ಸೋಮವಾರಪೇಟೆ, ಜೂ. 28: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯನ್ನು ಹೊರತುಪಡಿಸಿದಂತೆ ಸೋಮವಾರಪೇಟೆ ತಾಲೂಕಿನಾದ್ಯಂತ ಸಾಧಾರಣ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದರೂ ಮಧ್ಯಾಹ್ನದವರೆಗೆ ಸಾಧಾರಣ ಮಳೆ ಸುರಿದು ನಂತರ ತಣ್ಣಗಾಯಿತು.

ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಇರುವದಾಗಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಘೋಷಿಸಿದ್ದು, ಈ ವಿಷಯ ವಿದ್ಯಾರ್ಥಿಗಳ ಪೋಷಕರಿಗೆ ತಲಪುವಷ್ಟರಲ್ಲಿ 9 ಗಂಟೆ ಕಳೆದಿತ್ತು.

ಸಾಧಾರಣವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೆಳಿಗ್ಗೆ 7.30ಕ್ಕೆ ಮನೆಯಿಂದ ಹೊರಟು ಬಸ್‍ನಲ್ಲಿ ಪಟ್ಟಣಕ್ಕೆ ಆಗಮಿಸಿ ನಂತರ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಖಾಸಗಿ ಶಾಲೆಗಳ ವಾಹನಗಳೂ ಸಹ 7.30 ರಿಂದ 9 ಗಂಟೆಯವರೆಗೂ ಮಕ್ಕಳನ್ನು ಕರೆತರುವ ಕಾರ್ಯ ಮಾಡುತ್ತಿರುತ್ತವೆ. ಇಂದು ವಿದ್ಯಾರ್ಥಿಗಳು ಮನೆಯಿಂದ ಹೊರಟು ಪಟ್ಟಣಕ್ಕೆ ಆಗಮಿಸಿದ ನಂತರ ಶಾಲೆಗಳಿಗೆ ರಜೆ ಇರುವದು ತಿಳಿದುಬಂದ ಹಿನ್ನೆಲೆ ವಾಪಸ್ ತೆರಳಲು ಮಧ್ಯಾಹ್ನದವರೆಗೂ ಬಸ್ ನಿಲ್ದಾಣದಲ್ಲಿ ಕಾಯುವಂತಾಯಿತು.

ಹಲವಷ್ಟು ಗ್ರಾಮೀಣ ಪ್ರದೇಶಗಳಿಗೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್ ಸೌಕರ್ಯವಿದ್ದು, ನೂರಾರು ವಿದ್ಯಾರ್ಥಿಗಳು ಸಂಜೆಯವರೆಗೂ ಬಸ್‍ನಿಲ್ದಾಣ, ಪಟ್ಟಣದಲ್ಲಿ ಕಾಲ ಕಳೆದರು. ಕೆಲ ಖಾಸಗಿ ಶಾಲೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಮುಂದಿನ ದಿನಗಳಲ್ಲಾದರೂ ಮಳೆ ರಜೆಯನ್ನು ಹಿಂದಿನ ದಿನದ ಸಂಜೆ, ಅಥವಾ ಬೆಳಿಗ್ಗೆ 7 ಗಂಟೆಯ ಒಳಗೆ ಘೋಷಿಸಿದರೆ ಇಂತಹ ತಾಪತ್ರಯ ಎದುರಾಗುವದಿಲ್ಲ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕೆಂದು ಪೋಷಕರು ಅಭಿಪ್ರಾಯಿಸಿದ್ದಾರೆ.

