ಕುಶಾಲನಗರ, ಜೂ 26: ರಾಜ್ಯ ಅರಣ್ಯ ಸಚಿವರು ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾಕಾನೆಗಳು ಮತ್ತು ಮಾವುತ, ಕಾವಾಡಿಗರು ಕಾದು ಸುಸ್ತಾದ ಸಂಗತಿ ನಡೆದಿದೆ.

ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡುವ ಕಾರ್ಯಕ್ರಮದ ಸಲುವಾಗಿ ಮಂಗಳವಾರ ಮಧ್ಯಾಹ್ನದಿಂದ ಶಿಬಿರದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಲು ಬಿರುಸಿನ ತಯಾರಿ ನಡೆಸಿದ್ದರು. ಕಾಡಿಗೆ ಅಟ್ಟಿದ್ದ 30 ಆನೆಗಳನ್ನು ಸಚಿವರ ಸ್ವಾಗತಕ್ಕಾಗಿ ಮಾವುತ ಸಿಬ್ಬಂದಿಗಳೊಂದಿಗೆ ಕಾಯುತ್ತಿದ್ದ ದೃಶ್ಯ ಸ್ಥಳಕ್ಕೆ ತೆರಳಿದ ಶಕ್ತಿಗೆ ಕಂಡುಬಂತು. ಈ ನಡುವೆ ಪ್ರವಾಸಿಗರ ಚಟುವಟಿಕೆ ಕೂಡ ಆನೆಗಳಿಗೆ ಕಿರಿಕಿರಿ ಎನಿಸುತ್ತಿತ್ತು.

ಸಚಿವರು ಸಂಜೆ 6 ಗಂಟೆ ತನಕ ಆಗಮಿಸದ ಹಿನ್ನೆಲೆಯಲ್ಲಿ ಆನೆಗಳು ತಮ್ಮ ಸಹನೆ ಕಳೆದುಕೊಂಡು ಮಾವುತ, ಕಾವಾಡಿಗರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದೃಶ್ಯವೂ ಗೋಚರಿಸಿತು. ಇದೇ ಸಂದರ್ಭ ಮಡಿಕೇರಿಯಿಂದ ಬಂದ ಸಂದೇಶದಂತೆ ಸಚಿವರ ಕಾರ್ಯಕ್ರಮ ರದ್ದುಗೊಂಡಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಾಕಾನೆಗಳ ಮಾವುತ ಕಾವಾಡಿಗರು ಸಾಕಾನೆಗಳನ್ನು ಕಾಡಿಗಟ್ಟುವ ಮೂಲಕ ನಿಟ್ಟುಸಿರು ಬಿಟ್ಟರು.

-ಸಿಂಚು