ಮಡಿಕೇರಿ, ಜೂ. 26: ಕೊಡಗಿನಲ್ಲಿ ಮತ್ತಿತರ ಮಲೆನಾಡು ಜಿಲ್ಲೆಗಳಲ್ಲಿ ಆನೆಗಳ ನಿರಂತರ ಧಾಳಿಯಿಂದ ಕೃಷಿಕರು, ಗ್ರಾಮಸ್ಥರು ಹಾಗೂ ನಾಗರಿಕರು ಬವಣೆ ಪಡುತ್ತಿರುವದು ತನ್ನ ಗಮನಕ್ಕೆ ಬಂದಿದೆ ಎಂದು ನೂತನ ಅರಣ್ಯ ಸಚಿವ ಆರ್. ಶಂಕರ್ ಇಂದು ಇಲ್ಲಿ ತಿಳಿಸಿದರು.

ಅರಣ್ಯ ಇಲಾಖಾ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದರೆ ರೈಲ್ವೆ ಹಳಿಗಳ ಬೇಲಿ ನಿರ್ಮಾಣವೊಂದೆ ಸೂಕ್ತ ಪರಿಹಾರ ಕ್ರಮ ಎಂಬದು ಪ್ರಾಯೋಗಿಕವಾಗಿ ಗೊತ್ತಾಗಿದೆ. ಆದರೆ ಇದರ ವೆಚ್ಚ ಮಾತ್ರ ದುಬಾರಿ. ಒಂದು ಕಿ.ಮೀ. ಬೇಲಿ ಅಳವಡಿಕೆಗೆ ಸುಮಾರು ಒಂದೂವರೆ ಕೋಟಿ ವೆಚ್ಚವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವದಾಗಿ ಅರಣ್ಯ ಸಚಿವರು ಭರವಸೆಯಿತ್ತರು. ಕಂದಕಗಳ ನಿರ್ಮಾಣ ಅಷ್ಟೊಂದು ಪ್ರಯೋಜನಕಾರಿಯಾಗಿಲ್ಲ. ಅಲ್ಲದೆ ಸೋಲಾರ್ ಬೇಲಿ ಅಳವಡಿಸಿದರೂ ಬುದ್ಧಿವಂತ ಆನೆಗಳ ಅದರ ಮೇಲೆ ಮರದ ತುಂಡುಗಳನ್ನಿಟ್ಟು ದಾಟುತ್ತಿರುವದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಹಳಿಗಳ ಬೇಲಿ ನಿರ್ಮಾಣ ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.

ಇದರೊಂದಿಗೆ ಆನೆಗಳಿಗೆ ಕಾಡಿನಲ್ಲಿ ಅಗತ್ಯ ಆಹಾರ ಕಲ್ಪಿಸಲು ಬಿದಿರುಮೆಳೆ ಮತ್ತಿತರ ಹಸಿರು ವನವನ್ನು ಬೆಳೆಸಲು ಇಲಾಖೆಯಿಂದ ಆದ್ಯತೆ ನೀಡಲಾಗುತ್ತದೆ. ರಾಜ್ಯದಲ್ಲಿ 10 ಕೋಟಿ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಅಲ್ಲದೆ ಆನೆಗಳ ಹಾವಳಿ ತಡೆಗೆ ಜೇನುಪೆಟ್ಟಿಗೆಗಳನ್ನು ಇರಿಸಲು ಪ್ರೋತ್ಸಾಹಿಸಲಾಗುವದು ಎಂದು ಅವರು ವಿವರಿಸಿದರು. ಈ ಎಲ್ಲಾ ಕಾರ್ಯಕ್ರಮಗಳಿಗಾಗಿ ಅರಣ್ಯ ಇಲಾಖೆಗೆ ಅಧಿಕ ಅನುದಾನವನ್ನು ಕಲ್ಪಿಸಲು ಮುಂಗಡ ಪತ್ರದಲ್ಲಿ ಘೋಷಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವದೆಂದರು.

ಆನೆ ಧಾಳಿಯಿಂದ ಒಂದೆಡೆ ಆಸ್ತಿ ನಷ್ಟ, ಮತ್ತೊಂದೆಡೆ ಮಾನವ ಪ್ರಾಣ ಹಾನಿಯಾಗುತ್ತಿದೆ. ಹುಲಿ ಧಾಳಿಯಿಂದ ಜಾನುವಾರುಗಳು ಅಸುನೀಗುತ್ತಿವೆ. ಹುಲಿಧಾಳಿಯಿಂದ ಸಂಭವಿಸುವ ನಷ್ಟಕ್ಕೆ ಈಗ ನೀಡುತ್ತಿರುವ ರೂ. 10 ಸಾವಿರ ಪರಿಹಾರವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವದೆಂದು ಸಚಿವರು ಪ್ರಕಟಿಸಿದರು.

ಸುಬ್ರಮಣ್ಯಕ್ಕೆ ಸಮೀಪ ರಸ್ತೆಗೆ ಸಮ್ಮತಿ

ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಸೋಮವಾರಪೇಟೆಯಿಂದ ಸುಬ್ರಮಣ್ಯಕ್ಕೆ ಸನಿಹ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಅರಣ್ಯ ಸಚಿವಾಲಯ ಸಹಕರಿಸಿದರೆ ಈ ರಸ್ತೆಯನ್ನು ನಿರ್ಮಾಣಗೊಳಿಸುವದಾಗಿ ತಿಳಿಸಿದ್ದರು. ಈ ಬಗ್ಗೆ ಅರಣ್ಯ ಸಚಿವರ ಗಮನಕ್ಕೆ ತಂದಾಗ ಅರಣ್ಯ ಇಲಾಖೆಯಿಂದ ಈ ನೂತನ ರಸ್ತೆ ನಿರ್ಮಾಣ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಭರವಸೆಯಿತ್ತರು. ಅಲ್ಲದೆ ಮಾಕುಟ್ಟ ರಸ್ತೆಯನ್ನು ದುರಸ್ತಿಗೊಳಿಸಲು ಅಗತ್ಯ ಮರಗಳನ್ನು ಕಡಿಯುವದಕ್ಕೂ ಸಹಕರಿಸುವದಾಗಿ ತಿಳಿಸಿದರು.

ಅವಧಿ ಮೀರಿದ ಗುತ್ತಿಗೆ

ಕೊಡಗಿನ ಕಡಮಕಲ್, ಮಾಕುಟ್ಟ ಮೊದಲಾದ ಕಡೆ ನೂರಾರು ಎಕರೆ ಅರಣ್ಯ ಜಾಗವನ್ನು ಈ ಹಿಂದೆ 99 ವರ್ಷಕ್ಕೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆಯ ಅವಧಿ ಮುಕ್ತಾಯಗೊಂಡರೂ ಅರಣ್ಯ ಇಲಾಖೆ ವಶಪಡಿಸಿಕೊಳ್ಳದಿರುವ ಕುರಿತು ಸಚಿವರ ಗಮನಕ್ಕೆ ತರಲಾಯಿತು. ತಾನು ಈ ಸಂಬಂಧ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಿರುವದಾಗಿ ಸಚಿವರು ನುಡಿದರು.

ಸಚಿವರು ನಗರಕ್ಕೆ ಆಗಮಿಸಿದ ಬಳಿಕ ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ, ಸಿಸಿಎಫ್ ಲಿಂಗರಾಜು, ಡಿಎಫ್.ಓ. ಮಂಜುನಾಥ್ ಮೊದಲಾದ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.