ಮಡಿಕೇರಿ, ಜೂ. 26: ಸಹಕಾರಿ ಸಂಸ್ಥೆಗಳಲ್ಲಿ ಯಶಸ್ವಿನಿ ವಿಮಾ ಯೋಜನೆ ನವೀಕರಣಗೊಳ್ಳದೆ ರೈತರಿಗೆ ವಿಮಾ ಸೌಲಭ್ಯಗಳು ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಯಶಸ್ವಿನಿ ವಿಮಾ ನವೀಕರಣ ಮಾಡುವದು ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಸಮಿತಿಯ ಜಿಲ್ಲಾಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ ಹಾಗೂ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿದ್ದಾರೆ.

* ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಂದರೆ ತಾಲೂಕು ಕಚೇರಿ, ಅರಣ್ಯ ಇಲಾಖೆ, ಸಾರಿಗೆ ಸಂಪರ್ಕ ಇಲಾಖೆಯಲ್ಲಿ ದಲ್ಲಾಳಿಗಳಿಲ್ಲದೆ ಯಾವದೇ ಕೆಲಸ ಕಾರ್ಯಗಳು ಹಣ ಕೊಡದೆ ಆಗುತ್ತಿಲ್ಲ. ಮಧ್ಯವರ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಸಾರ್ವಜನಿಕರು ಹೋದರೆ ಅಧಿಕಾರಿ ವೃಂದದವರು ಸಾರ್ವಜನಿಕರಿಗೆ ಸ್ಪಂದಿಸುವದಿಲ್ಲ. ಆದುದರಿಂದ ಸಂಬಂಧಪಟ್ಟ ಅಧಿಕಾರಿಯವರಿಗೆ ಸೂಚನೆಯನ್ನು ಕೊಟ್ಟು ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಬೇಕು.

* ಜಿಲ್ಲೆಯ ರಸ್ತೆಗಳು ಜನಪ್ರತಿನಿಧಿಗಳ ಪ್ರಯತ್ನದಿಂದ ಡಾಂಬರೀಕರಣಗೊಂಡು ಸ್ವಲ್ಪ ಸುಸ್ಥಿತಿಯಲ್ಲಿದೆ. ಆದರೆ ರಸ್ತೆಯ ಎರಡು ಕಡೆ ಚರಂಡಿಯನ್ನು ಶುದ್ಧಗೊಳಿಸದೆ ನೀರು ರಸ್ತೆಯ ಮಧ್ಯಭಾಗಕ್ಕಾಗಿ ಹರಿಯುತ್ತಿರುವದರಿಂದ ಒಡನೆ ಚರಂಡಿ ಶುದ್ಧಗೊಳಿಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ.

* ವೀರಾಜಪೇಟೆ ತಾಲೂಕಿನ ಮಿನಿ ವಿಧಾನ ಸೌಧವು 1.50 ಕೋಟಿ ರೂಪಾಯಿ ವೆಚ್ಚ ಮಾಡಿ 10 ವರ್ಷದಲ್ಲಿ ಮುಗಿಸಿ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಈ ಮಳೆಗಾಲದಲ್ಲಿ ಸೋರಿಕೆಯಾಗಿ ಸಾರ್ವಜನಿಕರ ಕಡತಗಳೆಲ್ಲವೂ ಹಾಳಾಗುವ ಪರಿಸ್ಥಿತಿಯಲ್ಲಿದೆ. ಸರಕಾರಿ ನೌಕರರಿಗೆ ಕೂತು ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಮತ್ತು ಗುತ್ತಿಗೆದಾರರ ಮೇಲೆ ಕಳಪೆ ಕೆಲಸ ಮಾಡಿರುವದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭ ನಿಯೋಗದಲ್ಲಿ ಬೊಟ್ಟಂಗಡ ಬಿ. ಮಾಚಯ್ಯ, ಅಜ್ಜಮಾಡ ಯಸ್ ನಂಜಪ್ಪ, ಅಚ್ಚಿಯಂಡ ಕೃಷ್ಣಮಯ್ಯ, ಕೂಪದಿರ ಕೆ. ಉತ್ತಪ್ಪ, ನಾಟೋಳಂಡ ಚರ್ಮಣ್ಣ ಹಾಜರಿದ್ದರು.