*ಗೋಣಿಕೊಪ್ಪಲು, ಜೂ. 27: ಶ್ರೀಮಂಗಲ ಶ್ರೀ ಕೃಷ್ಣ ದೇವಸ್ಥಾನದ ಸಮೀಪದ ಐಪುಮಾಡ ಸಂಜು ಅವರ ಕಾಫಿ ತೋಟಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟು ದಾಂಧಲೆ ನಡೆಸಿದೆ.

ಮಂಗಳವಾರ ಮುಂಜಾನೆ ಸುಮಾರು ಏಳು ಆನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಕಾಫಿ ಗಿಡಗಳು, ಬಾಳೆ, ತೆಂಗು, ಅಡಿಕೆ ಫಸಲುಗಳನ್ನು ನಾಶಪಡಿಸಿದೆ. ಅಲ್ಲದೆ ಈ ಹಿಂದೆ ಅಷ್ಟೆ ಹೊಸ ತೋಟ ನಿರ್ಮಿಸಿದ್ದು, ಚಂದ್ರಗಿರಿ ಹಾಗೂ ರೋಬಸ್ಟ ಗಿಡಗಳನ್ನು ನೆಡಲಾಗಿತ್ತು ಜೊತೆಗೆ ಹೊಸ ತಳಿಯ ಬಾಳೆ ಗಿಡಗಳನ್ನು ನೆಡಲಾಗಿತ್ತು. ಆನೆ ದಾಂಧಲೆಗೆ ಸಂಪೂರ್ಣ ನಾಶವಾಗಿದೆ. ಸುಮಾರು ಮೂರು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ತೋಟದ ಮಾಲೀಕ ಸಂಜು ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವಾರಗಳಿಂದ ಆನೆಯ ಹಿಂಡು ಗ್ರಾಮದಲ್ಲಿ ಓಡಾಡುತ್ತಿದೆ. ಕಾಫಿ ತೋಟಗಳಲ್ಲಿರುವ ಹಲಸಿನ ಹಣ್ಣುಗಳನ್ನು ತಿನ್ನಲು ಆನೆಗಳು ಬರುತ್ತಿದ್ದು, ಈ ಸಂದರ್ಭ ತೋಟದೊಳಗೆ ಆನೆ ನುಗ್ಗುವ ರಭಸಕ್ಕೆ ಕಾಫಿ ಗಿಡಗಳು ನಾಶವಾಗಿದೆ. ಆನೆಯ ಗುಂಪಿನಲ್ಲಿ ಮರಿ ಆನೆÀಗಳು ಇರುವದರಿಂದ ಹೆಚ್ಚು ದಾಂಧಲೆ ನಡೆಸಿ ಫಸಲುಗಳನ್ನು ನಾಶಪಡಿಸಿದೆ. ಸುತ್ತಮುತ್ತಲಿನ ತೋಟಗಳಿಗೂ ನುಸುಳಿ ಆನೆ ದಾಂಧಲೆ ನಡೆಸಿದೆ. ಕಾಟಿಪಾಡ್, ಕುವಾಲೆಕಾಡ್ ಕಾಡುಗಳಲ್ಲಿ ಆನೆ ಬೀಡುಬಿಟ್ಟಿದ್ದು ಸಂಜೆ ಅರಣ್ಯ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.