ಮಡಿಕೇರಿ, ಜೂ. 28: ಕ್ಷುಲ್ಲಕ ವಿಚಾರಕ್ಕೆ ಗುಂಡು ಹಾರಿಸಿ ವ್ಯಕ್ತಿಯೋರ್ವರನ್ನು ಹತ್ಯೆಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇಲ್ಲಿನ ನ್ಯಾಯಾಲಯ ಆರೋಪಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಳೆದ ತಾ. 9.6.14 ರಂದು ಮುಟ್ಲು ಗ್ರಾಮದ ಧರ್ಮಮ್ಮಯ್ಯ ಎಂಬವರಿಗೆ ಸೇರಿದ ಗದ್ದೆಯಲ್ಲಿನ ಪೈರನ್ನು ಸಿ. ಆರ್. ಅಶೋಕ್ ಎಂಬವರಿಗೆ ಸೇರಿದ ದನಗಳು ತಿಂದು ಹಾಕಿದ್ದು, ಗದ್ದೆಗೆ ದನ ಬಿಟ್ಟಿರುವದಕ್ಕೆ ಧರ್ಮಮ್ಮಯ್ಯ, ಅಶೋಕ್‍ರನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ಮಾತಿನ ಚಕಮಕಿ ನಡೆದು ಅಶೋಕ್ ಬಂದೂಕು ತಂದು ಗುಂಡು ಹಾರಿಸಿ ದ್ದಾರೆ. ಗುಂಡಿನ ಚಿಲ್ಲುಗಳು ಧರ್ಮಮ್ಮಯ್ಯ ಅವರ ಹಣೆಗೆ ತಾಗಿ ಗಾಯವಾಗಿರುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸೋಮವಾರಪೇಟೆ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಲೆಯತ್ನ ಆರೋಪಕ್ಕಾಗಿ 7 ವರ್ಷಗಳ ಕಠಿಣ ಸಜೆ ಹಾಗೂ ರೂ. 10 ಸಾವಿರ ದಂಡ, ಬಂದೂಕು ಪರವಾನಗಿ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ 1 ವರ್ಷ ಕಠಿಣ ಸಜೆ ಹಾಗೂ ರೂ. 5 ಸಾವಿರ ದಂಡ, ಬಂದೂಕು ಪರವಾನಗಿ ದುರುಪಯೋಗ ಪಡಿಸಿ ಕೊಲೆಗೆ ಯತ್ನಿಸಿದಕ್ಕಾಗಿ 7 ವರ್ಷ ಕಠಿಣ ಸಜೆ ಹಾಗೂ ರೂ. 5 ಸಾವಿರ ದಂಡ ಸೇರಿದಂತೆ ಒಟ್ಟು 15 ವರ್ಷ ಸಜೆ ಹಾಗೂ ರೂ. 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಾವತಿಯಾಗುವ ದಂಡದ ಹಣದಲ್ಲಿ ರೂ. 10 ಸಾವಿರವನ್ನು ಗಾಯಾಳು ಧರ್ಮಮ್ಮಯ್ಯ ಅವರಿಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಎಂ.ಕೃಷ್ಣವೇಣಿ ವಾದ ಮಂಡಿಸಿದ್ದರು.