ಸಿದ್ದಾಪುರ, ಜೂ. 27: ದುಬೈನ ಕೂರ್ಗ್ ಯುನೈಟೆಡ್ ವತಿಯಿಂದ ನಡೆದ ಕೂರ್ಗ್ ಈದ್ ಮೀಟ್ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾಟ ವಿಜ್ರಂಭಣೆಯಿಂದ ನಡೆಯಿತು.

ದುಬೈನ ಶೇಕ್ ಜಾಹಿದ್ ರಸ್ತೆಯಲ್ಲಿರುವ ಅಲ್‍ಕೂಸ್ ಡಲ್ಸ್‍ಕೋ ಹೊನಲು ಬೆಳಕಿನ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೊಡಗಿನ ಕ್ರೀಡಾಪಟುಗಳು ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ ಜಿಲ್ಲೆಯ ಆಟಗಾರರ ಒಟ್ಟು 14 ತಂಡಗಳು ಭಾಗವಹಿಸಿದ್ದು, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿ.ಆರ್.ವಿ.ಸಿ ತಂಡವು ಮಡಿಕೇರಿ ತಂಡವನ್ನು ಹಾಗೂ ಸಾಗರ್ ಫ್ರೆಂಡ್ಸ್ ತಂಡವು ಸಿ. ವೈ. ಸಿ. ಚಾಮಿಯಾನ ತಂಡವನ್ನು ಮಣಿಸಿ ಫೈನಲ್‍ಗೆ ಪ್ರವೇಶಿಸಿದರು.

ಫೈನಲ್ ಪಂದ್ಯಾಟದಲ್ಲಿ ಸಮೀರ್ ನಾಯಕತ್ವದ ಸಾಗರ್ ಫ್ರೆಂಡ್ಸ್ ತಂಡವು ಐದು ಓವರ್‍ಗಳಲ್ಲಿ 39 ರನ್ ಗಳಿಸಿತ್ತು. 40 ರನ್‍ಗಳ ಗುರಿ ಬೆನ್ನಟ್ಟಿದ ಜಾಸಿ ನಾಯಕತ್ವದ ವಿ.ಆರ್.ವಿ.ಸಿ ತಂಡವು 26 ರನ್‍ಗಳನ್ನು ಪಡೆಯಲಷ್ಟೇ ಶಕ್ತವಾಯಿತು. ಸಾಗರ್ ಫ್ರೆಂಡ್ಸ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಖಲೀಲ್, ಮುಜಮಿಲ್, ನೌಶೀರ್, ಶಮೀಲ್, ನೂರುದ್ದೀನ್, ಸೈಯದ್ ಹಾಗೂ ಜಮಾಲ್ ಸೇರಿದಂತೆ ಇನ್ನಿತರರು ಇದ್ದರು.