ಸೋಮವಾರಪೇಟೆ, ಜೂ. 28: ಇಲ್ಲಿಗೆ ಸಮೀಪದ ಗೌಡಳ್ಳಿ ಪ್ರೌಢಶಾಲೆಯಲ್ಲಿ 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಪ್ರೋತ್ಸಾಹಿಸಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್ ಬಹುಮಾನ ವಿತರಿಸಿದರು. ನಂತರ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು. ಎಸ್‍ಎಸ್‍ಎಲ್‍ಸಿಯಲ್ಲಿ 625ಕ್ಕೆ 514 ಅಂಕಗಳಿಸಿದ ಜಿ.ಯು. ಚಿಂತನ್, 493 ಅಂಕಗಳಿಸಿದ ಕೆ.ಇ. ಸಫಾನ ಮತ್ತು 484 ಅಂಕಗಳಿಸಿದ ಕೆ.ಡಿ. ನಿರಂಜನ್‍ರವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಇದೇ ಸಂದರ್ಭ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಕ ಮಹೇಶ್ ನೀಡಲಾದ ಬಹುಮಾನವನ್ನು ವಿತರಿಸಲಾಯಿತು. 125ಕ್ಕೆ 123 ಅಂಕಗಳಿಸಿದ ಚಿಂತನ್ ಹಾಗೂ 121 ಅಂಕಗಳಿಸಿದ ಸಫಾನ ಬಹುಮಾನ ಪಡೆದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಎನ್.ಕೆ. ನಾಗೇಂದ್ರ, ಆಡಳಿತ ಮಂಡಳಿಯ ಕಾರ್ಯದರ್ಶಿ ವಿ.ಎನ್. ನಾಗರಾಜು, ನಿರ್ದೇಶಕರಾದ ಪುಟ್ಟಸ್ವಾಮಿ, ದಾನಿಗಳಾದ ವಿಕ್ರಂ ಚೆನ್ನಪ್ಪ, ಸಹ ಶಿಕ್ಷಕ ಎಸ್.ಎನ್. ಪೂವಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಜಿ.ಈ. ಪ್ರವೀಣ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.