ಶಾಂತಳ್ಳಿ ಹೋಬಳಿಯಾದ್ಯಂತ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಶಾಂತಳ್ಳಿ, ಬೆಟ್ಟದಳ್ಳಿ, ಪುಷ್ಪಗಿರಿ, ಹೆಗ್ಗಡಮನೆ, ಕೊತ್ನಳ್ಳಿ, ಕುಡಿಗಾಣ, ಕುಂದಳ್ಳಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಇದನ್ನು ಹೊರತುಪಡಿಸಿದಂತೆ ಸೋಮವಾರಪೇಟೆ ಪಟ್ಟಣ, ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಆಲೂರು ಸಿದ್ದಾಪುರ, ಬಾಣಾವರ, ಸಿದ್ದಲಿಂಗಪುರ, ಅಬ್ಬೂರುಕಟ್ಟೆ, ಗೋಣಿಮರೂರು ಭಾಗದಲ್ಲೂ ಉತ್ತಮ ಮಳೆಯಾಗಿದೆ.

ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೃಷಿಕ ವರ್ಗ ಚಟುವಟಿಕೆಯಲ್ಲಿದ್ದು, ಗದ್ದೆಯಲ್ಲಿ ಸಸಿಮಡಿ ತಯಾರಿ ಕಾರ್ಯ ಪ್ರಾರಂಭವಾಗಿದೆ. ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವದು, ಬೋರರ್ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡುವ ಕಾರ್ಯ ಪ್ರಗತಿಯಲ್ಲಿದೆ.

ಬೆಳಿಗ್ಗೆ ಬಾಣಾವರ ರಸ್ತೆಯ ಮಸಗೋಡು ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿ ಬಳಿ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿದ್ದು, ತಕ್ಷಣ ಇಲಾಖಾ ಸಿಬ್ಬಂದಿಗಳು ತೆರವುಗೊಳಿಸಿದರು. ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ 53.4 ಮಿ.ಮೀ, ಶಾಂತಳ್ಳಿಗೆ 80.2, ಕೊಡ್ಲಿಪೇಟೆ ಭಾಗಕ್ಕೆ 44.4, ಶನಿವಾರಸಂತೆಗೆ 39 ಮಿ.ಮೀ., ಕುಶಾಲನಗರಕ್ಕೆ 26, ಸುಂಟಿಕೊಪ್ಪಕ್ಕೆ 38.4ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.ಶ್ರೀಮಂಗಲ: ದ. ಕೊಡಗಿನ ಬಿರುನಾಣಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ, ಹುದಿಕೇರಿ, ವ್ಯಾಪ್ತಿಯಲ್ಲಿ ಜೂನ್ 2ನೇ ವಾರದಲ್ಲಿ ಅಬ್ಬರಿಸಿದ್ದ ಮುಂಗಾರು ಮಳೆ ತದ ನಂತರ ಬಿರುಸು ಕಡಿಮೆಗೊಂಡು ಇದೀಗ 2 ದಿನದಿಂದ ಮತ್ತೆ ತೀವ್ರಗೊಂಡಿದೆ.

ಬಿರುನಾಣಿ ವಿಭಾಗದಲ್ಲಿ 24 ಗಂಟೆಯಲ್ಲಿ 4.10 ಇಂಚಿಗೂ ಅಧಿಕ ಮಳೆಯಾಗಿದೆ. ಶ್ರೀಮಂಗಲ ವಿಭಾಗಕ್ಕೆ 2.44 ಇಂಚು ಮಳೆಯಾಗಿದೆ. ಬಿರುನಾಣಿ ವಿಭಾಗಕ್ಕೆ ಇದುವರೆಗೆ ಈ ವರ್ಷದಲ್ಲಿ 74 ಇಂಚು ಮಳೆ ಯಾಗಿದೆ. ಜೂನ್ ತಿಂಗಳಲ್ಲಿಯೇ 60 ಇಂಚು ಮಳೆಯಾಗಿದೆ. ಕಳೆದ ವರ್ಷ 2017ರಲ್ಲಿ ವಾರ್ಷಿಕ ಮಳೆ 171 ಇಂಚು ಆಗಿತ್ತು. ಇದೇ ಅವಧಿಗೆ 2017ರಲ್ಲಿ 54 ಇಂಚು ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 20 ಇಂಚು ಅಧಿಕ ಮಳೆಯಾಗಿದೆ.

