ಸೋಮವಾರಪೇಟೆ, ಜೂ. 26: ತಾಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆದಿರುವ ವಿದ್ಯಾರ್ಥಿ ಚಿಂಗಪ್ಪನ ಸಾವು ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಂಬಂಧ ಇಲ್ಲಿನ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ವಿದ್ಯಾರ್ಥಿ ಸಾವಿನ ಸುತ್ತ ಅನುಮಾನಗಳು ವ್ಯಕ್ತಗೊಂಡಿರುವ ಹಿನ್ನೆಲೆ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಸೈನಿಕ ಶಾಲೆಯ ವಿದ್ಯಾರ್ಥಿ ಸಾವಿನ ಪ್ರಕರಣದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಕರಣದಲ್ಲಿ ಹಲವಷ್ಟು ಅನುಮಾನಗಳಿದ್ದು ಉನ್ನತ ಮಟ್ಟದ ತನಿಖೆ ಸೂಕ್ತ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಮಣಿ ಉತ್ತಪ್ಪ, ಸೈನಿಕ ಶಾಲೆಯ ಎದುರು ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದರು. ಇದಕ್ಕೆ ದಿನಾಂಕ ನಿಗದಿಗೊಳಿಸುವಂತೆ ತೀರ್ಮಾನಿಸಲಾಯಿತು.

ಖಾಯಂ ಅಧಿಕಾರಿ ನೇಮಕ: ತಾಲೂಕು ಪಂಚಾಯಿತಿಗೆ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿಗಳನ್ನು ನಿಯೋಜಿಸಿರುವದರಿಂದ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆ ಖಾಯಂ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸುವಂತೆ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು ಒತ್ತಾಯಿಸುವಂತೆ ನಿರ್ಣಯಿಸ ಲಾಯಿತು.

(ಮೊದಲ ಪುಟದಿಂದ)

ಸಕಾಲಕ್ಕೆ ಅನುಪಾಲನಾ ವರದಿ: ಅನುಪಾಲನಾ ವರದಿ ಸಕಾಲಕ್ಕೆ ಪಂಚಾಯಿತಿ ಸದಸ್ಯರಿಗೆ ತಲುಪುತ್ತಿಲ್ಲ. ಮುಂದೆ ನಡೆಯುವ ಸಭೆಗಳಿಗೆ ಅನುಪಾಲನಾ ವರದಿಯನ್ನು ಸದಸ್ಯರ ಮನೆ ಬಾಗಿಲಿಗೆ ಶೀಘ್ರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು. ನಾಳೆ ಸಭೆ ಎಂದರೆ ಇಂದು ಸಂಜೆ ವರದಿ ಕೈಸೇರುತ್ತಿದೆ. ಇದರಿಂದಾಗಿ ಚರ್ಚೆ ನಡೆಸಲು ಸಾಧ್ಯವಾಗುತ್ತಿಲ್ಲ. ತಾ.ಪಂ. ಸದಸ್ಯರೆಂದರೆ ಗೌರವವೇ ಇಲ್ವಾ? ಕಾಟಾಚಾರದ ಸಭೆ ನಡೆಸೋದು ಯಾಕೆ? ಎಂದು ಸದಸ್ಯ ಮಣಿ ಉತ್ತಪ್ಪ ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಸದಸ್ಯರಾದ ಕುಶಾಲಪ್ಪ, ತಂಗಮ್ಮ, ಸಬಿತಾ ಚೆನ್ನಕೇಶವ, ಕುಸುಮಾ ಅಶ್ವಥ್ ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪುಷ್ಪಾ ರಾಜೇಶ್, ತಾನು ಹೇಳಿದ್ದರೂ ಕೆಲಸ ಮಾಡುವದಿಲ್ಲ, ನಾನೇ ಹೋಗಿ ಟೈಪ್ ಮಾಡೋಕೆ ಆಗುತ್ತಾ? ಎಂದು ತಮ್ಮ ಅಸಹಾಯಕತೆ ತೋರ್ಪಡಿಸಿ ದರಲ್ಲದೇ, ಈಗಾಗಿರುವ ಅಚಾತುರ್ಯ ಮುಂದೆ ಆಗದಂತೆ ಎಚ್ಚರಿಕೆ ವಹಿಸಲಾಗುವದು ಎಂದರು.

ಪಿಡಿಓಗೆ ನೋಟೀಸ್: ತಾಲೂಕಿನ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಅನೇಕರು ಸಾವಿಗೀಡಾಗುತ್ತಿದ್ದಾರೆ. ಆ ವ್ಯಾಪ್ತಿಯ ಬೆಟ್ಟದಳ್ಳಿ ಪಂಚಾಯಿತಿಯವರು ಎಚ್ಚರಿಕೆ ವಹಿಸುತ್ತಿಲ್ಲ. ಪ್ರವಾಸಿಗರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದರೂ, ಮೂಲಭೂತ ಅವಶ್ಯಕತೆಗಳನ್ನು ನೀಡುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆಯೋ ಇಲ್ಲವೋ ಎಂಬ ಸಂಶಯ ಇದೆ ಎಂದು ಅಭಿಮನ್ಯುಕುಮಾರ್ ಹೇಳಿದರು.

