ಮಡಿಕೇರಿ, ಜೂ. 27: ಪವಿತ್ರ ಕಾವೇರಿ ನದಿಯನ್ನು ಅಪವಿತ್ರ ಗೊಳಿಸದಂತೆ ನಡೆಯುತ್ತಿರುವ ಹೋರಾಟ- ಜಾಗೃತಿ ಕಾರ್ಯಕ್ರಮಗಳು ಒಂದೆಡೆಯಾದರೆ ಇತ್ತ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಕೆಲವರು ವರ್ತಿಸುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಮತ್ತೊಂದು ಗಂಭೀರ ಸ್ವರೂಪದ ಕೃತ್ಯವೊಂದು ಬೆಳಕಿಗೆ ಬಂದಿದೆ. ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದೋಣಿಕಡವು ಎಂಬ ಸ್ಥಳದಲ್ಲಿ ಕಾವೇರಿ ನದಿಗೆ ದುಷ್ಕರ್ಮಿಗಳು ಜೀಪಿನಲ್ಲಿ ತಂದು ರಾಶಿಗಟ್ಟಲೆ ಕಸ ಸುರಿದಿದ್ದಾರೆ. ಅದೂ ಇಲ್ಲಿ ಸುರಿದಿರುವದು ಆಸ್ಪತ್ರೆಯ ತ್ಯಾಜ್ಯ ವಸ್ತುಗಳು ಎಂಬದು ಗಂಭೀರ ವಿಚಾರವಾಗಿದೆ.ಹೊಳೆ ಬದಿಯಲ್ಲಿ ಈ ರೀತಿಯ ಕಸ ರಾಶಿಗಟ್ಟಲೆ ಹರಡಿವೆ. ಇನ್ನು ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ನದಿಯೊಳಗೆ ಇನ್ನೆಷ್ಟು ಇಂತಹ ತ್ಯಾಜ್ಯಗಳನ್ನು ಸುರಿದಿದ್ದಾರೋ

(ಮೊದಲ ಪುಟದಿಂದ) ಎಂಬದು ನಿಗೂಢವಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಈ ತ್ಯಾಜ್ಯಗಳನ್ನು ಎಲ್ಲಿಂದ ತರಲಾಗಿದೆ ಎಂಬದು ಪ್ರಶ್ನಾರ್ಹವಾಗಿದೆ. ಕೆಲವರು ನೆರೆಯ ಕೇರಳ ಕಡೆಯಿಂದ ತಂದಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ಸುರಿದಿರುವದನ್ನು ಗಮನಿಸಿದ ಅಲ್ಲಿನ ಸ್ಥಳೀಯರೊಬ್ಬರಾದ ಎ.ಎಂ. ತಿಮ್ಮಯ್ಯ ಅವರು ನಾಪೋಕ್ಲು ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳೀಯ ಪಂಚಾಯಿತಿ ಆಡಳಿತ, ಜಿಲ್ಲೆಯ ಆರೋಗ್ಯ ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕೃತ್ಯವೆಸಗುವವರನ್ನು ಪತ್ತೆಹಚ್ಚಿ ನಿಯಂತ್ರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.