ಶ್ರೀಮಂಗಲ ವಿಭಾಗದಲ್ಲಿ ಪ್ರಸಕ್ತವರ್ಷ ಇದುವರೆಗೆ 56.35 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 29.36 ಇಂಚು ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 26.99 ಇಂಚು ಅಧಿಕ ಮಳೆಯಾಗಿದೆ. 2017ರಲ್ಲಿ ವಾರ್ಷಿಕ ಮಳೆ 81.35 ಇಂಚು ಆಗಿತ್ತು.

ಕಳೆದ 48 ಗಂಟೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಈ ವ್ಯಾಪ್ತಿಯ ಲಕ್ಷ್ಮಣ ತೀರ್ಥ, ಕಕ್ಕಟ್ಟ್ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬಿಡುವಿಲ್ಲದೆ ಸುರಿಯುತ್ತಿರುವ ಹಾಗೂ ಜೂನ್ ತಿಂಗಳಲ್ಲಿ ದಾಖಲೆಯ ಮಳೆ ಬಿರುನಾಣಿ ಹಾಗೂ ಶ್ರೀಮಂಗಲ ವಿಭಾಗದಲ್ಲಿ ಆಗಿದ್ದು, ಜೂನ್ 8 ರಿಂದ ತಾ. 28 ರವರೆಗೆ 20ದಿನದ ಅವಧಿಯಲ್ಲಿ ಬಿರುನಾಣಿ ವಿಭಾಗಕ್ಕೆ 60 ಇಂಚು ಅಂದರೆ ಸರಾಸರಿ ಪ್ರತಿದಿನ 3 ಇಂಚು ಹಾಗಯೇ ಶ್ರೀಮಂಗಲ ವಿಭಾಗಕ್ಕೆ 45 ಇಂಚು, ಅಂದರೆ ಸರಾಸರಿ ಪ್ರತಿದಿನ 2.25 ಇಂಚು ಮಳೆಯಾಗಿದ್ದು, ಈ ವ್ಯಾಪ್ತಿಯ ಘಟ್ಟ ಪ್ರದೇಶದಲ್ಲಿ ಇದಕ್ಕಿಂತ ಅಧಿಕ ಮಳೆಯಾಗಿದೆ.

ಜೂನ್ 2ನೇ ವಾರದಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಫಿ, ಕರಿಮೆಣಸು, ಅಡಿಕೆ, ಪಸಲುಗಳು ಉದುರಿದ್ದು, ನಷ್ಟವಾಗಿದೆ. ಇದಲ್ಲದೆ, ಈ ವ್ಯಾಪ್ತಿಯಲ್ಲಿ ತೀವ್ರ ಮಳೆಯಿಂದ ಭತ್ತದ ಗದ್ದೆಗಳ ಸಮೀಪದ ತೋಡು ಗಳು ಒಡೆದು ಹಾನಿಯಾಗಿದೆ. ತೋಟಗಳಿಗೆ ರಸಗೊಬ್ಬರ ಪೂರೈಸಲು ಹಾಗೂ ಕರಿಮೆಣಸು ಅಡಿಕೆ ಇತ್ಯಾದಿಗಳಲ್ಲಿ ಕೊಳೆ ರೋಗ ತಡೆಗಟ್ಟಲು ಸಹ ಸಿಂಪಡಣೆ ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಈ ವ್ಯಾಪ್ತಿಯಲ್ಲಿ ಕಾಫಿ ಹಾಗೂ ತೋಟಗಾರಿಕಾ ಬೆಳೆ ಹಾಗೂ ಭತ್ತದ ಗದ್ದೆಗಳಿಗೆ ಮಳೆಯಿಂದ ನಷ್ಟವಾಗಿದೆ. ಅಲ್ಲಲ್ಲಿ ರಸ್ತೆ, ಮನೆಯ ಮತ್ತು ಕೃಷಿ ತೋಟಗಾರಿಕಾ ಭೂಮಿಗಳಲ್ಲಿ ಭೂ ಕುಸಿತದಿಂದ ಹಾನಿಯಾಗಿದೆ. ಅಲ್ಲದೆ, ಗ್ರಾಮೀಣ ರಸ್ತೆಗಳಿಗೆ ತೀವ್ರ ಹಾನಿಯಾಗಿದ್ದು, ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಲು ತುರ್ತು ಕ್ರಮಕೈಗೊಳ್ಳುವಂತೆ ಬಿರುನಾಣಿ ಗ್ರಾ.ಪಂ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.

