ಸೋಮವಾರಪೇಟೆ, ಜೂ. 28: ಸೋಮವಾರಪೇಟೆ ರೋಟರಿ ಸಂಸ್ಥೆಯಿಂದ ಪ್ರಸಕ್ತ ಸಾಲಿನಲ್ಲಿ ಹತ್ತು ಹಲವು ಜನೋಪಯೋಗಿ ಕಾರ್ಯ ಕ್ರಮಗಳಿಗೆ ಯೋಜನೆ ರೂಪಿಸಿರುವದು ಶ್ಲಾಘನೀಯ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಪ್ರೊ. ಎ.ಎಸ್. ಚಂದ್ರಶೇಖರ್ ಅಭಿಪ್ರಾಯಿಸಿದರು.

ಇಲ್ಲಿನ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ರೋಟರಿ ಕ್ಲಬ್ ಸೋಮವಾರಪೇಟೆ ಹಿಲ್ಸ್ ಆಯೋಜಿಸಿದ್ದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿಯಿಂದ ಸಾರ್ವಜನಿಕ ಸ್ಮಶಾನದಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಚಿತಾಗಾರ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸೇರಿದಂತೆ ಇತರ ಮಹತ್ತರವಾದ ಯೋಜನೆಗಳನ್ನು ಹಮ್ಮಿಕೊಂಡಿ ರುವದು ಉತ್ತಮ ಕಾರ್ಯ ಎಂದರು.

ಜನಪರ ಸೇವೆ ಎಂಬದು ಪವಿತ್ರ ಸೇವೆಯಾಗಿದ್ದು, ಆ ಮೂಲಕ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಸೇವೆ ಎಂಬದು ಮನುಷ್ಯನ ಅಂತರಾಳದಿಂದ ಬಂದಾಗ ಮಾತ್ರ ಆತನ ಜೀವನ ಸಾರ್ಥಕವಾಗುತ್ತದೆ. ವಿಶ್ವಮಟ್ಟದಲ್ಲಿ ಸೇವೆಯ ಮೂಲಕ ಗುರುತಿಸಿಕೊಂಡಿರುವ ರೋಟರಿ ಸಂಸ್ಥೆಗೆ ಸದಸ್ಯರಾದವರು ರೋಟರಿ ಸಂಸ್ಥೆಯ ನೀತಿ-ನಿಯಮಗಳನ್ನು ಅರಿತು, ಅದನ್ನು ಅನುಸರಿಸಬೇಕು. ಆಗ ಮಾತ್ರ ಶತಮಾನದ ಇತಿಹಾಸವಿರುವ ರೋಟರಿ ಸಂಸ್ಥೆಗೆ ಗೌರವ ನೀಡಿದಂತಾಗುತ್ತದೆ ಎಂದರು.

1979ರಲ್ಲಿ ಪೋಲಿಯೋ ಮುಕ್ತ ಮಾಡುವ ದೃಢ ಸಂಕಲ್ಪವನ್ನು ತೊಟ್ಟ ರೋಟರಿ ಸಂಸ್ಥೆ ಹಂತ ಹಂತವಾಗಿ ಯಶಸ್ಸು ಕಂಡಿದೆ. ಇದೀಗ ನೂತನವಾಗಿ ಅಧಿಕಾರ ಸ್ವೀಕರಿಸುತ್ತಿರುವ ಅಧ್ಯಕ್ಷ ಪಿ.ಕೆ. ರವಿ ಮತ್ತು ತಂಡದವರು ಆರಂಭದಲ್ಲಿಯೇ ಸುಮಾರು 20 ಮಂದಿ ಸದಸ್ಯರುಗಳನ್ನು ರೋಟರಿ ಸಂಸ್ಥೆಗೆ ಸೇರ್ಪಡೆ ಮಾಡುವ ಉದ್ದೇಶವನ್ನಿಟ್ಟು 12 ಮಂದಿಯನ್ನು ಸದಸ್ಯರನ್ನಾಗಿ ದಾಖಲಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮತ್ತೋರ್ವ ಅತಿಥಿ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ ಮಾತನಾಡಿ, ಇಲ್ಲಿನ ರೋಟರಿ ಸಂಸ್ಥೆಯು ಆಶಾ ಸ್ಫೂರ್ತಿ ಯೋಜನೆಯಡಿಯಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಸಹಾಯ, ಸಲಕರಣೆಗಳನ್ನು ನೀಡುವ ಮೂಲಕ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ರೋಟರಿ ಭವನ ನಿರ್ಮಾಣ ಮಾಡುತ್ತಿರುವದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ. ರವಿ, ಕಾರ್ಯದರ್ಶಿ ಪಿ. ನಾಗೇಶ್, ಉಪಾಧ್ಯಕ್ಷ ಡಿ.ಪಿ. ರಮೇಶ್, ವಿವಿಧ ಹಂತದ ಜವಾಬ್ದಾರಿ ಹೊತ್ತ ಬಿ.ಎಸ್. ಸುಂದರ್, ಎಚ್.ಸಿ. ನಾಗೇಶ್, ಬಿ.ಎಸ್. ಸದಾನಂದ್, ಎ.ಡಿ. ಶುಭಾಕರ್, ಎಂ.ಡಿ. ಲಿಖಿತ್, ಬಿ.ಎಂ. ದಿನೇಶ್, ಕೆ. ಶಿವಕುಮಾರ್, ಪಿ.ಎಸ್. ಮೋಹನ್‍ರಾಮ್, ಡಾ. ಓ.ವಿ. ಕೃಷ್ಣಾನಂದ್, ಎ.ಎಸ್. ಮಲ್ಲೇಶ್, ಎಂ.ಎಂ. ಪ್ರಕಾಶ್‍ಕುಮಾರ್ ಹಾಗೂ ಎ.ಪಿ. ವೀರರಾಜು ಅವರುಗಳು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಡಾ. ರಾಕೇಶ್ ಪಟೇಲ್ ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಸಹಾಯಕ ರಾಜ್ಯಪಾಲ ಮಹೇಶ್ ನಲ್ವಡೆ, ವಲಯ ಸೇನಾನಿ ಭರತ್ ಭೀಮಯ್ಯ ಉಪಸ್ಥಿತರಿದ್ದರು. ಸಮಾರಂಭದಲ್ಲಿ ರೋಟರಿಯ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.