ಮಡಿಕೇರಿ, ಜೂ. 28: ಜೂನ್ ಎರಡನೇ ವಾರದಲ್ಲಿ ಭಾರೀ ಮಳೆಯ ಅಬ್ಬರದಿಂದ ತತ್ತರಿಸಿ ಇತ್ತೀಚಿನ ಕೆಲವು ದಿನಗಳಿಂದ ಮಳೆ ಇಳಿಮುಖ ಗೊಂಡು ಚೇತರಿಕೆ ಕಂಡಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೊಮ್ಮೆ ಮಳೆ ತನ್ನ ಬಿರುಸು ತೋರುತ್ತಿದೆ. ಜೂನ್ 27ರಿಂದ ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದು, ಗಾಳಿ-ಶೀತದ ಸನ್ನಿವೇಶದೊಂದಿಗೆ ವಾತಾವರಣ ಬದಲಾಗುತ್ತಿದೆ. ಅದರಲ್ಲೂ ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ವೀರಾಜಪೇಟೆ ತಾಲೂಕಿ ಗಿಂತ ಹೆಚ್ಚಾಗಿರುವ ಕುರಿತು ವರದಿ ಯಾಗಿದೆ. ಮಳೆಯ ತೀವ್ರತೆಯಿಂದಾಗಿ ತಾ. 28ರಂದು ಬೆಳಿಗ್ಗೆ ಮಡಿಕೇರಿ ತಾಲೂಕು ಹಾಗೂ ಸೋಮವಾರ ಪೇಟೆ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲ್ಪಡ ಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು.(ಮೊದಲ ಪುಟದಿಂದ) ಧಾರಾಕಾರ ಮಳೆಯಿಂದಾಗಿ ಈ ಎರಡು ತಾಲೂಕಿನ ಶಾಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ರಜೆ ಘೋಷಿಸಿದ್ದರು. ವೀರಾಜಪೇಟೆ ತಾಲೂಕಿನಲ್ಲಿ ಮಾತ್ರ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಶಾಲೆಗಳಿಗೆ ಎರಡು ತಾಲೂಕಿನಲ್ಲಿ ರಜೆ ನೀಡಲಾಗಿತ್ತಾದರೂ, ಎಸ್.ಎಸ್. ಎಲ್.ಸಿ. ಪೂರಕ ಪರೀಕ್ಷೆ ಎಂದಿನಂತೆ ನಡೆದಿದೆ.

ಪ್ರಸ್ತುತ ಆರಿದ್ರಾ ಮಳೆ ನಕ್ಷತ್ರ ಚಾಲ್ತಿಯಲ್ಲಿದ್ದು, ರಭಸಗೊಳ್ಳುತ್ತಿರುವ ಆರಿದ್ರಾ ಮಳೆಯಿಂದಾಗಿ ಸಹಜಸ್ಥಿತಿಯತ್ತ ಬರುತ್ತಿದ್ದ ಜಿಲ್ಲೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ನದಿ, ತೋಡುಗಳಲ್ಲಿ ನೀರಿನ ಹರಿವು ಹೆಚ್ಚಳಗೊಳ್ಳುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ಮಳೆಯಾಗುತ್ತಿರುವದರಿಂದ ಮತ್ತೊಮ್ಮೆ ಜಿಲ್ಲೆಯಲ್ಲಿ ಮುಂಗಾರಿನ ಆತಂಕ ಎದುರಾಗುತ್ತಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಮಡಿಕೇರಿ ತಾಲೂಕಿನ ಹಲವೆಡೆಗಳಲ್ಲಿ ನಿನ್ನೆಯಿಂದಲೇ ಧಾರಾಕಾರ ಮಳೆಯಾಗಿತ್ತು. ತಾ. 27ರ ರಾತ್ರಿಯಿಡೀ ಮಳೆ ಸುರಿದಿದ್ದು, ಬೆಳಿಗ್ಗೆಯೂ ಮುಂದುವರಿದಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಶಾಲೆಗಳಿಗೆ ರಜೆ ನೀಡುವಂತಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಈ ಎರಡು ತಾಲೂಕುಗಳಿಗೆ ಹೋಲಿಸಿದಲ್ಲಿ ಈ ಹಿಂದೆ ಮಳೆಯ ಅಬ್ಬರಕ್ಕೆ ನಲುಗಿದ್ದ ವೀರಾಜಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಇದ್ದುದು ದಕ್ಷಿಣ ಕೊಡಗಿನ ಜನತೆಯಲ್ಲಿ ಸ್ವಲ್ಪ ನಿರಾಳತೆ ಮೂಡಿಸಿತ್ತು.

