ವಿಮಾನ ಪತನ : ಐವರ ಸಾವು

ಮುಂಬೈ, ಜೂ. 28: ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಇಂಜಿನಿಯರ್ ಸುರ್ಬಿ ಮತ್ತು ಟೆಕ್ನಿಷನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಥಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ. ಕಿಂಗ್ ಏರ್ ಸಿ90 ಚಾರ್ಟರ್ಡ್ ವಿಮಾನ ಉತ್ತರಪ್ರದೇಶ ಸರ್ಕಾರದ್ದು ಎಂದು ಹೇಳಲಾಗಿತ್ತು. ಆದರೆ ವಿಮಾನ ಪತನ ನಂತರ ಇದೀಗ ಉತ್ತರಪ್ರದೇಶ ಸರ್ಕಾರ ಈ ವಿಮಾನವನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದೆ. ವಿಮಾನ ಪತನದಿಂದ ಕಟ್ಟಡಕ್ಕೂ ಬೆಂಕಿ ತಗುಲಿದ್ದು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ.

ಸೇನೆ ವಿರುದ್ಧ ಘರ್ಷಣೆಗೆ ಮಕ್ಕಳ ಬಳಕೆ

ನವದೆಹಲಿ, ಜೂ. 28: ಪಾಕಿಸ್ತಾನ ಮೂಲದ ನಿಷೇಧ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಘರ್ಷಣೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದೆ ಎಂದು ಯುಎನ್‍ಎಸ್ಜಿ ವರದಿಯಲ್ಲಿ ತಿಳಿಸಿದೆ. ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ವಿಶ್ವಸಂಸ್ಥೆ ಕಾರ್ಯದರ್ಶಿಯ ವಾರ್ಷಿಕ ವರದಿ ಪ್ರಕಾರ, 2017ರ ಜನವರಿ-ಡಿಸೆಂಬರ್ ಅವಧಿಯಲ್ಲಿ ಜಗತ್ತಿನಾದ್ಯಂತ 10 ಸಾವಿರ ಮಕ್ಕಳನ್ನು ಕೊಲ್ಲಲಾಯಿತು. ಕಳೆದ ವರ್ಷ 8 ಸಾವಿರಕ್ಕೂ ಹೆಚ್ಚು ಮಂದಿಯನ್ನು ಉಗ್ರ ಸಂಘಟನೆಗಳು ನೇಮಕ ಮಾಡಿಕೊಂಡಿದ್ದು ಅವರನ್ನು ವಿದ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದೆ. ಸಿರಿಯಾ, ಆಫ್ಘಾನಿಸ್ತಾನ ಮತ್ತು ಯಮೆನ್, ಪಿಲಿಫೈನ್ಸ್ ಮತ್ತು ನೈಜಿರಿಯಾ ಸೇರಿದಂತೆ ಜಗತ್ತಿನ 20 ರಾಷ್ಟ್ರಗಳಲ್ಲಿ ಉಗ್ರ ಸಂಘಟನೆಗಳು ಮಕ್ಕಳನ್ನು ಬಳಸಿಕೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸುವ ಹಾಗೂ ಭಾರತೀಯ ಸೇನೆ ವಿರುದ್ಧ ಹೋರಾಡಲು ಈ ಎರಡು ಉಗ್ರ ಸಂಘಟನೆಗಳು ಮಕ್ಕಳನ್ನು ನೇಮಕ ಮಾಡಿಕೊಂಡಿದೆ.

10 ಬಿಎಸ್‍ಎಫ್ ಯೋಧರು ನಾಪತ್ತೆ

ಮುಘಲ್‍ಸರಾಯ್, ಜೂ. 28: ವಿಶೇಷ ರೈಲಿನಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದ ಹತ್ತು ಬಿಎಸ್‍ಎಫ್ ಯೋಧರು ನಾಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‍ನತ್ತ ಸೇನಾ ರೈಲಿನಲ್ಲಿ ಪಶ್ಚಿಮ ಬಂಗಾಳದ ಬರ್ದಮಾನ್ ಮತ್ತು ಜಾರ್ಖಂಡ್ ಧಾನಬಾದ್‍ನಿಂದ ಯೋಧರ ತಂಡ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ರೈಲ್ವೆ ಪೆÇಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸೇನಾ ಯೋಧರು ರಜೆ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎಂದು ದಾಖಲಿಸಿರುವ ಬಗ್ಗೆ ವರದಿಯಾಗಿದೆ.

