ಮಡಿಕೇರಿ, ಜೂ. 27: ಮಡಿಕೇರಿ ನಗರದಲ್ಲಿ ಲಂಗು ಲಗಾಮು ಇಲ್ಲದಂತೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಒಳಚರಂಡಿ ಕೆಲಸ ಸಾಗಿದ್ದು, ಅಂದಾಜು ರೂ. 50 ಕೋಟಿ ಹಣ ಮಣ್ಣ ಪಾಲಾಗುತ್ತಿದ್ದರೆ; ಪ್ರಸಕ್ತ ಮಳೆಗಾಲದಲ್ಲಿ ಚರಂಡಿಗಳ ಮೂಲಕ ಹರಿಯಬೇಕಾದ ನೀರೆಲ್ಲ ರಾಜಬೀದಿಗಳಲ್ಲಿ ಹೋಗುವಂಥ ಸನ್ನಿವೇಶ ಎದುರಾಗಿದೆ.ಮಡಿಕೇರಿ ಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ವಾಹನಗಳ ಸಹಿತ ದಾರಿಹೋಕರು ಕೂಡ ಮಳೆಗಾಲದಲ್ಲಿ ತೆರಳಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು; ಹೊಂಡ - ಗುಂಡಿಗಳ ನಡುವೆ ಕೊಳಕು ನೀರು ರಸ್ತೆಗಳಲ್ಲಿ ನಿಲ್ಲತೊಡಗಿದೆ.ಇಂದು ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಯ ರಭಸಕ್ಕೆ ರಸ್ತೆಗಳಲ್ಲಿ ಹರಿಯುತ್ತಿದ್ದ ಕೊಳಕು ನೀರು ಅನೇಕ ಕಡೆಗಳಲ್ಲಿ ಮನೆಯಂಗಳಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದ ಕುರಿತು ಕೆಲವರು ಸಾರ್ವಜನಿಕರು ‘ಶಕ್ತಿ’ಯೊಂದಿಗೆ ದೂರಿಕೊಂಡಿದ್ದಾರೆ.

ಮಡಿಕೇರಿಯ ದೇಚೂರು, ಪುಟಾಣಿನಗರ, ಮ್ಯಾನ್ಸ್ ಕಾಂಪೌಂಡ್, ಪ್ರಕೃತಿ ಬಡಾವಣೆ ಮಲ್ಲಿಕಾರ್ಜುನಗರ, ಇಂದಿರಾನಗರ ಮುಂತಾದೆಡೆಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿದೆ ಇತ್ತ ನಗರಸಭೆ ಜನಪ್ರತಿನಿಧಿಗಳು ಚಳಿಬಿಟ್ಟು ತಮ್ಮ ತಮ್ಮ ವಾರ್ಡ್‍ಗಳನ್ನು ಗಮನಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಚುತ್ತಿರುವ ಕೊಳಕು : ಮಹದೇವಪೇಟೆ ಮುಖ್ಯ ರಸ್ತೆ, ಗಣಪತಿಬೀದಿ, ಮಾರುಕಟ್ಟೆ ಪ್ರದೇಶದ ಕೊಳಕು ನೀರು ರಸ್ತೆಗಳಲ್ಲೇ ಹರಿಯುತ್ತ ಅಂಗಡಿ ಮಳಿಗೆಗಳಿಗೆ ಧಾವಿಸುವ ಗ್ರಾಹಕರ ಸಹಿತ ದಾರಿ ಹೋಕರಿಗೆ ರಾಚುವಂತಾಗಿದೆ. ಪಾದಚಾರಿಗಳಿಗೆ ಇಲ್ಲಿ ನಡೆದಾಡಲು ಮಾರ್ಗವಿಲ್ಲದೆ ಕೊಳಕು ಹರಿಯುವಿಕೆ ನಡುವೆ ತಮ್ಮ ಹೆಜ್ಜೆ ಮೂಡಿಸುವ ದುಸ್ಥಿತಿ ಎದುರಾಗಿದೆ.

ಕೆರೆಯಾದ ಕಟ್ಟಡ : ಅಂದಾಜು ರೂ. 5 ಕೋಟಿ ವೆಚ್ಚದ ಮಡಿಕೇರಿ ಮಾರುಕಟ್ಟೆ ಸಂಕೀರ್ಣ ಉದ್ಘಾಟನೆಗೂ ಮುನ್ನ ಮಳೆಯಿಂದ ತೋಯ್ದು ಕೆರೆಯಂತೆ ನೀರು ನಿಲ್ಲುವ ದೃಶ್ಯ ಗೋಚರಿಸಿದೆ. ಈ ನೂತನ ಮಾರುಕಟ್ಟೆ ಸಂಕೀರ್ಣದ ಕೊಳಕು ನೀರು ಹೊರಹೋಗಲು ವ್ಯವಸ್ಥೆ ಯಿಲ್ಲದೆ ಇದನ್ನು ನೆಚ್ಚಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಿಗಳು ಆವರಣದೊಳಗೆ ಹೆಜ್ಜೆ ಇಡಲಾರದ ಪರಿಸ್ಥಿತಿ ಕಂಡುಬಂದಿದೆ.

