ಮಡಿಕೇರಿ, ಜೂ. 26: ಮಡಿಕೇರಿಯ ಕೋಟೆ ಆವರಣದಲ್ಲಿದ್ದ ಕಿಷ್ಕಿಂಧೆಯಿಂದ ಕೂಡಿದ್ದ ಜಿಲ್ಲಾ ಕೇಂದ್ರ ಕಾರಾಗೃಹವನ್ನು ನಗರದ ಹೊರವಲಯದಲ್ಲಿ ನೂತನವಾಗಿ ಆರೆಂಟು ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈ ನೂತನ ಕಟ್ಟಡಕ್ಕೆ 2009-10ನೇ ಸಾಲಿನಲ್ಲಿ ಸ್ಥಳಾಂತರಿಸುವ ಸಂದರ್ಭ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು.ಬದಲಾಗಿ ಪ್ರಾರಂಭದಲ್ಲೇ ಈ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಅಸಮಾಧಾನವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತಗೊಂಡಿತ್ತು. ಹೀಗಿದ್ದರೂ ಅಂದಿನ ದಿನಗಳಲ್ಲಿ ತರಾತುರಿಯಲ್ಲಿ ಉದ್ಘಾಟಿಸುವದರೊಂದಿಗೆ ಹಳೆಯ ಜೈಲಿನಿಂದ ಕರ್ಣಂಗೇರಿಯ

ಕಾರಾಗೃಹಕ್ಕೆ ವಿಚಾರಣಾ ಬಂದಿಗಳನ್ನು ಸ್ಥಳಾಂತರಿಸಲಾಯಿತು. ಮೇಲ್ನೋಟಕ್ಕೆ ಇಲ್ಲಿಗೆ ಜೈಲು ಹಕ್ಕಿಗಳ ಸ್ಥಳಾಂತರಗೊಂಡರೂ ನಿರಂತರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಒಟ್ಟು ರೂ. 2.50 ಕೋಟಿ ಹಣ ಬಿಡುಗಡೆಯಾಗಿತ್ತು.

(ಮೊದಲ ಪುಟದಿಂದ) ಪರಿಣಾಮ ಪ್ರಸಕ್ತ ಹತ್ತು ವರ್ಷಗಳ ನಿರ್ವಹಣೆಯತ್ತ ಜಿಲ್ಲಾ ಕೇಂದ್ರ ಕಾರಾಗೃಹ ಪದಾರ್ಪಣೆಗೊಳ್ಳುತ್ತಿದ್ದರೂ, ಜೈಲು ಹಕ್ಕಿಗಳಿಗೆ ತೊಂದರೆ ತಪ್ಪಿಲ್ಲ. ಕಾರಾಗೃಹದ ಅಧೀಕ್ಷಕರ ಸಹಿತ ನಿತ್ಯ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ವಿಚಾರಣಾ ಬಂಧಿಗಳು ನೆಮ್ಮದಿಯಿಲ್ಲದೆ ಹಲವು ಸಮಸ್ಯೆಗಳ ಸುರಿಮಳೆಯೊಂದಿಗೆ ದಿನ ಕಳೆಯುವಂತಾಗಿದೆ. ಇತ್ತೀಚೆಗೆ ಧಾರಾಕಾರ ಮಳೆಯಿಂದ ನಾಲ್ಕುಗೋಡೆ ನಡುವೆ ನಲುಗಿ ಹೋಗಿದ್ದಾರೆ.

ಇತ್ತೀಚೆಗೆ ಕಾರಾಗೃಹದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮ ನಿಮಿತ್ತ ಜಿಲ್ಲಾ ಪ್ರಧಾನ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಈ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಆತಂಕಕಾರಿ ಅಂಶಗಳು ಬಹಿರಂಗಗೊಂಡಿತ್ತು.

ಈ ಕಾರಾಗೃಹ ಕಟ್ಟಡವನ್ನು ಕೊಡಗಿನ ಹವಾಮಾನ ಅಥವಾ ಪ್ರಾಕೃತಿಕ ಕಾಲಮಾನಕ್ಕೆ ವ್ಯತಿರಿಕ್ತವಾಗಿ ನಿರ್ಮಿಸಿರುವದು ಗೋಚರಿಸಿದೆ. ಕಟ್ಟಡದ ಅಂತಸ್ತು ಕೆಲಸ ಸಮನಾಂತರ ಮಾಡುವಿನೊಂದಿಗೆ, ಯಾವದೇ ಇಳಿಜಾರು ಇತ್ಯಾದಿ ನಿರ್ಮಿಸದ ಪರಿಣಾಮ ಪ್ರಸಕ್ತ ಮಳೆಗಾಲದ ನೀರು ಹರಿಯದೆ ಅಲ್ಲೇ ಶೇಖರಣೆಗೊಳ್ಳಲಿದೆ.

