ಗೋಣಿಕೊಪ್ಪಲು, ಜೂ. 28: ಹೊಸೂರು, ಕಳತ್ಮಾಡು ಹಾಗೂ ಕೊಳತ್ತೋಡು, ಬೈಗೋಡು ಗ್ರಾಮದ 496 ಹೆಕ್ಟೇರ್ ಪ್ರದೇಶವನ್ನು ಉಪಗ್ರಹ ಮೂಲಕ ಆಯ್ಕೆ ಮಾಡಲಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಅನುದಾನ ಬಿಡುಗಡೆಯಾಗಲಿರುವದಾಗಿ ಜಲಾನಯನ ಮತ್ತು ಕೃಷಿ ಇಲಾಖೆಯ ಕಾರ್ಯಕ್ರಮದ ಬಗ್ಗೆ ಅಧಿಕಾರಿ ಚಂದ್ರಶೇಖರ್ ಗ್ರಾಮಸ್ಥರಿಗೆ ವಿವರಣೆ ನೀಡಿದರು.

ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ 2018-19ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಹಾಗೂ ನೋಡೆಲ್ ಅಧಿಕಾರಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯ ಅವರ ಸಮ್ಮುಖದಲ್ಲಿ ನಡೆದು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯ ಕುರಿತಂತೆ ಚರ್ಚೆ ನಡೆಯಿತು.

ಜಲಾನಯನ ಅಭಿವೃದ್ಧಿಗಾಗಿ ಕಾರ್ಯಕಾರಿ ಸಮಿತಿ ಅಸ್ತಿತ್ವದಲ್ಲಿದ್ದು, ಮೊದಲ ಹಂತದಲ್ಲಿ ಕೃಷಿ ಹೊಂಡ ಮುಂತಾದ ಜಲಮೂಲ ಸಂರಕ್ಷಣೆಯ ಕುರಿತು ತರಬೇತಿ, ನಿರ್ವಹಣೆ ಕುರಿತು ಕೃಷಿಕರಿಗೆ ಮಾಹಿತಿ ನೀಡಲಾಗುವದು ಎಂದು ಹೇಳಿದರು.

ಇಲಾಖೆಯು 1 ಹೆಕ್ಟೇರ್ ಪ್ರದೇಶಕ್ಕೆ 15,000 ಸಹಾಯಧನ ನಿಗಧಿ ಪಡಿಸಿದ್ದು, ಶೇ. 10 ರಷ್ಟು ಮೊತ್ತವನ್ನು ಸರ್ಕಾರಕ್ಕೆ ವಂತಿಗೆ ರೂಪದಲ್ಲಿ ರೈತರು ನೀಡಬೇಕಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಎಂದು ಮೂರು ವಿಭಾಗದಲ್ಲಿ ಜಲಮೂಲ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಓರ್ವ ರೈತರಿಗೆ ಗರಿಷ್ಟ ರೂ. 60 ಸಾವಿರ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ. ಕಾಫಿ ತೋಟದ ಬದಿಯಲ್ಲಿನ ಚರಂಡಿ ನಿರ್ಮಾಣಕ್ಕೆ ರೂ. 10,170 ಪ್ರೋತ್ಸಾಹ ಧನವಿದೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು. ಹೊಸ ಕೆರೆ ನಿರ್ಮಾಣಕ್ಕೂ ವಿಶೇಷ ಅನುದಾನ ಕಲ್ಪಿಸಲು ಅವಕಾಶವಿದೆ ಎಂದು ಹೇಳಿದರು.

ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಕ್ಷಾಮ ಹಾಗೂ ಅಗತ್ಯ ಮಾರ್ಗದಾಳು ಸೇವೆ ಇಲ್ಲದೆ ಗ್ರಾಮಸ್ಥರು ತೀವ್ರ ಬವಣೆ ಅನುಭವಿಸುತ್ತಿರುವ ಕುರಿತು ಚೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಕೃಷ್ಣಕುಮಾರ್ ಅವರೊಂದಿಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಗ್ರಾಮ ವ್ಯಾಪ್ತಿಯಲ್ಲಿ ಗಾಳಿ - ಮಳೆ ಸಂದರ್ಭ ಲಂಗುಲಗಾಮಿಲ್ಲದೆ ವಿದ್ಯುತ್ ಕಡಿತ ಉಂಟಾಗುತ್ತಿದೆ. ಕೆಲವು ಕೃಷಿಕರಿಗೆ ನೀಡಲಾದ ವಿದ್ಯುತ್ ಮೀಟರ್ ಅತ್ಯಧಿಕ ಬಿಲ್ ಮೊತ್ತ (ರೀಡಿಂಗ್) ತೋರಿಸುತ್ತಿದೆ ಎಂಬ ಆರೋಪವೂ ವ್ಯಕ್ತವಾಯಿತಲ್ಲದೆ, ಹೊಸೂರು ವ್ಯಾಪ್ತಿಗೆ ಶಾಶ್ವತ ಮಾರ್ಗದಾಳು ನಿಯೋಜಿಸಲು ಸಾರ್ವಜನಿಕರು ಒತ್ತಾಯಿಸಿದರು.

ನಮ್ಮ ಗ್ರಾಮ ನಮ್ಮ ರಸ್ತೆ, ನಮ್ಮ ಹೊಲ ನಮ್ಮ ದಾರಿ ಯೋಜನೆ ಅತಿ ಸಣ್ಣ ರೈತರು ಮತ್ತು ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿರುವ ಕುರಿತು ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಆರ್‍ಟಿಸಿ ವಿತರಣೆ ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ 100 ಸಾರ್ವಜನಿಕ ಅಗತ್ಯ ಸೇವೆ ಕಲ್ಪಿಸುವ ಸಲುವಾಗಿ ಸಭೆಯಲ್ಲಿ ಅಧ್ಯಕ್ಷ ಗೋಪಿ ಚಿಣ್ಣಪ್ಪ ಮಾಹಿತಿ ನೀಡಿದರು.

ಮೀನುಗಾರಿಕಾ ಇಲಾಖೆಯ ‘ನೀಲಿ ಕ್ರಾಂತಿ ಯೋಜನೆ’ ಬಗ್ಗೆ ನೋಡೆಲ್ ಅಧಿಕಾರಿ ಪ್ರಿಯ ಮಾಹಿತಿ ನೀಡಿದರು. ಮೀನು ಕೊಳ ನಿರ್ಮಾಣಕ್ಕೆ ಹೂಡಿಕೆ, ಮೀನು ಆಹಾರ ಹಾಗೂ 1000 ಮೀನು ಮರಿಗಳನ್ನು ರೂ. 400 ಸರ್ಕಾರಿ ದರದಲ್ಲಿ ನೀಡುವದಾಗಿ ಮಾಹಿತಿ ನೀಡಿದರು. ಕಾಟ್ಲಾ, ರೋವು, ಗ್ರಾಸ್ ಕಾರ್ಪ್ ಮೀನು ಮರಿಗಳನ್ನು ಬೇಡಿಕೆಗೆ ತಕ್ಕಂತೆ ಪೂರೈಸಲಾಗವದು ಎಂದು ಹೇಳಿದರು. ಮೀನು ಮಾರಾಟಕ್ಕೆ ಬಳಸುವ ದ್ವಿಚಕ್ರ, ತ್ರಿಚಕ್ರ, ಚತುಷ್ಖಕ್ರ ವಾಹನ ಖರೀದಿಗೂ ಸಹಾಯ ಧನ ಇರುವ ಬಗ್ಗೆ ಮಾಹಿತಿ ನೀಡಿದರು.