ಗೋಮಾಳದಲ್ಲಿ ಆಸ್ಪತ್ರೆ ನಿರ್ಮಿಸಬಹುದು

ಬೆಂಗಳೂರು, ಜೂ. 28: ರಾಜ್ಯ ಸರ್ಕಾರ ಜಾನುವಾರುಗಳ ಮೇವಿಗೆ ಮೀಸಲಿಟ್ಟಿರುವ ಗೋಮಾಳ ಭೂಮಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಗೋಮಾಳ ಭೂಮಿಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಆಸ್ಪತ್ರೆಯನ್ನು ಕಟ್ಟಿಸಿದರೆ ಅದಕ್ಕೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆರ್ ತಿಮ್ಮಸಂದ್ರ ಗ್ರಾಮದ ನಿವಾಸಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ವಿಭಾಗೀಯ ಪೀಠ, ಜಾನುವಾರುಗಳಿಗೆ ಮೇವು ಅತ್ಯಂತ ಅಗತ್ಯ, ಆದರೆ ಸಾರ್ವಜನಿಕರ ಆರೋಗ್ಯ ಕೂಡ ಇಲ್ಲಿ ಮುಖ್ಯವಾಗುತ್ತದೆ. ಸರಿಯಾದ ವ್ಯವಸ್ಥೆಯಿರುವ ಆಸ್ಪತ್ರೆಯಿದ್ದರೆ ಜನರಿಗೆ ಆರೋಗ್ಯ ಸೇವೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ, ಹಾಗೆಂದು ಜಾನುವಾರುಗಳ ಮೇವನ್ನು ಸಂಪೂರ್ಣವಾಗಿ ಕಸಿಯಬೇಕೆಂದು ಹೇಳುವದಿಲ್ಲ ಎಂದು ನ್ಯಾಯಾಲಯ ಅರ್ಜಿಯ ವಿಚಾರಣೆ ನಡೆಸಿ ಹೇಳಿದೆ.

ಟೋಪಿ ಧರಿಸಲು ಯೋಗಿ ನಿರಾಕರಣೆ

ಮಾಘರ್, ಜೂ. 28: ಉತ್ತರ ಪ್ರದೇಶದ ಮಾಘರ್‍ನಲ್ಲಿರುವ ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಂರ ಧರಿಸುವ ಉಣ್ಣೆಯ ಟೋಪಿ ಧರಿಸಲು ನಿರಾಕರಿಸಿದ್ದಾರೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಅಥವಾ ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ ಅಂತಹವರು ಇಂತಹ ಟೋಪಿ ಧರಿಸುತ್ತಿದ್ದರಂತೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಆದಿತ್ಯನಾಥ್ ಅವರಿಗೆ ಅಲ್ಲಿನ ಧರ್ಮಗುರುಗಳು ಟೋಪಿ ಧರಿಸಲು ಮುಂದಾದಾಗ ಅದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ನಿರಾಕರಿಸಿದ್ದಾರೆ. 2011ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಹಮದಾಬಾದಿನಲ್ಲಿ ಸದ್ಬಾವನಾ ಉಪವಾಸ ಸಂದರ್ಭ ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ್ದರು. ಆ ಟೋಪಿ ಐಕ್ಯತೆಯ ಸಂಕೇತವಾಗಿದ್ದರೆ ಮಹಾತ್ಮ ಗಾಂಧಿ ಏಕೆ ಅದನ್ನು ತೊಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೆ ನೀಡಿದ್ದರು.

