ಮಡಿಕೇರಿ, ಜೂ. 28: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ದೀರ್ಘಕಾಲಿನ ಮತ್ತು ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಕಾಯ್ದೆ 1951ರ ಅಡಿಯಲ್ಲಿ ಸಣ್ಣ ಪ್ರಮಾಣದ ಉದ್ದಿಮೆಗಳ ಅಭಿವೃದ್ಧಿಗಾಗಿ, ಸಮಾನಾಂತರವಾಗಿ ಸಾಧನೆ ಮಾಡಿದ ಸಂಸ್ಥೆಯಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ಇಲ್ಲಿಯವರೆವಿಗೂ ಸಂಸ್ಥೆಯು 1.72 ಲಕ್ಷ ಕ್ಕಿಂತಲೂ ಹೆಚ್ಚಿನ ಘಟಕಗಳಿಗೆ ಒಟ್ಟಾರೆಯಗಿ ರೂ.16 ಸಾವಿರ ಕೋಟಿ ಸಂಚಿತ ಮಂಜೂರಾತಿ ನೀಡಿದೆ. ಇದರಲ್ಲಿ ಶೇ.50 ರಷ್ಟು ಹಣಕಾಸಿನ ನೆರವನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೀಡಲಾಗಿದ್ದು, ಇದು ರಾಜ್ಯದ ಕೈಗಾರಿಕಾಭಿವೃದ್ಧಿಯಲ್ಲಿ ಸಂಸ್ಥೆಯು ವಹಿಸಿರುವ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಎಸ್‍ಟಿ ಹಾಗೂ ಅನಾಣ್ಯೀಕರಣಗಳ ಪರಿಣಾಮಗಳ ನಡುವೆಯೂ ಸಹ ಕಳೆದ ವರ್ಷದ ಅವಧಿಯಲ್ಲಿ ಕೆ.ಎಸ್.ಎಫ್.ಸಿ.ಯು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. 2017-18ರ ಹಣಕಾಸಿನ ವರ್ಷದಲ್ಲಿ ಸಂಸ್ಥೆಯು ರೂ.842.13 ಕೋಟಿಗಳ ಮಂಜೂರಾತಿ, ರೂ.561.21 ಕೋಟಿಗಳ ವಿತರಣೆ ಹಾಗೂ 787.90 ಕೋಟಿ ರೂಗಳ ವಸೂಲಾತಿಯು, ಸಾಧನೆ ಮಾಡಿದೆ. ಈ ವರ್ಷದಲ್ಲಿ ರೂ.200.84 ಕೋಟಿಗಳ ಆರ್ಥಿಕ ನೆರವನ್ನು ಮಹಿಳಾ ಉದ್ದಿಮೆದಾರರಿಗೆ, ರೂ.269.17 ಕೋಟಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಹಾಗೂ ರೂ.77.95 ಕೋಟಿಗಳ ಆರ್ಥಿಕ ನೆರವನ್ನು ಮೊದಲ ಪೀಳಿಗೆ ಉದ್ದಿಮೆದಾರರಿಗೆ ನೀಡಿದೆ.