ತುಂಬುತ್ತಿರುವ ಹಾರಂಗಿ ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಹೆಚ್ಚು ನೀರು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮದಿಂದ ಇದೀಗ ಹಾರಂಗಿ ಅಣೆಕಟ್ಟೆಯು ಈಗಾಗಲೇ ಮುಕ್ಕಾಲು ಭಾಗದಷ್ಟು ತುಂಬಿದ್ದು, ಅಣೆಕಟ್ಟೆ ಭರ್ತಿಯಾಗಲು ಕೇವಲ 17 ಅಡಿಯಷ್ಟು ಬಾಕಿ ಇದೆ. ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರೆದಲ್ಲಿ ಒಂದು ವಾರದಲ್ಲೇ ಅಣೆಕಟ್ಟೆ ಭರ್ತಿಯಾಗುವದು ಖಚಿತವಾಗಿದೆ.

ಅಣೆಕಟ್ಟೆಯಲ್ಲಿ ನೀರಿನ ಮಟ್ಟ 2842.60 ಅಡಿ ಇದ್ದು, ತಳಮಟ್ಟದಿಂದಿರುವ ನೀರಿನ ಸಂಗ್ರಹ ಮಟ್ಟ 3.694 ಟಿಎಂಸಿ, ಈಗಿರುವ ನೀರಿನ ಮಟ್ಟ 4.444 ಟಿಎಂಸಿ, ಒಳಹರಿವು 3292 ಕ್ಯೂಸೆಕ್ಸ್ ಇದ್ದು, ಮಳೆಯ ಪ್ರಮಾಣ ಇಂದು 22.88 ಮಿಮಿ ಇರುವದರಿಂದ ಕಳೆದ ವರ್ಷಕ್ಕಿಂತ ನೀರು ಪ್ರಮಾಣ ಹೆಚ್ಚಿದೆ ಎಂದು ಸಹಾಯಕ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.

ರಸ್ತೆಗೆ ಬಿದ್ದ ಮರ

ಚೆಟ್ಟಳ್ಳಿ: ರಾತ್ರಿ ಹಾಗೂ ಬೆಳಿಗ್ಗೆ ಮಳೆಯಾದ ಪರಿಣಾಮ ಚೆಟ್ಟಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಗೇಟಿನ ಸಮೀಪದ ಬ್ರಹತ್ ಮರವೊಂದು ಮುರಿದು ಮುಖ್ಯ ರಸ್ತೆಗೆ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.

ಬೆಳಿಗ್ಗೆ 10 ಗಂಟೆಗೆ ಮರ ಮುಖ್ಯ ರಸ್ತೆಗೆ ಅಡ್ಡಲಾಗಿ ಬಿದ್ದಿತು. ಮಕ್ಕಳಿಗೆ ರಜೆಘೋಷಣೆ ಮಾಡಿದ್ದ ಪರಿಣಾಮ ಮಕ್ಕಳು ಶಾಲೆಗೆ ತೆರಳಿ ಹಿಂತಿರುಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.

