೆಚ್ಚಾಗಿ ಮಾದಕ ಪದಾರ್ಥಗಳು ಬಳಸುತ್ತಿದ್ದಾರೆ ಇದರಿಂದ ಮಾನಸಿಕ ಖಿನ್ನತೆ, ನಿದ್ರಾ ಹೀನತೆಗಳನ್ನು ಒಳಗೊಂಡಂತೆ ತೀತ್ರತರವಾದ ಮಾನಸಿಕ ತೊಂದರೆಗಳು ಒಳಗೊಂಡಂತೆ ಕ್ಯಾನ್ಸರ್‍ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರಿಂದ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ದುಶ್ಚಟಗಳಿಂದ ದೂರವಿರುವಂತೆ ಸಲಹೆ ಮಾಡಿದರು.

ಉಪ ಪೊಲೀಸ್ ವರಿಷ್ಠ್ಠಾಧಿಕಾರಿ ಸುಂದರರಾಜ್, ಪೊಲೀಸ್ ಇನ್ಸ್‍ಪೆಕ್ಟರ್ ಉಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಅಧಿಕಾರಿ ಡಾ.ಎಂ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಬಿ.ಪಿ. ದೇವರಾಜು ಇತರರು ಇದ್ದರು.

ಕಾಲೇಜಿನ ಪ್ರಾಧ್ಯಾಪಕ ನಂದೀಶ್ ನಿರೂಪಿಸಿ, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿತಿನ್ ಪ್ರಾರ್ಥಿಸಿದರು, ರಾಜಶೇಖರ ಸ್ವಾಗತಿಸಿ, ವಂದಿಸಿದರು.