ಮಡಿಕೇರಿ, ಜೂ. 27: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಹಕ್ಕುಗಳು, ರಕ್ಷಣೆ, ಫೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿವಿಧ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಜೋಡುಪಾಲದಲ್ಲಿ ಬೆಟ್ಟತ್ತೂರು ಮತ್ತು ಜೋಡುಪಾಲದ ಹಾಡಿ ಸಮುದಾಯದವರು ಹಾಗೂ ಮಕ್ಕಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ತಾಲೂಕು ವೈದ್ಯಾಧಿಕಾರಿ ಪಾರ್ವತಿ, ಆರೋಗ್ಯ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಮಗ್ರ ಗಿರಿಜನ ಸಮನ್ವಯಾಧಿಕಾರಿ ಶಿವಕುಮಾರ್, ಪರಿಶಿಷ್ಟ ಪಂಗಡದವರಿಗೆ ಇರುವ ಆಹಾರ ಸಾಮಗ್ರಿಗಳ ಸೌಲಭ್ಯ, ಮಕ್ಕಳಿಗಾಗಿ ಇರುವ ಆಶ್ರಯ ಶಾಲೆಗಳು, ವಿದ್ಯಾರ್ಥಿ ವೇತನ ಹಾಗೂ ಗಿರಿಜನ ಸಮುದಾಯದ ಆಸಕ್ತಿಗೆ ಅನುಸಾರವಾಗಿ ವಿವಿಧ ಯೋಜನೆ ಗಳನ್ನು ಹಮ್ಮಿಕೊಳ್ಳಲಾಗುವದು ಎಂದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನಮಿತಾರಾವ್ ಮಕ್ಕಳ ಕಲ್ಯಾಣ ಸಮಿತಿ ರಚನೆಯಾಗಿರುವ ಉದ್ದೇಶ, ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಸುಮತಿ ವಿಶೇಷ ಮಕ್ಕಳ ಪೊಲೀಸ್ ಘಟಕ, ಫೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವದಕ್ಕೆ ಕಾರಣ, ಪರಿಣಾಮ ಮತ್ತು ಫೋಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಸಿ. ಆರ್.ಪಿ. ಸರಸ್ವತಿ ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಮಾಹಿತಿ ನೀಡಿದರು. ಸಮಾಲೋಚಕಿ ರಾಧಾ ಪ್ರಿಯ ಮಹಿಳೆಯರಿಗಾಗಿ ಇರುವ ವಿವಿಧ ಯೋಜನೆಗಳಾದ ಉದ್ಯೋಗಿನಿ, ಕಿರುಸಾಲ, ಮಹಿಳಾ ತರಬೇತಿ ಯೋಜನೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕೆ.ಹೆಚ್. ಪ್ರಭಾವತಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಲತೀಫ್ ಮತ್ತಿತರರು ಇದ್ದರು.