ಪರಿಣಾಮ ಇಡೀ ಕಟ್ಟಡ ಮಳೆಗಾಲದಲ್ಲಿ ಸೋರುವದರೊಂದಿಗೆ ತೇವಾಂಶದಿಂದ ಕೊಠಡಿಗಳಲ್ಲಿ ಬಂದಿಗಳು ನೆಮ್ಮದಿಯಿಂದ ಮಲಗುವದಿರಲಿ, ಕುಳಿತುಕೊಳ್ಳಲು ಕೂಡ ಪರದಾಡುವಂತಾಗಿದೆ. ಗೋಡೆಗಳೆಲ್ಲ ನೀರಿನ ತೇವಾಂಶದಿಂದ ನೆಲದ ಗಾರೆಯೆಲ್ಲ ಕಿತ್ತು ಹೋಗಿವೆ. ಕೇವಲ ಆರೆಂಟು ವರ್ಷಗಳಲ್ಲಿ ಈ ಜೈಲು ಕಟ್ಟಡ ಹಳ್ಳಹಿಡಿಯುವಂತಾಗಿದೆ.

ಇದಕ್ಕೆ ಮುಖ್ಯವಾಗಿ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಮತ್ತು ತಾಂತ್ರಿಕ ಸಲಹೆ ನೀಡಿರುವ ಇಂಜಿನಿಯರ್‍ಗಳು ಹೊಣೆಗಾರರೆಂಬ ಅಸಮಾಧಾನ ಕೇಳಿಬಂದಿದೆ.

ಮಳೆಗಾಲದಲ್ಲಿ ಪರಿಸ್ಥಿತಿ ಹೀಗಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಬವಣೆ ಅನುಭವಿಸುವದರೊಂದಿಗೆ ಇತ್ತೀಚೆಗೆ ನೂತನವಾಗಿ ಕೊಳವೆಬಾವಿ ನಿರ್ಮಿಸಿರುವದಾಗಿ ಜೈಲು ಅಧಿಕಾರಿ ನ್ಯಾಯಾಧೀಶರ ಗಮನ ಸೆಳೆದರು. ಈ ಕಟ್ಟಡವನ್ನು ದುರಸ್ತಿಗೊಳಿಸಲು ಕನಿಷ್ಟ ರೂ. 65 ಲಕ್ಷ ಅವಶ್ಯವಿದ್ದು, ಈಗಾಗಲೇ ಈ ಕುರಿತು ಪ್ರಸ್ತಾವನೆಯೊಂದನ್ನು ಸರಕಾರಕ್ಕೆ ಕಳುಹಿಸಿರುವದಾಗಿ ತಿಳಿದುಬಂದಿದೆ. ಈ ಹಣ ಬಿಡುಗಡೆಯಾಗದಿದ್ದರೆ, ಜೈಲು ಕಟ್ಟಡದ ದುಸ್ಥಿತಿ ಹೀಗೆಯೇ ಮುಂದುವರಿದು ಖೈದಿಗಳು ಹಾಗೂ ಸಿಬ್ಬಂದಿಗಳ ಸ್ಥಿತಿ ಅಧೋಗತಿಯಾಗಲಿದೆ.

ಎಲ್ಲಾ ಹುದ್ದೆ ಖಾಲಿ: ಜಿಲ್ಲಾ ಕೇಂದ್ರ ಕಾರಾಗೃಹವು ನಗರದ ಹೊರವಲಯದಲ್ಲಿದ್ದು, 46 ಹುದ್ದೆಗಳು ಮಂಜೂರಾಗಿದ್ದು ಕೇವಲ 10 ಮಂದಿ ಕರ್ತವ್ಯದಲ್ಲಿದ್ದಾರೆ. ಜೈಲು ಅಧಿಕಾರಿಯಿಂದ ಮುಖ್ಯ ಪೇದೆ ತನಕ ಹುದ್ದೆಗಳಿಗೆ ನೇಮಕವಾಗದೆ, ಇರುವ 10 ಮಂದಿ ಒತ್ತಡದೊಂದಿಗೆ ಕೆಲಸ ನಿರ್ವಹಿಸುವಂತಾಗಿದೆ.

