ಸೋಮವಾರಪೇಟೆ, ಜೂ. 28: ಕಳೆದ ತಾ. 22ರಂದು ಸಂಜೆ 4 ಗಂಟೆ ಸುಮಾರಿಗೆ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಹೋದ ಯುವಕ ಮನೋಜ್‍ನ ಶವ ಏಳು ದಿನವಾದರೂ ಪತ್ತೆಯಾಗಿಲ್ಲ.

ತಾ.25ರವರೆಗೂ ಪೊಲೀಸರು ಹಾಗೂ ನುರಿತ ಈಜುಗಾರರು ಕಾರ್ಯಾಚರಣೆ ನಡೆಸಿದ್ದರೂ ಮೃತದೇಹವನ್ನು ಕಂಡುಹಿಡಿಯುವ ಕಾರ್ಯದಲ್ಲಿ ಸಫಲತೆ ಕಾಣಲು ಸಾಧ್ಯವಾಗಿಲ್ಲ. ಮುಳುಗುತಜ್ಞರಾದ ಕುಮಾರಳ್ಳಿ ಗ್ರಾಮದ ಪ್ರಸನ್ನ, ಹುಣಸೂರಿನ ಫಕೀರಪ್ಪ, ಗರಗಂದೂರಿನ ಲತೀಫ್, ಕುಶಾಲನಗರದ ರಾಮಕೃಷ್ಣ ಸೇರಿದಂತೆ ಇತರರು ಜಲಪಾತದ ಬಳಿ ಶೋಧ ಕಾರ್ಯ ನಡೆಸಿದರೂ ಸಣ್ಣಕುರುಹು ಸಹ ಲಭ್ಯವಾಗಿಲ್ಲ.

ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ, ಎಎಸ್‍ಐ ಪುಟ್ಟಪ್ಪ ಸೇರಿದಂತೆ ಸಿಬ್ಬಂದಿಗಳು ಜಲಪಾತದ ಬಳಿ ತೆರಳಿ ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದು, ಕಳೆದೆರಡು ದಿನಗಳಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಜಲಪಾತದುದ್ದಕ್ಕೂ ಕಲ್ಲುಬಂಡೆಗಳ ಕಂದಕವಿದ್ದು, ನೀರಿನ ಹರಿವು ಕಡಿಮೆಯಾಗದ ಹೊರತು ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.

ನೀರಿನ ಹರಿವು ಕಡಿಮೆಯಾದರೆ ಕಂದಕದೊಳಗೆ ನುಗ್ಗಿ ಹುಡುಕಾಟ ನಡೆಸಬಹುದು. ಆದರೆ ಭಾರೀ ಮಳೆ ಹಾಗೂ ದಟ್ಟ ಮಂಜಿನ ಕಾರಣ ನೀರಿನೊಳಗೆ ಇಳಿದು ಹುಡುಕಾಟ ನಡೆಸಲು ಅಸಾಧ್ಯವಾಗಿದೆ ಎಂದು ಮುಳುಗುತಜ್ಞರು ಅಭಿಪ್ರಾಯಿಸಿದ್ದಾರೆ. ಜಲಪಾತದೊಳಗೆ ಶೋಧಕಾರ್ಯ ನಡೆಸಿದರೂ ಫಲ ಕಾಣುವದು ಸಂಶಯ. ಏಳು ದಿನಗಳಾದರೂ ಮೃತದೇಹ ಅದೇ ಸ್ಥಳದಲ್ಲಿ ಇರುವ ಬಗ್ಗೆಯೂ ಶಂಕೆ ಮೂಡಿದೆ ಎಂದು ಪೊಲೀಸ್ ಮೂಲಗಳು ಅಭಿಪ್ರಾಯಿಸಿದ್ದರೂ, ದಿನನಿತ್ಯ ಜಲಪಾತಕ್ಕೆ ಎಡತಾಕುವದನ್ನು ನಿಲ್ಲಿಸಿಲ್ಲ.

ಹರಿದಾಡಿದ ಸುಳ್ಳುಸುದ್ದಿ: ಜಲಪಾತದಲ್ಲಿ ಕಾಣೆಯಾಗಿದ್ದ ಯುವಕನ ಮೃತದೇಹ ಮಲ್ಲಳ್ಳಿ ಗ್ರಾಮದಿಂದ ಕೆಲ ದೂರದಲ್ಲಿರುವ ಗದ್ದೆ ಪ್ರದೇಶದಲ್ಲಿ ಗೋಚರವಾಗಿದೆ ಎಂಬ ಸುದ್ದಿ ಇಂದು ಬೆಳಗ್ಗಿನಿಂದಲೇ ಹಲವರ ವಾಟ್ಸಪ್‍ನಲ್ಲಿ ಹರಿದಾಡಿತು.

ಈ ಸುದ್ದಿಯ ಬೆನ್ನುಹತ್ತಿ ಸೋಮವಾರಪೇಟೆ ಪೊಲೀಸ್ ಠಾಣೆಯ ಎಎಸ್‍ಐ ಪುಟ್ಟಪ್ಪ ಸೇರಿದಂತೆ ಸಿಬ್ಬಂದಿಗಳು ಇಂದು ಬೆಳಗ್ಗೆಯೇ ಮಲ್ಲಳ್ಳಿಗೆ ತೆರಳಿದರು. ಗದ್ದೆಯಲ್ಲಿ ಬಿಳಿ ಬಣ್ಣದ ವಸ್ತು ಇರುವದನ್ನು ದೂರದಿಂದಲೇ ಗಮನಿಸಿದ ಸ್ಥಳೀಯರು, ಅದನ್ನೇ ಮೃತದೇಹವೆಂದು ಭಾವಿಸಿ ಈ ರೀತಿಯ ಸುದ್ದಿ ಹಬ್ಬಿಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಬಾಳೆ ದಿಂಡು ಎಂಬದು ಖಚಿತವಾಗಿದ್ದು, ನಂತರ ವಾಪಸ್ ಠಾಣೆಗೆ ಆಗಮಿಸಿದರು.