ಮಡಿಕೇರಿ, ಜೂ. 28: ಕಾಫಿ ಮೇಲಿನ ಸಾಲ ಮನ್ನಾ ಮಾಡಲೇ ಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಎಂ. ಕಾವೇರಪ್ಪ ಆಗ್ರಹಿಸಿದ್ದಾರೆ.

ನಿನ್ನೆ ದಿನ ಟಿ.ವಿ. ವಾಹಿನಿ ಯೊಂದರಲ್ಲಿ ಕಾಫಿ ಮತ್ತು ಚಹಾಗಳು ವಾಣಿಜ್ಯ ಬೆಳೆಗಳಾದುದರಿಂದ ಸಾಲ ಮನ್ನಾ ಮಾಡುವದಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿಕೆ ನೀಡಿರುವ ಬಗ್ಗೆ ಪ್ರಸಾರವಾಗಿದೆ. ಹಾಗಿದ್ದರೆ. ಕಬ್ಬು ಮತ್ತು ಅಡಿಕೆ ಬೆಳೆಗಳು ವಾಣಿಜ್ಯ ಬೆಳೆಗಳಾಗಿವೆ. ಈ ಬೆಳೆಗಳಿಗೂ ಮುಖ್ಯಮಂತ್ರಿ ಸಾಲ ಮನ್ನಾ ಮಾಡುವದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಯಾವದೇ ಬೆಳೆ ಮೇಲಿನ ಫಸಲು ಸಾಲವನ್ನು ಮನ್ನಾ ಮಾಡುವದು ಇಂದಿನ ಸ್ಥಿತಿಯಲ್ಲಿ ಅತ್ಯಗತ್ಯವಾಗಿದೆ. ಏಕೆಂದರೆ ಕೃಷಿಕರು, ಬೆಳೆಗಾರರು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಈ ಸಂದರ್ಭ ಕಾಫಿ ಬೆಳೆಗಾರರ ಮೇಲೆ ಮುಖ್ಯಮಂತ್ರಿ ಪಕ್ಷಪಾತ ಧೋರಣೆ ತಾಳದಿರಲಿ ಎಂದು ಅವರು ಸಲಹೆಯಿತ್ತಿದ್ದಾರೆ.

ಅಲ್ಲದೆ, ಈ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾವೇರಿಯ ವರದಾನವೆಂಬಂತೆ ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಮಳೆ ಸುರಿಯತ್ತಿದೆ. ಕಾವೇರಿ ಮಾತೆಯ ಕೃಪೆಯಿಂದ ವರ್ಷಾಧಾರೆಯಾಗುತ್ತಿದೆ. ಕೊಡಗಿನಲ್ಲಿ ಮಳೆ ಬಂದರೆ ಮಾತ್ರ ಕಾವೇರಿ ಜಲಾಶಯಗಳು ತುಂಬಿ ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದಲ್ಲಿ ನೀರಿನ ಸಮಸ್ಯೆ ನೀಗುತ್ತದೆ. ಕೊಡಗಿನ ಜನ ಮಾತ್ರ ಮಳೆಗಾಲದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಜನರ ಸಂಕಷ್ಟ ರಾಜ್ಯಕ್ಕೆ ಪ್ರಯೋಜನ ತರುತ್ತಿದೆ. ಈಗ ಕೊಡಗಿನಲ್ಲಿ ಕಾಫಿ ಬೆಳೆಯನ್ನೇ ನಂಬಿರುವ ಬೆಳೆಗಾರರಿಗೆ ಅನ್ಯಾಯವಾದರೆ, ಮುಖ್ಯಮಂತ್ರಿಯವರಿಗೆ ಕಾವೇರಿಯ ಅನುಗ್ರಹಕ್ಕೂ ತೊಡಕಾಗಬಹುದು ಎನ್ನುವ ಬಗ್ಗೆ ಗಮನವಿರಲಿ ಎಂದು ಅವರು ಸೂಚ್ಯವಾಗಿ ಸಲಹೆಯಿತ್ತಿದ್ದಾರೆ.