ಮಡಿಕೇರಿ, ಜೂ.28 : ಕೊಡಗು ಜಿಲ್ಲೆಯಲ್ಲಿ ತಾ. 29 ರಿಂದ ಜುಲೈ 10ರ ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜಿಲ್ಲೆಯ 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಸಂಬಂಧ ಭದ್ರತೆಯ ದೃಷ್ಟಿಯಿಂದ ಮತ್ತು ಅವ್ಯವಹಾರಗಳಿಗೆ ಅವಕಾಶವಿರದಂತೆ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ದಂಡ ಪ್ರಕ್ರಿಯ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ತಾ. 29 ರಿಂದ ಜುಲೈ, 10 ರವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ, ಸರಕಾರಿ ಪದವಿ ಪೂರ್ವ ಕಾಲೇಜು ವೀರಾಜಪೇಟೆ, ಸರಕಾರಿ ಪದವಿ ಪೂರ್ವ ಕಾಲೇಜು ಸೋಮವಾರಪೇಟೆ ಈ ಪರೀಕ್ಷಾ ಕೇಂದ್ರಗಳು ಒಳಗೊಂಡಂತೆ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಷೇಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ ಪಿ.ಐ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

ನಿಷೇಧಿತ ವಲಯದಲ್ಲಿ ಯಾವದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವದು, ರವಾನಿಸುವದು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೇದಿಸಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಸ್ಮಾರ್ಟ್ ವಾಚ್ ಮತ್ತು ಇನ್ನಿತರೆ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಒಯ್ಯುವದು ಮತ್ತು ಬಳಸುವದನ್ನು ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಯಾವದೇ ರೀತಿಯ ಸ್ಪೋಟಕ ವಸ್ತುಗಳನ್ನು ಕೊಂಡು ಹೋಗುವದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವದನ್ನು ನಿಷೇಧಿಸಲಾಗಿದೆ,

ಈ ಆದೇಶವು ಪರೀಕ್ಷಾ ದಿನಗಳಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ತಿಳಿಸಿದ್ದಾರೆ.