ಹೆಬ್ಬಾಲೆ, ಜೂ. 28: ಬಾಲ ಕಾರ್ಮಿಕ ಮತ್ತು ದೌರ್ಜನ್ಯಕ್ಕೆ ಹಾಗೂ ಹಿಂಸೆಗೆ ಒಳಗಾದ ಮಗುವನ್ನು ಕಂಡಾಗ ಸಾರ್ವಜನಿಕರು ಕೂಡಲೇ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡುವ ಮೂಲಕ ರಕ್ಷಣೆಗೆ ಒತ್ತು ನೀಡಬೇಕು ಎಂದು ಚೈಲ್ಡ್ ಲೈನ್ ಕೊಡಗು ಸಂಸ್ಥೆಯ ತಾಲೂಕು ಸಂಯೋಜಕಿ ಬಿ.ಕೆ. ಕುಸುಮಾ ಸಲಹೆ ನೀಡಿದರು.

ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೈಲ್ಡ್ ಲೈನ್ ಕೊಡಗು ಹಾಗೂ ಕೊಡಗು ಗ್ರಾಮೀಣಾವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ವಿಶೇಷ ಅರಿವು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಯೋಜನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಬೆಂಬಲಿತ ವ್ಯವಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಕ್ಕಳಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ, ಸದಸ್ಯರಾದ ಲಕ್ಷ್ಮಿ, ಮಹಾದೇವಮ್ಮ, ಗೌರಿ, ಚೈಲ್ಡ್ ಲೈನ್ ಸಂಸ್ಥೆ ಕಾರ್ಯಕರ್ತ ಯೋಗೇಶ್, ಶಾಲಾ ಮುಖ್ಯ ಶಿಕ್ಷಕಿ ಬಿ.ಆರ್. ತಾರಾ, ಶಿಕ್ಷಕರಾದ ಹೆಚ್.ಬಿ. ಗೌರಮ್ಮ, ಸಿ. ನಿಂಗೇಗೌಡ, ಹೆಚ್.ಎಸ್. ಸೌಮ್ಯಶಾರದ, ಎ. ಮೇರಿ ಮಾರ್ಗರೇಟ್ ಉಪಸ್ಥಿತರಿದ್ದರು. ಮಕ್ಕಳಿಗೆ ಉದ್ಯಮಿ ಹರಪಳ್ಳಿ ರವೀಂದ್ರ ಉಚಿತ ನೋಟ್ ಪುಸ್ತಕಗಳನ್ನು ನೀಡಿದರು.