*ಗೋಣಿಕೊಪ್ಪಲು, ಜೂ. 28: ಅರುವತ್ತೊಕ್ಲು ಮತ್ತು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ನಡುವಿನ ಗಡಿ ಸಮಸ್ಯೆಯಿಂದ ಇಲ್ಲಿನ ಮೈಸೂರಮ್ಮ ನಗರದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ದೊರಕದಂತಾಗಿದೆ.

ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಇಲ್ಲಿನ ಗಡಿ ಸಮಸ್ಯೆಯಿಂದ ಕಸ ವಿಲೇವಾರಿಗೊಳಿಸುವ ಜವಾಬ್ದಾರಿ ಯಾರ ಹೊಣೆ ಎಂಬ ಪ್ರಶ್ನೆಗೆ ಕಾರಣವಾಗಿದೆ. ಮೈಸೂರಮ್ಮ ನಗರ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟರು ನಗರಕ್ಕೆ ಪ್ರವೇಶಿಸುವ ಮಾರ್ಗದುದ್ದಕ್ಕೂ ಗೋಣಿಕೊಪ್ಪಲು ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಈ ಭಾಗದ ಜನರು ಕಸವನ್ನು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಗ್ರಾ.ಪಂ. ಆಸ್ತಿ ಎಂಬ ನಾಮಫಲಕ ಅಳವಡಿಸಿದ ಸ್ಥಳದಲ್ಲೇ ಕಸವನ್ನು ಸುರಿಯುತ್ತಿದ್ದಾರೆ. ಆದರೆ ಕಸ ವಿಲೇವಾರಿ ಮಾಡಲು ಎರಡು ಪಂಚಾಯಿತಿಗಳು ಮುಂದಾಗುತ್ತಿಲ್ಲ. ಅರುವತ್ತೊಕ್ಲು ಗ್ರಾ.ಪಂ.ನ ಹೊಣೆಗಾರಿಕೆ ಎಂದು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದರೆ, ಈ ಸ್ಥಳ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದು ಎಂಬ ಮೌನದಲ್ಲಿ ಅರುವತ್ತೊಕ್ಲು ಗ್ರಾಮ ಪಂಚಾಯಿತಿ ಇದೆ. ಹೀಗಾಗಿ ಕಸದ ಸಮಸ್ಯೆ ಇಲ್ಲಿ ಬಗೆಹರಿಯುವಂತೆಯೇ ಕಾಣುತ್ತಿಲ್ಲ. ಅರುವತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮ ನಗರದಲ್ಲಿ ಕಸದ ರಾಶಿ ರಸ್ತೆ ಅಗಲಕ್ಕೂ ಹರಡಿಕೊಂಡಿದೆ. ಎರಡು ಪಂಚಾಯಿತಿಯ ನಿರ್ಲಕ್ಷ್ಯ ಕಸದ ಸಮಸ್ಯೆ ಬಗೆಹರಿಸಲಾಗದ ಕಗ್ಗಂಟಾಗಿದೆ. - ಎನ್.ಎನ್. ದಿನೇಶ್