ಈ ಬಗ್ಗೆ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಾ.ಪಂ.ನಿಂದ ನೋಟೀಸ್ ನೀಡಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಿರಿ. ಮುಂದೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ದೇಶನ ನೀಡಿ ಎಂದು ಕಾರ್ಯನಿರ್ವಹಣಾಧಿಕಾರಿ ಚಿಟ್ಟಿಯಪ್ಪ ಅವರಿಗೆ ಸಭೆ ಸೂಚಿಸಿತು.

ತಾಲೂಕು ಪಂಚಾಯಿತಿ ಸದಸ್ಯರ ಮಾತುಗಳಿಗೆ ಬಹುತೇಕ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸ್ಪಂದಿಸದೇ ಇರುವದರಿಂದ ಅಭಿವೃದ್ದಿ ಕುಂಠಿತಗೊಂಡಿದೆ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆಯೂ ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ. ತಾಲೂಕು ಪಂಚಾಯಿತಿಯ ಅಧೀನದಲ್ಲೇ ನಾವಿದ್ದೇವೆ ಎಂಬ ತಿಳುವಳಿಕೆಯೂ ಪಿಡಿಓಗಳಿಗಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಅಭಿವೃಧಿ ಅಧಿಕಾರಿಗಳಿಗೆ ಸೂಚನೆ ನೀಡ ಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಲೋಕೋಪಯೋಗಿ ಇಲಾಖೆ ವಿರುದ್ಧ ಗರಂ: ಮಾದಾಪುರ ತಾ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವದಕ್ಕೂ ಮೊದಲೇ 7 ಲಕ್ಷ ಬಿಲ್ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತಾಕೀತು ಮಾಡಿದ್ದರೂ ಕೆಲಸ ಪ್ರಾರಂಭಿಸಿಲ್ಲ. ಮುಂದಿನ 1 ವಾರದಲ್ಲಿ ಕಾಮಗಾರಿ ಪ್ರಾರಂಭ ವಾಗದೇ ಇದ್ದಲ್ಲಿ ಲೋಕಾಯುಕ್ತ, ಎಸಿಬಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ಇಲಾಖೆಯ ಅಭಿಯಂತರ ರಘು ಅವರಿಗೆ ಎಚ್ಚರಿಕೆ ನೀಡಲಾಯಿತು.

ತಾಲೂಕಿನ ಬಹುತೇಕ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ರಸ್ತೆಗಳು ಕಳಪೆ ಕಾಮಗಾರಿಯಿಂದ ತೊಳೆದುಹೋಗುತ್ತಿವೆ. ಸೂಕ್ತ ಚರಂಡಿ ಇಲ್ಲದೇ ರಸ್ತೆಗಳು ಗುಂಡಿಮಯವಾಗುತ್ತಿವೆ. ರಸ್ತೆಯ ಬದಿಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸವೂ ಆಗಿಲ್ಲ ಎಂದು ಇಂಜಿನಿಯರ್ ರಘು ವಿರುದ್ಧ ತಿರುಗಿಬಿದ್ದರು.

ದುಬಾರೆ ರಸ್ತೆಯಲ್ಲಿ ವಾಹನಗಳು ಅತೀ ವೇಗದಿಂದ ಸಂಚರಿಸುತ್ತಿದ್ದು, ಸ್ಥಳೀಯರಿಗೆ ರಸ್ತೆಯಲ್ಲಿ ನಡೆದಾಡಲೂ ಭಯವಾಗುತ್ತಿದೆ. ತಕ್ಷಣ ರಸ್ತೆಗೆ ಹಂಪ್ಸ್ ಹಾಗೂ ರಸ್ತೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸದಸ್ಯ ವಿಜು ಸುಬ್ರಮಣಿ ಒತ್ತಾಯಿಸಿದರು. ರಾಜ್ಯ ಸರಕಾರದ ವಿಶೇಷ ಪ್ಯಾಕೇಜ್‍ನಡಿಯಲ್ಲಿ 52 ರಸ್ತೆ ಕಾಮಗಾರಿಗಳ ಪೈಕಿ 37ಪೂರ್ಣ ಗೊಂಡಿದೆ. 15 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅಭಿಯಂತರ ರಘು ಮಾಹಿತಿ ನೀಡಿದರು.

