ಚೆಟ್ಟಳ್ಳಿ, ಜೂ. 28: ವಿದ್ಯಾರ್ಥಿಗಳು ಒಳ್ಳೆಯ ನಾಗರಿಕ ರಾಗಲು ಮಾನವೀಯ ಮೌಲ್ಯಗಳನ್ನು ಶಿಕ್ಷಕರು ಮೊದಲು ಕಲಿಸಿ ಕೊಡಬೇಕೆಂದು ಚೆಟ್ಟಳ್ಳಿ ಪ್ರೌಢಶಾಲೆಯ ಮಂಗಳ ಸಭಾಂಗಣದಲ್ಲಿ ನಡೆದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟಾಟಾ ಕಂಪೆನಿಯ ನಿವೃತ್ತ ಇಂಜಿನಿಯರಾಗಿ ಸೇವೆ ಸಲ್ಲಿಸಿದಂತ ಬಿದ್ದಂಡ ಮಾದಯ್ಯ ತಿಳಿಸಿದರು.

ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ವರ್ತಮಾನ ಕಾಲದ ಅವಕಾಶಗಳನ್ನು ಸದ್ಬಳಕ್ಕೆ ಮಾಡಿಕೊಳ್ಳ ಬೇಕು. ಗುರುಗಳಿಗೆ ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಚೆಟ್ಟಳ್ಳಿ ಪ್ರೌಢಶಾಲೆಯ ಅಧ್ಯಕ್ಷ ಪೇರಿಯನ ಜಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಾಲೆಗೆ ಉತ್ತಮ ಫÀಲಿತಾಂಶ ಬರಲು ಕಾರಣರಾದ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.

ಶಾಲಾ ಸಂಚಾಲಕರಾದ ಮುಳ್ಳಂಡ ರತ್ತು ಚಂಗಪ್ಪ ಪ್ರಾಸ್ತಾವಿಕ ನುಡಿಯಲ್ಲಿ ಶಾಲೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿ ಉತ್ತಮ ಫಲಿತಾಂಶ ಬಂದಿರುವದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಹಳೆ ವಿದ್ಯಾರ್ಥಿ ಕೆ.ಆರ್ ವಾಸುದೇವು ಮಾತನಾಡಿ, ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಪಾಠ ಶಾಲೆ. ಜೀವಂತ ದೇವರೆನಿಸಿ ಕೊಂಡಿರುವ ಗುರು ಭಕ್ತಿಯ ಮಹತ್ವ, ಗುರುಗಳ ಶ್ರೇಷ್ಟತೆಯ ಬಗ್ಗೆ ತಿಳಿಸಿಕೊಟ್ಟರು. ಸೋಲು-ಗೆಲುವಿನ ಪಾಠ ಕಲಿಸುವದು. ಶಾಲೆಯ ಪರೀಕ್ಷೆಗಿಂತ ಜೀವನದ ಪರೀಕ್ಷೆ ದೊಡ್ಡದೆಂದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಚೆಟ್ಟಳ್ಳಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದಿರುವದಕ್ಕೆ ಶಾಲಾ ಆಡಳಿತ ಮಂಡಳಿ ವತಿಯಿಂದ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಶಾಲಾ ಮುಖ್ಯ ಶಿಕ್ಷಕಿ ಕೆ. ತಿಲಕ ಮಾತನಾಡಿ, ಸನ್ಮಾನಿಸಿದ ಶಾಲಾ ಆಡಳಿತ ಮಂಡಳಿಗೆ ವಂದಿಸಿ ತಮ್ಮ ಶಾಲಾ ಆನುಭವದ ನುಡಿಗಳ ನ್ನಾಡಿದರು. ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆಸಲ್ಲಿಸಿದ ದಿವಂಗತ ಪುತ್ತರಿರ ಸೋಮಯ್ಯ ಅವರ ಜ್ಞಾಪಕಾರ್ಥವಾಗಿ ಮಗಳು ನೆಲ್ಲಮಕ್ಕಡ ಪವಿತ ತಿಮ್ಮಯ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದಂತ ನಗದು ಬಹುಮಾನವನ್ನು ನೀಡಲಾಯಿತು.

ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಪುತ್ತರಿರ ಕಾಶಿ ಸುಬ್ಬಯ್ಯ ಸ್ವಾಗತಿಸಿ, ನಿರ್ದೇಶಕ ದಂಬೆಕೊಡಿ ಹರೀಶ್ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.