ಮಡಿಕೇರಿ, ಜೂ.28: ಕೇಂದ್ರ ಸರ್ಕಾರದ ಮುದ್ರಾ, ಸ್ಟಾರ್ಟ್‍ಆಪ್, ಸ್ಟ್ಯಾಂಡ್‍ಆಪ್ ಇಂಡಿಯಾ ಯೋಜನೆ ಗಳಡಿ ಸಾಲ ಸೌಲಭ್ಯ ಕಲ್ಪಿಸುವಂತೆ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ ಅವರು ಸೂಚನೆ ನೀಡಿದ್ದಾರೆ.

ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರುಗಳು ಮಾತನಾಡಿದರು. ಮುದ್ರಾ ಯೋಜನೆ ಯಡಿ 10 ಲಕ್ಷದವರೆಗೆ ಸಾಲ ನೀಡಬಹುದಾಗಿದೆ. ಆದರೆ ಸಮರ್ಪಕ ಪ್ರಗತಿ ಸಾಧಿಸದಿರುವದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಸಂಸದರು ಬ್ಯಾಂಕುಗಳು ಗ್ರಾಹಕರಿಗೆ ಸೇವೆ ಒದಗಿಸಬೇಕು. ಅದನ್ನು ಬಿಟ್ಟು ಸತಾಯಿಸುತ್ತಿರುವದು ಏಕೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವದರ ಜೊತೆಗೆ ‘ಮುದ್ರಾ ಮೇಳ’ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಬ್ಯಾಂಕು ಹಾಗೂ ಒಂದು ಎಟಿಎಂ ಸ್ಥಾಪಿಸಬೇಕು ಎಂಬ ಉದ್ದೇಶ ಹೊಂದಿದೆ. ಆದರೆ ಈ ಕೆಲಸದಲ್ಲಿ ಬ್ಯಾಂಕುಗಳು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಕುಟುಂಬವು ಆರ್ಥಿಕವಾಗಿ ಸದೃಢರಾಗಬೇಕು ಎಂಬದು ಪ್ರಧಾನಿ ಮಂತ್ರಿಯವರ ಆಶಯವಾಗಿದೆ. ಆ ನಿಟ್ಟಿನಲ್ಲಿ

(ಮೊದಲ ಪುಟದಿಂದ) ಗ್ರಾಹಕರಿಗೆ ಸ್ಪಂದಿಸುವಲ್ಲಿ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ನಿರ್ದೇಶನ ನೀಡಿದರು. ಕೃಷಿ, ಸಣ್ಣ ಮತ್ತು ಮಧ್ಯಮ ಉದ್ಯಮ ಸ್ಥಾಪನೆಗೆ ಹೆಚ್ಚಿನ ಸಹಕಾರ ನೀಡುವಂತೆ ಅವರು ಸೂಚನೆ ನೀಡಿದರು.

ಸರ್ಕಾರದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಬ್ಯಾಂಕುಗಳಿಗೆ ಕಳುಹಿಸಲಾಗುತ್ತದೆ. ಆದರೂ ಬ್ಯಾಂಕುಗಳು ಗುರಿ ಪೂರ್ಣಗೊಂಡಿದೆ ಎಂದು ಸಾಲ ನೀಡದೆ ವಾಪಸ್ಸು ಕಳುಹಿಸುತ್ತಾರೆ. ಇದು ಸರಿಯೇ ಎಂದು ಪ್ರಶ್ನಿಸಿದ ಸಂಸದರು ಗ್ರಾಹಕರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಸಲಹೆ ಮಾಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಸಾರ್ವಜನಿಕರಿಗೆ ಸ್ಟಾರ್ಟ್‍ಆಫ್ ಇಂಡಿಯಾ ಬಗ್ಗೆ ಮಾಹಿತಿ ನೀಡಬೇಕು. ವೀರಾಜಪೇಟೆ ತಾಲೂಕಿನ ಯಾವದೇ ಬ್ಯಾಂಕುಗಳು ಮುದ್ರಾ ಯೋಜನೆ ಪ್ರಗತಿ ಸಾಧಿಸಿಲ್ಲ ಎಂದು ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ತಿತಿಮತಿ ವಿಜಯ ಬ್ಯಾಂಕಿನಲ್ಲಿ ಗ್ರಾಹಕರೊಬ್ಬರಿಗೆ ಸಾಲ ನೀಡದೆ ಪ್ರಧಾನಮಂತ್ರಿಯವರೆಗೆ ದೂರು ಹೋಗಿದೆ. ಪ್ರಧಾನಮಂತ್ರಿ ಕಾರ್ಯಾಲಯದಿಂದ ಪ್ರಾದೇಶಿಕ ವ್ಯವಸ್ಥಾಪಕರಿಗೆ ಪತ್ರ ಬಂದಿದ್ದರೂ ಸಹ ಉತ್ತರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಶುಭಾಗ್ಯ ಯೋಜನೆಯಡಿ ಬ್ಯಾಂಕುಗಳು ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಪಶುಭಾಗ್ಯ ಯೋಜನಾ ಸಮಿತಿ ಅನುಷ್ಠಾನದಲ್ಲಿ ಇಂತಹ ಬ್ಯಾಂಕುಗಳಲ್ಲಿ ಸಹಾಯಧನ ಪಡೆಯಲು ನಿಗದಿಪಡಿಸಿದರೂ ಸತಾಯಿಸುತ್ತಿರುವದು ಕೇಳಿ ಬರುತ್ತಿದೆ. ಈ ರೀತಿ ಆದಲ್ಲಿ ಸರ್ಕಾರದ ಕಾರ್ಯಕ್ರಮ ಅನುಷ್ಠಾನಗೊಳಿಸು ವದಾದರೂ ಹೇಗೆ ಎಂದು ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು.