ತಾಲೂಕಿನ ದುಬಾರೆ ಪ್ರವಾಸಿ ತಾಣದಲ್ಲಿ ಈ ಹಿಂದೆ ಇದ್ದ ರಿವರ್ ರ್ಯಾಪ್ಟಿಂಗ್‍ನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿಗಳು ಇನ್ನೂ ಇದನ್ನು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ. ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸ್ಥಳೀಯರ ಜೀವನಕ್ಕೆ ಆಧಾರವಾದ ಉದ್ಯೋಗಕ್ಕೂ ಕುತ್ತು ಒದಗಿದೆ ಎಂದು ಸದಸ್ಯ ವಿಜು ಚಂಗಪ್ಪ ಆರೋಪಿಸಿದರು.

ಕಾನೂನಾತ್ಮಕವಾಗಿ ರಿವರ್ ರ್ಯಾಫ್ಟಿಂಗ್ ಕೈಗೊಳ್ಳಲು ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆ ತೀರ್ಮಾನಿಸಿತು.

ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ 7 ಶಾಲೆಗಳು ಮುಚ್ಚಲ್ಪಟ್ಟಿವೆ. ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಲಾಗಿದೆ. ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಲ್ಲಿ ಅತಿಥಿ ಶಿಕ್ಷಕರನ್ನು ತೆಗೆದು ಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಸಭೆಗೆ ತಿಳಿಸಿದರು.

ಮಾದಾಪುರದ ಸಸ್ಯ ಕ್ಷೇತ್ರದಲ್ಲಿ ಸುಮಾರು 300 ಏಕರೆ ಜಾಗ ಪಾಳು ಬಿದ್ದಿದ್ದು, ಇಲಾಖೆಯವರು ಯಾವದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಇದನ್ನು ಬೇರಾವು ದಾದರೂ ಇಲಾಖೆಗೆ ಹಸ್ತಾಂತರಿ ಸುವದು ಒಳಿತು ಎಂದು ಉಪಾಧ್ಯಕ್ಷರು ಹೇಳಿದರು.

ಚೆಟ್ಟಳ್ಳಿ ಭಾಗದಲ್ಲಿ ಕಾಡಾನೆಗಳು ಹಾಗೂ ಹುಲಿ ಧಾಳಿಯಿಂದ ಕೃಷಿಕರು, ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಸಭೆಗಳಲ್ಲಿ ಚರ್ಚೆ ಯಾಗುವದನ್ನು ಹೊರತು ಪಡಿಸಿದರೆ ಶಾಶ್ವತ ಪರಿಹಾರ ಲಭಿಸುತ್ತಿಲ್ಲ. ಈ ಬಗ್ಗೆ ರಾಜ್ಯ ಅರಣ್ಯ ಸಚಿವರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸ ಬೇಕೆಂದು ಮಣಿ ಉತ್ತಪ್ಪ ಆಗ್ರಹಿಸಿದರು.

ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಗುಂಪೊಂದು ದಾಂಧಲೆ ನಡೆಸಿದ್ದರೂ ಇವರ ವಿರುದ್ದ ಪೊಲೀಸ್ ದೂರು ನೀಡಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಿಲ್ಲ. ತಕ್ಷಣ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸದಸ್ಯರುಗಳು ಸಭೆಯಲ್ಲಿ ಒತ್ತಾಯಿಸಿದರು.

ತಾಕೇರಿ-ಹಾನಗಲ್ಲು ರಸ್ತೆಯ ಬದಿಯಲ್ಲಿ ಏರ್‍ಟೆಲ್ ಕಂಪೆನಿಯವರು ಗುಂಡಿ ತೋಡಿ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ ಎಂದು ಸದಸ್ಯ ಸತೀಶ್ ಸಭೆಯ ಗಮನ ಸೆಳೆದರು. ಈಗಾಗಲೇ ಏರ್‍ಟೆಲ್ ಮತ್ತು ಜಿಯೋ ಕಂಪೆನಿಗಳ ವಿರುದ್ದ ಡಿವೈಎಸ್‍ಪಿಗೆ ದೂರು ನೀಡಲಾಗಿದೆ ಎಂದು ಅಭಿಯಂತರ ರಘು ಮಾಹಿತಿ ನೀಡಿದರು.

ಗೋಣಿಮರೂರು-ಗಣಗೂರು ರಸ್ತೆ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕೆಂದು ಸದಸ್ಯೆ ಸವಿತ ಒತ್ತಾಯಿಸಿದರು. ಸದ್ಯಕ್ಕೆ ವೆಟ್‍ಮಿಕ್ಸ್ ಹಾಕಿ ಗುಂಡಿಗಳನ್ನು ಮುಚ್ಚ ಲಾಗುವದು ಎಂದು ಅಭಿಯಂತರ ತಿಳಿಸಿದರು. ತ್ಯಾಜ್ಯ ವಿಲೇವಾರಿ, ರಸ್ತೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅರಣ್ಯ ಇಲಾಖೆಯವರು ಅಡ್ಡಿಪಡಿಸಬಾರದು ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯರುಗಳು, ವಿವಿಧ ಇಲಾಖಾಧಿ ಕಾರಿಗಳು ಉಪಸ್ಥಿತರಿದ್ದರು.