ಒಂದೆಡೆ ಸಿಬ್ಬಂದಿಯ ಕೊರತೆ ನಡುವೆ

(ಮೊದಲ ಪುಟದಿಂದ) ಕಾರ್ಯನಿರತ ನಗರಸಭೆ ಆಯುಕ್ತರು ಹಾಗೂ ಕೈಬೆರಳೆಣಿಕೆಯಷ್ಟು ನೌಕರರು ಪರಿಸ್ಥಿತಿ ಎದುರಿಸಲು ಹೈರಾಣಾಗುತ್ತಿದ್ದರೆ, ಆಯಕಟ್ಟಿನಲ್ಲಿ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ಸಾರ್ವಜನಿಕ ಕುಂದುಕೊರತೆ ಬಗ್ಗೆ ನಿರ್ಲಕ್ಷ್ಯ ತಳೆದಿರುವಂತಿದೆ ಎಂಬ ಅಸಮಾಧಾನ ಕೇಳಿ ಬಂದಿದೆ.

ಈ ನಗರಸಭೆಯ ಒಳಚರಂಡಿ ಇತ್ಯಾದಿ ಕಾಮಗಾಗಿ ಬಗ್ಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು; ಕೇವಲ ಸರಕಾರಿ ಅನುದಾನದ ಲೆಕ್ಕಾಚಾರಾದಲ್ಲಿದ್ದು, ಯಾವದೇ ಕೆಲಸವನ್ನು ಪರಿಪೂರ್ಣಗೊಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ಅಸಮಾಧಾನ ಜನವಲಯದಲ್ಲಿದೆ.

ಕೇವಲ ಮೂರ್ನಾಲ್ಕು ಕಿ.ಮೀ. ವ್ಯಾಪ್ತಿಯ ಮಡಿಕೇರಿಯಂಥ ಪುಟ್ಟ ನಗರಸಭೆಯ ಆಡಳಿತ ಪ್ರದೇಶ ಜನಸಾಮಾನ್ಯರ ಭಾಷೆಯಲ್ಲಿ ‘ನರಕಸಭೆ’ ಎಂಬ ಟೀಕೆಗೆ ಒಳಗಾಗಿದ್ದರೆ; ನಮ್ಮ ಶಾಸಕರಾಗಲೀ; ಇತರ ಸದಸ್ಯರುಗಳಾಗಲೀ ಮಡಿಕೇರಿಯ ಅವ್ಯವಸ್ಥೆಗೆ ತಾವುಗಳು ಹೊಣೆಗಾರರಲ್ಲವೆಂಬಂತೆ ನಿಲುವ ತಳೆದಿರುವಂತಿದೆ. ಪರಿಣಾಮ ಜಿಲ್ಲಾ ಕೇಂದ್ರದತ್ತ ಮುಗಿಬೀಳುತ್ತಿರುವ ಪ್ರವಾಸಿಗರು ಒಂದೆಡೆಯಾದರೆ; ಇಲ್ಲಿ ಸೃಷ್ಟಿಯಾಗಿರುವ ಅವ್ಯವಸ್ಥೆ ಪರೋಕ್ಷವಾಗಿ ಇಲ್ಲಿನ ನಾಗರಿಕ ಸಮಾಜದೊಂದಿಗೆ; ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿರುವದು ದೌರ್ಭಾಗ್ಯವಷ್ಟೆ.

ಈ ಬಗ್ಗೆ ಸಂಬಂಧಪಟ್ಟವರು ದೃಢ ನಿರ್ಧಾರದೊಂದಿಗೆ ಮಡಿಕೇರಿ ನಗರದ ರಸ್ತೆ, ಒಳಚರಂಡಿ, ದಾರಿದೀಪ, ಕನಿಷ್ಟ ಮೂಲಭೂತ ಸೌಕರ್ಯಗಳೊಂದಿಗೆ ಮಳೆಗಾಲ ಎದುರಿಸಲು ಸಾಮೂಹಿಕ ಪ್ರಯತ್ನ ಮಾಡಬೇಕಿದೆ. ಅದು ಕರ್ತವ್ಯ ಕೂಡ ಎಂದು ನೆನಪಿಡಬೇಕಷ್ಟೆ.