ಬ್ಯಾಂಕುಗಳ ಪ್ರಗತಿ ಪರಿಶೀಲನೆ ಸಂಬಂಧಿಸಿದಂತೆ ಒಂದು ವಾರ ಮುಂಚಿತವಾಗಿ ಮಾಹಿತಿಯನ್ನು ಕಳುಹಿಸಿಕೊಡುವಂತೆ ಸಲಹೆ ಮಾಡಿದರು. ಕಾಕೋಟುಪರಂಬು ಗ್ರಾಮದ ಗ್ರಾಹಕರೊಬ್ಬರ ಮಗ ವಿದೇಶದಲ್ಲಿದ್ದು, 10 ಸಾವಿರ ರೂ. ಕಳುಹಿಸಿದ್ದನ್ನು ಸಾಲಕ್ಕೆ ಜಮೆ ಮಾಡಿಕೊಂಡಿರುವದಾದರೂ ಏಕೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಬ್ಯಾಂಕುಗಳು ಗ್ರಾಹಕರಿಗೆ ಸೇವೆ ಕಲ್ಪಿಸುವದರ ಜೊತೆಗೆ ಕರೆ ಮಾಡಿದಾಗ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಆದರೆ ಕೆಲವು ಬ್ಯಾಂಕುಗಳ ವ್ಯವಸ್ಥಾಪಕರು ದೂರವಾಣಿ ಕರೆಯನ್ನೇ ಸ್ವೀಕರಿಸುವದಿಲ್ಲ, ಈ ರೀತಿ ಆದರೆ ರೈತರಿಗೆ, ಸಾರ್ವಜನಿಕರಿಗೆ ಸೇವೆ ನೀಡುವದಾದರೂ ಹೇಗೆ ಎಂದರು. ಕೆಲವು ಬ್ಯಾಂಕುಗಳು ಕಣ್ಣು ಒರೆಸುತ್ತವೆ ಹೊರತು ಸೇವೆಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ ಎಂದು ಹೇಳಿದರು.

ಸಾಲ ನೀಡುವಾಗ ಕೃಷಿ, ವ್ಯಾಪಾರ ಮಾಡುವವರಿಗೆ 50 ಸಾವಿರದಿಂದ 1 ಲಕ್ಷದವರೆಗೆ ಯಾದರೂ ಸಾಲ ನೀಡಲು ತೊಂದರೆಯಾದರೂ ಏನು. ಅವರವರ ಸಾಮಥ್ರ್ಯ ನೋಡಿಯಾದರೂ ಸಾಲ ನೀಡುವಂತೆ ಸಲಹೆ ಮಾಡಿದರು.ಬ್ಯಾಂಕುಗಳ ವ್ಯವಸ್ಥಾಪಕರು ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಕೆಲವು ಬ್ಯಾಂಕುಗಳು ಸಾಲ ಮರುಪಾವತಿ ಮಾಡಿದರೂ ಸಹ ಸಾಲವನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಯಾವದೇ ಬ್ಯಾಂಕುಗಳು, ಕಚೇರಿಗಳು ಇರುವದು ಸಾರ್ವಜನಿಕರ ಸೇವೆಗಾಗಿ, ಅದನ್ನು ಬಿಟ್ಟು ಗ್ರಾಹಕರಿಗೆ ಸ್ಪಂದಿಸದೆ ಸತಾಯಿಸುವದಾದರೂ ಏಕೆ ಎಂದು ಹೇಳಿದರು.

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಪ್ರತಿ ತಿಂಗಳು ಬ್ಯಾಂಕುಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ನಿಗದಿಪಡಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಾಗುವದು ಎಂದು ಹೇಳಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ ಸರ್ಕಾರದ ಕಾರ್ಯಕ್ರಮಗಳ ಸಂಬಂಧ ತಾಲೂಕು ಮಟ್ಟದಲ್ಲಿ ಮಾಹಿತಿ ಕಾರ್ಯಾಗಾರ ಏರ್ಪಡಿಸುವಂತೆ ಸಲಹೆ ಮಾಡಿದರು. ಪ್ರತಿ ಬ್ಯಾಂಕ್‍ನಲ್ಲಿಯೂ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಅವರು ಬ್ಯಾಂಕುಗಳ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಇನ್ನಷ್ಟು ಪ್ರಗತಿ ಸಾಧಿಸಲು ಪ್ರಯತ್ನಿಸಲಾಗುವದು. ಆ ನಿಟ್ಟಿನಲ್ಲಿ ಬ್ಯಾಂಕುಗಳು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ಮಾಡಿದರು. ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಲೀಡ್ ಬ್ಯಾಂಕ್ ಮಹಾ ಪ್ರಬಂಧಕ ಗಣಪತಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಗುಪ್ತ, ನಾನಾ ಬ್ಯಾಂಕುಗಳ ವ್ಯವಸ್ಥಾಪಕರು, ಅಧಿಕಾರಿಗಳು ಇದ್ದರು.