ಅರ್ಧಗಂಟೆ ವಾಹನಗಳು ಚಲಿಸಲಾಗಲಿಲ್ಲ. ಸ್ಥಳಿಯರು,ಚೆಟ್ಟಳ್ಳಿ ಉಪ ಪೋಲಿಸ್ ಠಾಣೆಯ ಸಿಬ್ಬಂದಿಗಳು ಹಾಗೂ ಚೆಸ್ಕಾಂ ಸಿಬ್ಬಂದಿಗಳು ಮರವನ್ನು ಕತ್ತರಿಸಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ತುಂಬಿದ ಕಾವೇರಿ

ಕುಶಾಲನಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಒಂದೇ ದಿನದ ಅವಧಿಯಲ್ಲಿ ಸುಮಾರು 8 ರಿಂದ 10 ಅಡಿಗಳಷ್ಟು ನೀರಿನ ಹರಿವು ನದಿಯಲ್ಲಿ ಹೆಚ್ಚಳಗೊಂಡಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ಅಲ್ಪಸ್ವಲ್ಪ ಮಳೆ ಸುರಿದಿದೆ. ಶಾಲೆಗಳಿಗೆ ರಜಾ ಘೋಷಣೆ ಹಿನ್ನೆಲೆಯಲ್ಲಿ ಮಕ್ಕಳು ಮಾಹಿತಿಯ ಕೊರತೆಯಿಂದ ಶಾಲೆಗೆ ಬಂದು ಹಿಂತಿರುಗುತ್ತಿದ್ದ ದೃಶ್ಯ ಗೋಚರಿಸಿತು.

ಚಿಕ್ಲಿಹೊಳೆ ಜಲಾಶಯ ಭರ್ತಿ

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಒಳಪಡುವ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು ಹೆಚ್ಚುವರಿ ನೀರು ಜಲಾಶಯದ ಮೇಲಿಂದ ಹೊರಸುಸುವ ನೀರನ್ನು ನೋಡಲು ಮನಮೋಹಕವಾಗಿದೆ. ಈ ದೃಶ್ಯವನ್ನು ನೋಡಲು ಇದೀಗ ಪ್ರವಾಸಿಗರ ದಂಡು ಚಿಕ್ಲಿಹೊಳೆ ಜಲಾಶಯದತ್ತ ಪ್ರಯಾಣಿಸುತ್ತಿದೆ.

ಇತ್ತ ಜಲಾಶಯ ಭರ್ತಿಯಾದರೆ ಅತ್ತ ಈ ವ್ಯಾಪ್ತಿಯ ರೈತರು ನಾಲೆಗಳಿಗೆ ನೀರುಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಜಲಾಶಯ ಭರ್ತಿಯಾದರೂ ನಾಲೆಯೊಳಗಿರುವ ಕಾಡನ್ನು ಕಡಿಯದಿರುವದಕ್ಕೆ ಅಲ್ಲಿನ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷವು ಇದೇ ರೀತಿ ಮಾಡಿ ಬೇಸಿಗೆಯಲ್ಲಿ ಕಾಮಗಾರಿ ಮಾಡುವದು ಬಿಟ್ಟು ಗದ್ದೆಗಳಲ್ಲಿ ಭತ್ತದ ಸಸಿಮಡಿ ತಯಾರಿಸುವ ಸಂದÀರ್ಭ ಕಾಮಗಾರಿ ನಡೆಸುತ್ತಾರೆ. ಕೇವಲ ಪ್ರವಾಸಿಗರು ನೋಡಿ ಸಂತೋಷಪಡುವದರ ಜೊತೆಗೆ ರೈತರ ಬಾಳು ಬೆಳಗುವ ಕಾರ್ಯವನ್ನು ಇಲಾಖೆಗಳು ಮಾಡಲಿ. ಅಲ್ಲದೆ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಹೂಳೆತ್ತಲು ತಲಾ ಕೇವಲ 2 ಲಕ್ಷ ಹಣವನ್ನು ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ಆದರೆ ಈ ಹಣದಲ್ಲಿ ಯಾವರೀತಿ ಕಾಮಗಾರಿ ನಡೆಸುವದು ಎಂದು ಈ ವಿಭಾಗದ ಇಲಾಖಾಧಿಕಾರಿಗಳು ಪ್ರಶ್ನಿಸುತ್ತಾರೆ. ಆದುದರಿಂದ ಇನ್ನೂ ಹೆಚ್ಚಿನ ಹಣಬಿಡುಗಡೆ ಮಾಡುವಂತೆ ಈ ವಿಭಾಗದ ರೈತರು ಸರಕಾರವನ್ನು ಒತ್ತಾಯಿಸಿದ್ದಾರೆ.

