ಮೂರ್ನಾಡು, ಜೂ. 27: ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಪ್ರಶ್ನೆಗಳನ್ನು ಕೇಳುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಮನುಷ್ಯ ಸಾಯುವವರೆಗೂ ಕೂಡ ಈ ಹವ್ಯಾಸ ನಿರಂತರವಾಗಿರಬೇಕು ಎಂದು ಪಕ್ಷಿ ತಜ್ಞ ಡಾ. ನರಸಿಂಹನ್ ಹೇಳಿದರು.

ಮೂರ್ನಾಡು ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ದಿನಾಚರಣೆ ಮತ್ತು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀಕ್ಷಣೆ ಮಾಡುವದಕ್ಕಿಂತ ಹೆಚ್ಚು ಪರಿಣಾಮಕಾರಿಯಾದುದು ಮನಸಿಟ್ಟು ವೀಕ್ಷಣೆ ಮಾಡುವದು. ನಮ್ಮ ಸುತ್ತಮುತ್ತ ಪರಿಸರವನ್ನು ದೈನಂದಿನ ಚಟುವಟಿಕೆಗಳೊಂದಿಗೆ ವೀಕ್ಷಣೆ ಮತ್ತು ಕೇಳುವದರೊಂದಿಗೆ ನಮ್ಮ ದೇಹದಲ್ಲಿ ಸುಪ್ತವಾಗಿರುವ ಇಂದ್ರಿಯಗಳನ್ನು ಬೆಳೆಸಿಕೊಳ್ಳಬಹುದು. ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ಶ್ರೀರಕ್ಷ (ಪ್ರಥಮ), ತಾಫೀನ (ದ್ವಿತೀಯ), ಫಾತಿಮ (ತೃತೀಯ), ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಫಾತಿಮ (ಪ್ರಥಮ), ಶರ್ಮಿಳ (ದ್ವಿತೀಯ), ಪಿ.ಆರ್. ಲತ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮಾತನಾಡಿ ಎಲ್ಲರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾಸಂಸ್ಥೆ ವತಿಯಿಂದ ಕೊಡಗಿನ ಎಲ್ಲಾ ಕಡೆಗಳ ಮುಖ್ಯ ರಸ್ತೆಗಳ ಬದಿಯಲ್ಲಿ ಶ್ರಮದಾನ ಮೂಲಕ ಸ್ವಚ್ಚಗೊಳಿಸುತ್ತಿದ್ದರೂ, ಪ್ರವಾಸಿಗರು ಜಿಲ್ಲೆಯನ್ನು ಮಲಿನಗೊಳಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಈರಮಂಡ ಸೋಮಣ್ಣ, ಸುಶೀಲ ಸುಬ್ರಮಣಿ, ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಯು.ಸಿ. ಮಾಲತಿ, ಎನ್.ಎಸ್.ಎಸ್ ಘಟಕದ ನಾಯಕಿಯರಾದ ಲಕ್ಷ್ಮಿ ಮತ್ತು ಕೃಪ ಉಪಸ್ಥಿತರಿದ್ದರು.

ಕಾಲೇಜಿನ ಪೊನ್ನಮ್ಮ ಪ್ರಾರ್ಥಿಸಿ, ಯು.ಸಿ. ಮಾಲತಿ ಸ್ವಾಗತಿಸಿ, ಕುಮುದ ಕಾರ್ಯಕ್ರಮ ನಿರೂಪಿಸಿ, ಪುನೀತ ವಂದಿಸಿದರು.