ವಿಭಿನ್ನ ಅಪರಾಧಿಗಳು: ಜೈಲು ಬಂದಿಗಳು ವಿಭಿನ್ನ ಅಪರಾಧಗಳನ್ನು ಮಾಡಿ ಕಾರಾಗೃಹಕ್ಕೆ ಬರುತ್ತಿದ್ದು, ಕೆಲವರು ಮಾದಕ ದುವ್ರ್ಯೆಸನಿಗಳಾಗಿದ್ದು, ಅಂಥವರನ್ನು ಕೂಡ ಬೆರಳೆಣಿಕೆಯಷ್ಟು ಸಿಬ್ಬಂದಿ ನೋಡಿಕೊಳ್ಳಲು ಕಷ್ಟಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡರು. ಈಗಿನ ನಿಯಮದಂತೆ ಸಮರ್ಪಕ ವ್ಯವಸ್ಥೆ, ಸಿ.ಸಿ. ಕ್ಯಾಮರಾಗಳು, ಟಿ.ವಿ.ಗಳ ವ್ಯವಸ್ಥೆ, ವಾಹನ, ವಾಹನ ಚಾಲಕರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಹಲವು ಸಮಸ್ಯೆಗಳು ಇಲ್ಲಿವೆ. ಮಡಿಕೇರಿ ಹೊರವಲಯದ ಗುಡ್ಡದಲ್ಲಿರುವ ಕಾರಾಗೃಹದಿಂದ ವಿವಿಧ ಕಾರಣಗಳಿಂದ ಬಂಧಿಗಳನ್ನು ನಿತ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವದು, ನ್ಯಾಯಾಲಯಗಳಿಗೆ ಹಾಜರುಪಡಿಸುವದು ಸೇರಿದಂತೆ ಮರಳಿ ಜೈಲಿನೊಳಗೆ ಕರೆದೊಯ್ದು ಬಿಡುವ ತನಕ ಅಂಥವರ ರಕ್ಷಣೆಗಾಗಿ ಪರಿತಪಿಸುವಂತಾಗಿದೆ ಎಂದು ನ್ಯಾಯಾಧೀಶರ ಮುಂದೆ ಅಸಹಾಯಕತೆ ತೋಡಿಕೊಂಡರು.

150 ಕ್ಕೂ ಅಧಿಕ ಬಂಧಿಗಳು: ಪ್ರಸಕ್ತ ಈ ಕಾರಾಗೃಹದಲ್ಲಿ 140 ಮಂದಿ ವಿಚಾರಣಾ ಬಂಧಿಗಳು, ಹನ್ನೊಂದು ಮಹಿಳಾ ಬಂಧಿಗಳ ಸಹಿತ ಒಂದು ಮಗು ಮತ್ತು ಆರು ಮಂದಿ ಶಿಕ್ಷೆಗೊಳಗಾಗಿರುವ ಖೈದಿಗಳಿದ್ದಾರೆ. ಗಂಡನ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಹೆಂಡತಿಯೊಂದಿಗೆ ಮಾನವೀಯ ನೆಲೆಯಲ್ಲಿ ಪುಟ್ಟ ಕಂದ ತಾಯಿ ಆಸರೆಯಲ್ಲಿ ಕಾರಾಗೃಹದಲ್ಲಿದೆ.

ಒಟ್ಟಿನಲ್ಲಿ ಮಡಿಕೇರಿಯ ಮಂಜು ಮುಸುಕಿದ ಮತ್ತು ಸದಾ ಶೀತದೊಂದಿಗೆ ಪ್ರಸಕ್ತ ವಿಪರೀತ ಮಳೆಯಲ್ಲಿ ಸೋರುತ್ತಿರುವ ಕಟ್ಟಡದೊಳಗೆ ಜೈಲು ಹಕ್ಕಿಗಳು ಸಮಸ್ಯೆಗಳ ‘ಸುರಿಮಳೆ’ಯ ನಡುವೆ ಸಂಕಟದಿಂದ ಕಾಲ ಕಳೆಯುವಂತಾಗಿದೆ.

- ಶ್ರೀಸುತ