ತುಂಬಿದ ಕಾವೇರಿ

ಕುಶಾಲನಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಒಂದೇ ದಿನದ ಅವಧಿಯಲ್ಲಿ ಸುಮಾರು 8 ರಿಂದ 10 ಅಡಿಗಳಷ್ಟು ನೀರಿನ ಹರಿವು ನದಿಯಲ್ಲಿ ಹೆಚ್ಚಳಗೊಂಡಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ಅಲ್ಪಸ್ವಲ್ಪ ಮಳೆ ಸುರಿದಿದೆ. ಶಾಲೆಗಳಿಗೆ ರಜಾ ಘೋಷಣೆ ಹಿನ್ನೆಲೆಯಲ್ಲಿ ಮಕ್ಕಳು ಮಾಹಿತಿಯ ಕೊರತೆಯಿಂದ ಶಾಲೆಗೆ ಬಂದು ಹಿಂತಿರುಗುತ್ತಿದ್ದ ದೃಶ್ಯ ಗೋಚರಿಸಿತು.

ನೀರಿನ ಮಟ್ಟ ಏರಿಕೆ

ಸಿದ್ದಾಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಸಿದ್ದಾಪುರದ ಕರಡಿಗೋಡು ಹಾಗೂ ಗುಹ್ಯ ಗ್ರಾಮದಲ್ಲಿ ನೀರಿನಮಟ್ಟ ಏರಿಕೆಯಾದ ಪರಿಣಾಮ ನದಿದಡದ ನಿವಾಸಿಗಳು ಆತಂಕಗೊಳ್ಳುವಂತಾಗಿದೆ.

ಇತ್ತೀಚೆಗಷ್ಟೇ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ನೀರಿನ ರಭಸಕ್ಕೆ ನದಿದಡ ಕುಸಿದಿದ್ದು, ಕರಡಿಗೋಡಿನಲ್ಲಿ ಹಲವಾರು ಮನೆಗಳು ಶಿಥಿಲಗೊಂಡು ಬಿರುಕುಬಿಟ್ಟಿದ್ದವು. ಇದೀಗ ಎರಡನೇ ಬಾರಿಗೆ ನದಿ ನೀರು ಏರಿಕೆಯಾಗಿದ್ದು, ನದಿ ದಡದ ಬಳಿಯಿದ್ದ ಹಾಗೂ ಮನೆಗಳಿಗೆ ಆಧಾರವಾಗಿದ್ದ ಬಿದಿರುಗಳು ನೀರಿನ ಸೆಳೆತಕ್ಕೆ ಸಿಲುಕಿ ಕುಸಿದು ನೀರಿನಲ್ಲಿ ಕೊಚ್ಚಿಹೋಗುವ ದೃಶ್ಯ ಕಂಡು ಬಂದಿದೆ. ಪ್ರವಾಹ ಪೀಡಿತ ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಅಗತ್ಯ ಕ್ರಮಕೈಗೊಂಡಿದ್ದಾರೆ.

ಶನಿವಾರಸಂತೆಗೆ ಸಾಧಾರಣ ಮಳೆ

ಶನಿವಾರಸಂತೆ: ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಜಿಟಿ ಜಿಟಿ ಮಳೆ ಸುರಿದಿದೆ.