ಆಗಸ್ಟ್ ತಿಂಗಳಿನಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಅಲಂಕಾರಿಕಾ ಮೀನು ಸಾಕಾಣೆ ತರಬೇತಿ ಹಾಗೂ ಮಂಗಳೂರಿಗೆ ಒಂದು ದಿನ ಅಧ್ಯಯನ ಪ್ರವಾಸ ಕುರಿತು ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಹಾಗೂ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಅವರು ಮಾತನಾಡಿ, ಗ್ರಾ.ಪಂ. ರಸ್ತೆ ಅಭಿವೃದ್ಧಿಗೆ ಜಿ.ಪಂ. ಅನುದಾನ ಏನೇನೂ ಸಾಲದು 4 ಗ್ರಾ.ಪಂ. ರಸ್ತೆ ಅಭಿವೃದ್ಧಿಗೆ ರೂ. 12 ಲಕ್ಷ ಮಾತ್ರ ಬಿಡುಗಡೆ ಯಾಗಿದೆ. ಕುಡಿಯುವ ನೀರು ಯೋಜನೆಗೆ ರಾಜ್ಯ ಸರ್ಕಾರ ರೂ. 4 ಕೋಟಿ ಬಿಡುಗಡೆ ಇನ್ನೂ ಮಾಡಿಲ್ಲ. ಜಿ.ಪಂ. ಕ್ಷೇತ್ರವೊಂದಕ್ಕೆ ತಲಾ 25 ತೆರೆದ ಬಾವಿ ಅಭಿವೃದ್ಧಿಗೂ ಹಿನ್ನಡೆಯಾಗಿದೆ ಎಂದು ವಿಷಾದಿಸಿದರು.

ಹೊಸೂರು - ಅಮ್ಮತ್ತಿ ಲೋಕೋಪಯೋಗಿ ರಸ್ತೆ ತೀವ್ರ ಹದಗೆಟ್ಟಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದು, ಕಳೆದ ಮೂರು ವರ್ಷದಲ್ಲಿ ಅನುದಾನ ಬಿಡುಗಡೆಯಾಗಿದ್ದರೂ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಹೊಂಡ ಬಿದ್ದಿದೆ ಎಂದು ಆರೋಪ ವ್ಯಕ್ತವಾಯಿತು.

ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಅವರು ಮಾತನಾಡಿ, ಕೇವಲ ರೂ. 6.75 ಲಕ್ಷ ಅನುದಾನ ಲಭಿಸಿದ್ದು, ಶಾಲೆಯಲ್ಲಿನ ಕುಡಿಯುವ ನೀರಿಗೆ ಮಾತ್ರ ವಿನಿಯೋಗಿಸು ವಂತಾಗಿದೆ. ಕಳತ್ಮಾಡು, ಹೊಸಕೋಟೆ ಶಾಲೆ ಕುಡಿಯುವ ನೀರು ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಇದೇ ಸಂದರ್ಭ ವೀರಾಜಪೇಟೆಯಲ್ಲಿ ಆರಂಭ ಗೊಂಡಿರುವ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಸದುಪಯೋಗವನ್ನು ನಿರುದ್ಯೋಗಿ ಯುವಕ - ಯುವತಿ ಯರು ಹೊಂದಲು ಗೋಪಿ ಚಿಣ್ಣಪ್ಪ ಮನವಿ ಮಾಡಿದರು.

ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಗೌಡ ಅಗತ್ಯ ಮಾಹಿತಿ ನೀಡಿದರು. ಮಾಜಿ ಜಿ.ಪಂ. ಸದಸ್ಯ ಕೊಲ್ಲೀರ ಧರ್ಮಜ, ಮೊಳ್ಳೇರ ಸುಭಾಶ್ ಮುಂತಾದವರು ಸಮಸ್ಯೆ ಕುರಿತಂತೆ ಮಾತನಾಡಿದರು. ಉಪಾಧ್ಯಕ್ಷೆ ವಿಶಾಲಾಕ್ಷಿ ಮತ್ತು ಸದಸ್ಯರು ಹಾಜರಿದ್ದರು.

- ವರದಿ : ಟಿ.ಎಲ್. ಶ್ರೀನಿವಾಸ್