ಸೋಮವಾರಪೇಟೆ, ಜೂ. 28: ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಂತರ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರಕಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನುಡಿದರು. ಸಮೀಪದ ಹಾನಗಲ್ಲು ಬಿಜೆಪಿ ಸ್ಥಾನೀಯ ಸಮಿತಿಯ ವತಿಯಿಂದ ಹಾನಗಲ್ಲು ಬಾಣೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ರಂಜನ್ ಮಾತನಾಡಿದರು.

ಜೆಡಿಎಸ್‍ನ ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭ ನೀಡಿದ ಯಾವದೇ ಭರವಸೆಗಳನ್ನು ಈಡೇರಿಸಿಲ್ಲ, ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ ಎಂದು ಜನರನ್ನು ನಂಬಿಸಿ ಇದೀಗ ಉಲ್ಟಾ ಹೊಡೆಯುತ್ತಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ತಿಂಗಳು ಕಳೆದರೂ ಇಂದಿಗೂ ಸರ್ಕಾರ ಕಾರ್ಯಾರಂಭ ಮಾಡಿಲ್ಲ ಎಂದು ರಂಜನ್ ಆರೋಪಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಯ ಪರ ಮಾತನಾಡದೇ ಇತರ ಪಕ್ಷದವರು ಜಾತಿಯನ್ನು ಎಳೆದು ತಂದಿದ್ದಕ್ಕೆ ಮತದಾರರು ಉತ್ತರಿಸಿದ್ದಾರೆ.

ತಾನು ಇದುವರೆಗೂ ಎಲ್ಲಿಯೂ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ ಎಂದು ರಂಜನ್ ನುಡಿದರು. ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ತಡೆಗೋಡೆ ಮತ್ತು ಕಾಂಕ್ರೀಟ್ ರಸ್ತೆ, ಹಾನಗಲ್ಲು ಬಾಣೆಯ ಸಮುದಾಯ ಭವನದಲ್ಲಿ ದಾಖಲಾತಿ ಒದಗಿಸುವದು, ಚಂದನಮಕ್ಕಿ ಗ್ರಾಮದ ಸಮುದಾಯ ಭವನಕ್ಕೆ ಅನುದಾನ, ಹಾನಗಲ್ಲು-ಹಾನಗಲ್ಲು ಶೆಟ್ಟಳ್ಳಿ-ಚಂದನಮಕ್ಕಿ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಬಿಜೆಪಿ ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಶ್ರೀ ಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಮಹಿಳಾ ಘಟಕದ ಸರಸ್ವತಿ, ಬಿಜೆಪಿ ಮುಖಂಡರಾದ ಯಡೂರು ರಘು, ಭಾನುಪ್ರಕಾಶ್, ಹಾನಗಲ್ಲು ಶೆಟ್ಟಳ್ಳಿಯ ಚಂದ್ರಕಾಂತ್ ಅಪ್ಪಚ್ಚು, ನಾಗೇಶ್ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.