ಸೋಮವಾರಪೇಟೆ, ಜೂ. 27: ವಿದ್ಯಾರ್ಥಿಗಳ ಕೊರತೆ, ಖಾಸಗಿ ಶಾಲೆಗಳ ಭರಾಟೆಯ ನಡುವೆ ಸರ್ಕಾರಿ ಶಾಲೆಗಳು ಪ್ರಸ್ತುತ ಮುಚ್ಚುವ ಸ್ಥಿತಿಯಲ್ಲಿದ್ದು, ಕೆಲವೇ ವರ್ಷಗಳಲ್ಲಿ ಈ ಶಾಲೆಗಳು ಮತ್ತೆ ಪುನರಾರಂಭಗೊಳ್ಳಲಿವೆ. ಈ ಬಗ್ಗೆ ಇಲಾಖೆ ಹಾಗೂ ಸಾರ್ವಜನಿಕರ ಪ್ರಯತ್ನ ಅಗತ್ಯ ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ಸಹ ಖಾಸಗಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚುತ್ತಿದೆ. ಶೈಕ್ಷಣಿಕ ಗುಣಮಟ್ಟ ಹಾಗೂ ಸಾಧನೆಯಲ್ಲಿ ಸರ್ಕಾರಿ ಶಾಲೆಗಳು ಎಲ್ಲೂ ಹಿಂದೆ ಬಿದ್ದಿಲ್ಲ. ಸರ್ಕಾರ ಈಗಾಗಲೇ ಹಲವು ಸವಲತ್ತುಗಳನ್ನು ಒದಗಿಸಿದ್ದು, ಶಾಲೆಗಳ ಸಬಲೀಕರಣಕ್ಕೆ ಪ್ರಯತ್ನಿಸುತ್ತಲೇ ಇದೆ ಎಂದರು.

ದೇಶದ ಆಡಳಿತ ಚುಕ್ಕಾಣಿ ಹಿಡಿದ ಅನೇಕ ಮಂದಿ ಸರ್ಕಾರಿ ಶಾಲೆಗಳಲ್ಲೇ ಓದಿದವರು ಎಂಬದನ್ನು ಮರೆಯಬಾರದು. ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡಬೇಕು ಎಂದು ಹರಪಳ್ಳಿ ರವೀಂದ್ರ ಕಿವಿಮಾತು ಹೇಳಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್, ಪ್ರಮುಖರಾದ ಪ್ರಸನ್ನ, ದರ್ಶನ್, ಶಿಕ್ಷಕ ಫಯಾಜ್ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

ನಂತರ ಬ್ಯಾಡಗೊಟ್ಟ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ರವೀಂದ್ರ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ತೇಜಾವತಿ, ರಿಜ್ವಾನ ಬಾನು, ನಸೀಮ ಉಪಸ್ಥಿತರಿದ್ದರು.