ಸುಧಾರಿತ ಸೇವೆಗಾಗಿ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಕಾರ್ಯನಿರ್ವಹಣೆ: ಸಂಸ್ಥೆಯು ತನ್ನ ಕಾರ್ಯಾಚರಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಸಾಂಸ್ಥಿಕ ಆಡಳಿತದಲ್ಲಿ ಹಲವು ಸುಧಾರಣಾ ಕ್ರಮ ಅಳವಡಿಸಿಕೊಂಡಿದ್ದು ಗ್ರಾಹಕ ಸೇವೆಯೇ ಕೇಂದ್ರ ಬಿಂದುವಾಗಿ ಕಾರ್ಯ ನಿರ್ವಹಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಗ್ರಾಹಕ ಸೇವೆ ಒದಗಿಸುವದು, ಸಾಲ ಪ್ರಸ್ತಾವನೆಗಳ ತ್ವರಿತ ಮಂಜೂರಾತಿಗಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಸಾಲ ನೀತಿಯನ್ನು ರೂಪಿಸಲಾಗಿದೆ. ಬಡ್ಡಿದರ ಕಡಿತಗೊಳಿಸುವದು, ಕರ್ನಾಟಕ ಸರ್ಕಾರದ ನೆರವಿನಿಂದ ಬಡ್ಡಿ ಸಹಾಯಧನದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವದು, ಅನುತ್ಪಾದಕ ಆಸ್ತಿಗಳನ್ನು ಬಗೆಹರಿಸಲು ಸ್ಪಷ್ಟವಾದ ‘ಒಟಿಎಸ್’ ನೀತಿ ಜಾರಿಗೊಳಿಸುವದು ಮತ್ತಿತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಭವಿಷ್ಯದ ಯೋಜನೆಗಳು: ಕಾರ್ಯ ನಿರ್ವಹಿಸುವತ್ತ ಹೆಚ್ಚಿನ ಒತ್ತು ನೀಡಲು ಸಂಸ್ಥೆಯು ಪ್ರಸ್ತುತ ವರ್ಷದಲ್ಲಿ ಎಲ್ಲಾ ವೃತ್ತ ಮಟ್ಟದಲ್ಲಿ ವ್ಯವಹಾರ ಅಭಿವೃದ್ಧಿ ಸಭೆಗಳನ್ನು ನಡೆಸಲು ಯೋಜಿಸಿದೆ. ಈ ನಿಟ್ಟಿನಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಕಾರ್ಯ ನಿರ್ವಾಹಕರು ಅಧಿಕಾರಿಗಳ ಜೊತೆಗೆ ಉದ್ಯಮಿಗಳ ಮನೆಬಾಗಿಲಲ್ಲೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ವಲಯದ ಒಟ್ಟಾರೆ ಕಾರ್ಯತತ್ಪರತೆಯು ಹೆಚ್ಚುತ್ತಿರುವದರಿಂದ ಸಂಸ್ಥೆಯು ಈ ಕ್ಷೇತ್ರಕ್ಕೆ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಅವಶ್ಯಕ ಹಣಕಾಸು ಸೇವೆಯನ್ನು ಒದಗಿಸಲು ವಿಶೇಷ ಒತ್ತು ನೀಡುತ್ತಿದೆ. ಅಲ್ಲದೆ, ಸಂಸ್ಥೆಯು 2018-19ರ ಹಣಕಾಸಿನ ವರ್ಷದಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸುವತ್ತ ಚಿಂತನೆ ನಡೆಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಉದ್ದಿಮೆದಾರರಿಗೆ ಬೆಂಬಲ ನೀಡುವ ಪರಿಸರವನ್ನು ನಿರ್ಮಾಣ ಮಾಡಲು ಅತಿ ಸಣ್ಣ, ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಸ್ಥಾಪಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಕರ್ನಾಟಕ ರಾಜ್ಯ ಪೂರಕ ಭದ್ರತಾ ಖಾತರಿ ನಿಧಿ ಯೋಜನೆಯನ್ನು ಪರಿಚಯಿಸಲಾಗಿದೆ. ಮೊದಲ ಪೀಳಿಗೆ ಉದ್ದಿಮೆದಾರರಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಯೋಜನಾ ವೆಚ್ಚದ ಮೇಲಿನ ಮಿತಿಯನ್ನು ರೂ.100 ಲಕ್ಷಗಳಿಂದ ರೂ.500 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ನೀಡಲಾಗುವ ಸಾಲದ ಮೊತ್ತವನ್ನು ರೂ.50 ಲಕ್ಷಗಳಿಂದ ರೂ.200 ಲಕ್ಷಗಳಿಗೆ ಹೆಚ್ಚಿಸಲಾಗಿದೆ.

ಪ್ರಸ್ತುತ, ಅಸ್ತಿತ್ವದಲ್ಲಿರುವ ಉದ್ದಿಮೆದಾರರಿಗೆ ವಿಶೇಷ ಬಡ್ಡಿ ಯೋಜನೆ: ಈ ಯೋಜನೆಯಡಿಯಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ವಾರ್ಷಿಕ ಶೇ.11.50ರ ನಿವ್ವಳ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಾಗುವದು.

ಜವಳಿ ಘಟಕಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್ ಯೋಜನೆ : ಹಣಕಾಸಿನ ಸೌಲಭ್ಯ (ಛಿosಣ oಜಿ ಜಿuಟಿಜiಟಿg): ಸ್ಥಿರಾಸ್ತಿಗಳ ವೆಚ್ಚದ ಮೇಲೆ ಸರ್ಕಾರದ ಅನುದಾನ ಶೇ.75ರಷ್ಟು, ಹಣಕಾಸು ಸಂಸ್ಥೆಗಳಿಂದ ಅವಧಿ ಸಾಲ ಶೇ.15ರಷ್ಟು ಮತ್ತು ಪ್ರವರ್ತಕರ ಪಾಲಿನ ಬಂಡವಾಳ ಶೇ.10ರಷ್ಟು.

ಕರ್ನಾಟಕ ಸರ್ಕಾರವು 2018-19ರ ಆಯವ್ಯಯದಲ್ಲಿ ಸಾಲ ಮೊತ್ತದ ಬಿಡುಗಡೆಯ ದಿನಾಂಕದಿಂದ 5 ವರ್ಷಗಳ ಅವಧಿಯಲ್ಲಿ ಅತಿ ಸಣ್ಣ ಮತ್ತು ಸಣ್ಣ ತಯಾರಿಕಾ ಘಟಕಗಳನ್ನು ಪ್ರಾರಂಭಿಸಲು ಕೆಎಸ್‍ಎಫ್‍ಸಿಯ ಮೂಲಕ ಹಣಕಾಸಿನ ನೆರವು ಪಡೆಯುವ ಎಲ್ಲಾ ಉದ್ಯಮಿಗಳಿಗೆ ಶೇ.10 ರಷ್ಟು ಬಡ್ಡಿ ಸಹಾಯಧನವನ್ನು ಘೋಷಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.