ಸೋಮವಾರಪೇಟೆ, ಜೂ. 26: ತಾಲೂಕು ಸರ್ಕಾರಿ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವದರೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.

ತಾಲೂಕು ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಆಸ್ಪತ್ರೆಯಲ್ಲಿ 4ಮಂದಿ ಖಾಯಂ ಹಾಗೂ ಇಬ್ಬರು ವೈದ್ಯರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಂತ ವೈದ್ಯರು ಹಾಗೂ ರೇಡಿಯಾಲಜಿಸ್ಟ್ ಹೊಸದಾಗಿ ಬಂದಿದ್ದಾರೆ. ಹೊಸ ಸ್ಕ್ಯಾನಿಂಗ್ ಯಂತ್ರ ಅಳವಡಿಕೆಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ಉಪಕರಣಗಳ ಅಳವಡಿಕೆ ಆಗಬೇಕಿದೆ. ಸರ್ಕಾರದ ನಿಯಮ ದಂತೆ ತಜ್ಞ ವೈದ್ಯರನ್ನು ಜಿಲ್ಲಾಧಿಕಾರಿಗಳೇ ನೇರವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳ ಬಹುದಾಗಿದೆ. ಇಂತಹ ವೈದ್ಯರಿಗೆ ಉತ್ತಮ ಭತ್ಯೆಯೂ ಲಭಿಸಲಿದೆ ಎಂದ ರಂಜನ್, ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ದುರಸ್ತಿ ಪಡಿಸಲಾಗಿದ್ದು, ರೋಗಿಗಳ ಸೇವೆಗೆ ಲಭ್ಯವಿದೆ. ಡಯಾಲಿಸೀಸ್ ಕೇಂದ್ರ ಹಾಗೂ ಪ್ರಯೋಗಾಲಯಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ರಂಜನ್ ನುಡಿದರು.

ಆಸ್ಪತ್ರೆ ಆವರಣದ ಗೇಟ್ ಇಲ್ಲದಿರುವದರಿಂದ ಆಸ್ಪತ್ರೆಯ ಒಳಭಾಗದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ರೋಗಿಗಳ ವಾಹನ, ಆಂಬ್ಯುಲೆನ್ಸ್ ಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿಗೆ ಸ್ಪಂದಿಸಿದ ಶಾಸಕರು ಅಂತಹ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.

ಆಸ್ಪತ್ರೆಯ ಎದುರು ಭಾಗದಲ್ಲಿ ನಿರ್ಮಿಸುತ್ತಿರುವ ವೈದ್ಯರ ವಸತಿ ಗೃಹ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಹಾಗೂ ವಸತಿ ಗೃಹದ ಹಿಂಭಾಗದಲ್ಲಿರುವ ತ್ಯಾಜ್ಯ ಮುಖ್ಯ ರಸ್ತೆಗೆ ಬೀಳುತ್ತಿರುವ ಬಗ್ಗೆ ಸಂಬಂಧಿಸಿದ ಅಭಿಯಂತರರಿಂದ ಮಾಹಿತಿ ಪಡೆದ ಶಾಸಕರು ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಸಭೆಯಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ. ರವಿ ಕುಮಾರ್, ಜಿ.ಪಂ. ಸದಸ್ಯೆ ಸರೋಜಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಮಹಿಳಾ ಹಕ್ಕು ಆಯೋಗದ ಮಾರ್ಗದರ್ಶಿ ಅಶ್ವಿನಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಾಗರಾಜು, ಬಸವರಾಜು, ಮೋಹನ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.