ಗುರುವಾರ ಬೆಳಿಗ್ಗೆ ಬಿಡದೆ ಮಳೆ ಬರುತ್ತಿದ್ದು, ಶನಿವಾರಸಂತೆಯ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿ, ವಿದ್ಯಾರ್ಥಿಗಳು ಶಾಲೆಯಿಂದ ರಜೆ ಸಿಕ್ಕಿದ ಸಂತೋಷದಿಂದ ತೆರಳಿದರು. ಬೆಳಿಗ್ಗೆ 10 ಗಂಟೆಯ ನಂತರ ಮಳೆ ನಿಂತು ಹೋಯಿತು.

ಹೋಬಳಿಯ ಎಲ್ಲೆಡೆ ಹೊಳೆ, ಕೆರೆಗಳು ತುಂಬಿ ಹರಿಯುತ್ತಿವೆ. ಗದ್ದೆಗಳಲ್ಲಿ ರೈತರು ಉಳುಮೆ ಮಾಡುವ, ಭತ್ತದ ಅಗೆ ಹಾಕುವ ಕೆಲಸದಲ್ಲಿ ಉತ್ಸಾಹದಿಂದ ತೊಡಗಿದ್ದಾರೆ. ಅಪ್ಪಶೆಟ್ಟಳ್ಳಿ ವಿಭಾಗದ ಕಾಫಿ ತೋಟಗಳಲ್ಲಿ ಮಳೆಯ ಶೀತದಿಂದ ಕಾಫಿ ಕಾಯಿಗಳು ಉದುರುತ್ತಿದೆ. ಮೆಣಸಿನ ಬಳ್ಳಿಗಳಲ್ಲಿ ಚಿಗುರು ಬರುತ್ತಿದೆ. ಕಳೆದ ವರ್ಷ ಈ ವಿಭಾಗದಲ್ಲಿ ವರ್ಷ ಪ್ರಾರಂಭದಿಂದ ಜೂನ್ 28ರ ವರೆಗೆ 17.95 ಇಂಚು ಮಳೆಯಾಗಿದ್ದು, ಈ ವರ್ಷ ಇದೇ ಅವಧಿಗೆ ಒಟ್ಟು 21 ಇಂಚು ಮಳೆಯಾಗಿದೆ ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಎಂ. ಆನಂದ ಹೇಳುತ್ತಾರೆ.

ಸಂಗಮದಲ್ಲಿ ನೀರು ತಳ್ಳಾಟ...

ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಶಿರಂಗಾಲ, ಹೆಬ್ಬಾಲೆ, ತೊರೆನೂರು ವ್ಯಾಪ್ತಿಗಳಲ್ಲಿ ಭಾರೀ ಮಳೆ ಬೀಳುತ್ತಿದೆ. ಅಲ್ಲದೆ, ಕಳೆದ ಒಂದು ವಾರ ಮಳೆ ಕಡಿಮೆಯಾದ ಸಂದರ್ಭ ಈ ಭಾಗದ ರೈತರು ಮೆಕ್ಕೆಜೋಳ ಬಿತ್ತನೆ ಮಾಡಲು ಭೂಮಿಯನ್ನು ಸಿದ್ಧ ಮಾಡಿದ್ದರು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜೋಳ ಬಿತ್ತನೆ ಮಾಡಲು ಸಾದ್ಯವಾಗುತ್ತಿಲ್ಲ. ಕಳೆದ ಸಾಲಿನಲ್ಲಿ ಮಳೆಯಿಲ್ಲದೆ ನರಳಿದೆವು. ಈ ಸಾಲಿನಲ್ಲಿ ಅತಿ ಮಳೆ ಬಿದ್ದು, ಬಿತ್ತನೆ ಮಾಡಲು ಆಗುತ್ತಿಲ್ಲ. ಮುಂದಿನ ತಿಂಗಳಲ್ಲಿ ಬಿತ್ತನೆ ಮಾಡಿದರೆ ಹವಾಮಾನದ ವೈಪರೀತ್ಯದಿಂದ ಕಾಳು ಕಟ್ಟುವಿಕೆ ಕಡಿಮೆಯಾಗುತ್ತದೆ ಎಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.