ಮಳೆಗಾಲದಲ್ಲಿ ಸಹಜವಾಗಿ ಪ್ರವಾಹ ಪರಿಸ್ಥಿತಿ ಎದುರಿಸುವ ಭಾಗಮಂಡಲ ವಿಭಾಗದಲ್ಲಿ ಇಂದು ಅಪರಾಹ್ನ ತನಕ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಳವಾಗಿತ್ತು. ಭಾಗಮಂಡಲ - ನಾಪೋಕ್ಲು ಮಾರ್ಗದಲ್ಲಿ ಸುಮಾರು ಎರಡು ಅಡಿಯಷ್ಟು ನೀರು ನಿಂತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದರು. ಇಲ್ಲಿ ರಸ್ತೆ ದಾಟಲು ರ್ಯಾಫ್ಟಿಂಗ್ ಬೋಟನ್ನು ಬಳಸಲಾಗಿತ್ತು. ಮಡಿಕೇರಿ ರಸ್ತೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ನಿಂತಿತ್ತಾದರೂ, ವಾಹನ ಸಂಚಾರಕ್ಕೆ ಅಡಚಣೆಯಾಗಿರಲಿಲ್ಲ. ನಾಪೋಕ್ಲು ಮಾರ್ಗದ ಜನತೆ ಮಾತ್ರ ಪೂರ್ವ ನಿಯೋಜಿತ ಕೈಂಕರ್ಯಕ್ಕೆ ಚೇರಂಗಾಲ ರಸ್ತೆಯನ್ನು ಅವಲಂಭಿಸಬೇಕಾಯಿತು.

ಭಾಗಮಂಡಲಕ್ಕೆ ಅಧಿಕ ಮಳೆ : ಕಳೆದ 24 ಗಂಟೆಗಳಲ್ಲಿ ಭಾಗ ಮಂಡಲಕ್ಕೆ 6.4 ಇಂಚು ಮಳೆ ಯಾಗಿದ್ದ ಕುರಿತು ವರದಿಯಾಗಿದೆ. ಉಳಿದಂತೆ ನಾಪೋಕ್ಲು ಹೋಬಳಿ ಯಲ್ಲಿ 4.32 ಇಂಚು, ಸಂಪಾಜೆ 3.64 ಇಂಚು, ಮಡಿಕೇರಿ ಹೋಬಳಿಯಲ್ಲಿ 3.44 ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿಯಲ್ಲಿ 3.32 ಇಂಚು, ಸೋಮವಾರಪೇಟೆ 2.13 ಇಂಚು, ಕೊಡ್ಲಿಪೇಟೆ 1.77 ಇಂಚು, ಶನಿವಾರಸಂತೆ 1.56 ಇಂದು, ಸುಂಟಿಕೊಪ್ಪ 1.53 ಹಾಗೂ ಕುಶಾಲನಗರ ಹೋಬಳಿಯಲ್ಲಿ 1.04 ಇಂಚು ಮಳೆ ದಾಖಲಾಗಿದೆ.

ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹೋಬಳಿಯಲ್ಲಿ 2.64 ಇಂಚು, ಹುದಿಕೇರಿ 2.72, ಶ್ರೀಮಂಗಲ 2.42, ಪೊನ್ನಂಪೇಟೆ 1.54, ಅಮ್ಮತ್ತಿ 1.44 ಹಾಗೂ ಬಾಳಲೆ ಹೋಬಳಿಯಲ್ಲಿ 0.88 ಇಂಚು ಮಳೆ ಕಳೆದ 24 ಗಂಟೆಯಲ್ಲಿ ದಾಖಲಾಗಿದ್ದ ಕುರಿತು ಜಿಲ್ಲಾಡಳಿತದ ವರದಿಯಿಂದ ತಿಳಿದುಬಂದಿದೆ.

ತಾ. 28ರಂದು ಹಗಲು ಒಮ್ಮೊಮ್ಮೆ ಜೋರು ಮಳೆಯಾದರೆ, ಅದರ ಬೆನ್ನಲ್ಲೇ ಮಳೆ ಮತ್ತೆ ವಿರಾಮ ನೀಡುತ್ತಿದ್ದ ಸನ್ನಿವೇಶ ಕಂಡು ಬರುತ್ತಿತ್ತು.