ರೂ. 6.50 ಲಕ್ಷಗೆ ಕುಟುಂಬ ಮಾರಾಟ

ಕರ್ನೂಲ್, ಜೂ. 28: ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಯ್ಲಾಕುಂಟ್ಲ ಪಟ್ಟಣದ ಕುಡುಕನೊಬ್ಬ ಪತ್ನಿ, ಐವರು ಮಕ್ಕಳು ಸೇರಿದಂತೆ 6.5 ಲಕ್ಷ ರೂಪಾಯಿಗೆ ಇಡೀ ಕುಟುಂಬವನ್ನೇ ಮಾರಾಟ ಮಾಡಿದ್ದಾನೆ. ಈತನ ಪತ್ನಿ ವೆಂಕಟಮ್ಮ ನಾಂದ್ಯಾಲ್ ನಲ್ಲಿ ಜಿಲ್ಲಾ ಮಕ್ಕಳ ಅಭಿವೃದ್ದಿ ಮತ್ತು ರಕ್ಷಣಾ ತಂಡದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಜೂಜಾಟ ಮತ್ತು ಕುಡಿತಕ್ಕೆ ದಾಸನಾಗಿದ್ದ ಪಸುಪುಲೆಟ್ಟಿ ಮ್ಯಾಡಿಲೆಟಿ, ತನ್ನ 10 ವರ್ಷ ವಯಸ್ಸಿನ ಮಗಳನ್ನು ಪ್ರೌಢವಸ್ಥೆಗೆ ಬಂದಾಗ ಮದುವೆ ಮಾಡಿಸುವದಾಗಿ ಭರವಸೆ ನೀಡಿ ತನ್ನ ಕುಟುಂಬಸ್ಥರಿಗೆ 1.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಮಗಳ ಮಾರಾಟದಿಂದ ಬಂದ ಹಣವೆಲ್ಲಾ ಖರ್ಚಾದ ಬಳಿಕ ಆತನ ಹೆಂಡತಿ ಹಾಗೂ ನಾಲ್ಕು ಮಕ್ಕಳನ್ನು 5 ಲಕ್ಷ ರೂಪಾಯಿಗೆ ತನ್ನ ಸಹೋದರಿಗೆ ಮಾರಾಟ ಮಾಡಿದ್ದಾನೆ.

ಸ್ವಿಸ್ ಬ್ಯಾಂಕ್‍ನಲ್ಲಿ ಶೇ. 50 ಹಣ ಹೆಚ್ಚಳ

ಜ್ಯೂರಿಚ್, ಜೂ. 28: ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿ ಮೂಡಿಸುವಂತಹ ಸುದ್ದಿ ಇದು. ಹೌದು, ಅಚ್ಚರಿಯಾದರೂ ನಿಜ. 2017ರಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿರುವ ಭಾರತೀಯರ ಹಣ ಶೇ. 50 ರಷ್ಟು (7 ಸಾವಿರ ಕೋಟಿ) ಹೆಚ್ಚಳವಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್(ಎಸ್‍ಎನ್‍ಬಿ) ಬಿಡುಗಡೆ ಮಾಡಿರುವ ವಾರ್ಷಿಕ ದತ್ತಾಂಶಗಳಿಂದ ಬಹಿರಂಗವಾಗಿದೆ. 2017ರಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ. 3 ರಷ್ಟು (100 ಲಕ್ಷ ಕೋಟಿ ರೂಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ. 50 ರಷ್ಟು ಹೆಚ್ಚವಾಗಿದೆ ಎಂದು ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ತಿಳಿಸಿದೆ. ಸ್ವಿಸ್ ಬ್ಯಾಂಕ್‍ನಲ್ಲಿರುವ ಭಾರತೀಯರ ಹಣ ವಾಪಸ್ ತರುವ ಕೇಂದ್ರ ಸರ್ಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಭಾರತೀಯರ ಹಣ ಶೇ. 50 ರಷ್ಟ ಹೆಚ್ಚಳವಾಗಿರುವದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. 2016ರಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿರುವ ಭಾರತೀಯರ ಹಣ ಶೇ. 45 ರಷ್ಟು (ರೂ. 4,500 ಕೋಟಿ) ಕಡಿಮೆಯಾಗಿತ್ತು. ಆದರೆ 2017ನೇ ಸಾಲಿನಲ್ಲಿ ಭಾರತೀಯರ ಹಣ 999 ಮಿಲಿಯನ್ ಸ್ವಿಸ್ ಫ್ರಾನ್ಸ್ (6,891 ಕೋಟಿ) ಹೆಚ್ಚಳವಾಗಿದೆ ಎಂದು ಎಸ್‍ಎನ್‍ಬಿ ಡಾಟಾ ತಿಳಿಸಿದೆ.